ಮಡಿಕೇರಿ, ಜೂ. 28: ಬಲಿಷ್ಠ ಭಾರತದ ಸಲುವಾಗಿ ಬಿಜೆಪಿಯು ಸದಸ್ಯತ್ವ ಅಭಿಯಾನ ಹಮ್ಮಿ ಕೊಂಡಿದ್ದು, ಕೊಡಗು ಜಿಲ್ಲೆಯಲ್ಲಿ 25 ಸಾವಿರ ಯುವ ಮತದಾರರನ್ನು ಪಕ್ಷದ ಕಾರ್ಯಕರ್ತರು ನೋಂದಾ ಯಿಸಬೇಕೆಂದು ಚಿಕ್ಕಮಗಳೂರು ಶಾಸಕ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕರೆ ನೀಡಿದರು. ಬಿಜೆಪಿ ದೇಶಭಕ್ತಿ ಯೊಂದಿಗೆ ವೈಚಾರಿಕ ಸಿದ್ಧಾಂತದ ಪಕ್ಷವಾಗಿದ್ದು, ಯಾವದೇ ವರ್ಗದ ವಿರೋಧಿಯಲ್ಲ ಎಂದು ಘೋಷಿಸಿದರು. ನಗರದ ಬಾಲಭವನದಲ್ಲಿ ಆಯೋಜಿಸಿದ್ದ ‘ಸಾಥ್ ಆಯೆಂ ದೇಶ್ ಬನಾಯೇಂ’ ಸಂದೇಶದ ಸದಸ್ಯತ್ವ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಬಿಜೆಪಿಗೆ ಯಾವದೇ ಶ್ರೀಮಂತ ಪರಂಪರೆಯಿಲ್ಲದೆ; ಕಾರ್ಯಕರ್ತರ ಮುಖಾಂತರ ರಾಷ್ಟ್ರೀಯ ವಿಚಾರಗಳನ್ನು ಮೈಗೂಡಿಸಿಕೊಂಡು ಬೆಳೆದ ಪಕ್ಷವೆಂದು ನೆನಪಿಸಿದ ಅವರು, ಮೂರು ದಶಕಗಳ ಹಿಂದೆ ದೇಶದ ಸಂಸತ್ತಿನಲ್ಲಿ ಇಬ್ಬರು ಪ್ರತಿನಿಧಿಗಳು ಹಾಗೂ ಕರ್ನಾಟಕ ವಿಧಾನ ಸಭೆಯಲ್ಲಿ ಇಬ್ಬರು ಪ್ರತಿನಿಧಿಗಳಿದ್ದು, ವಿರೋಧಿಗಳಿಂದ ಅವಮಾನಕರ ಟೀಕೆಗಳಿಗೆ ಗುರಿಯಾಗಿದ್ದನ್ನು ಬೊಟ್ಟು ಮಾಡಿದರು. ಅಂದು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಪಕ್ಷ ಸಂಘಟನೆಯೊಂದಿಗೆ ಭವಿಷ್ಯದಲ್ಲಿ ಪ್ರಧಾನಿಯಾದರೆ, ಇಂದು ದೇಶದಲ್ಲೇ ಬಲಿಷ್ಠ ರಾಜಕೀಯ ಶಕ್ತಿಯಾಗಿರುವ ಪಕ್ಷ; ಪ್ರಧಾನಿ ಮೋದಿ ನಾಯಕತ್ವದಡಿ 225 ಲೋಕಸಭಾ ಸ್ಥಾನಗಳಲ್ಲಿ ಶೇ. 50ಕ್ಕೂ ಅಧಿಕ ಮತಗಳಿಸಿದ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾರ್ನುಡಿದರು.
(ಮೊದಲ ಪುಟದಿಂದ) ಅಂದು ಬಿಜೆಪಿಯನ್ನು ಗೇಲಿ ಮಾಡುತ್ತಿದ್ದ ಕಾಂಗ್ರೆಸ್ ಇಂದು 17 ರಾಜ್ಯಗಳಲ್ಲಿ ಶೂನ್ಯ ಸಂಪಾದನೆಯಲ್ಲಿದೆ ಎಂದ ಅವರು, ಬಿಜೆಪಿ ಶೂನ್ಯ ಸಂಪಾದನೆಯ ಮೂರು ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ, ತಮಿಳುನಾಡಿನ ಸಹಿತ ಪಶ್ಚಿಮ ಬಂಗಾಳದಲ್ಲಿ ಮುಂದೆ ಅಧಿಕಾರ ಹಿಡಿಯಲು ಸಂಕಲ್ಪಿಸಿರುವದಾಗಿ ಸಾರಿದರು. ಜಗತ್ತಿನ ಬಲಿಷ್ಠ ರಾಜಕೀಯ ಶಕ್ತಿಯಾಗಿರುವ ಬಿಜೆಪಿ ಇತಹಾಸದಿಂದ ಪಾಠ ಕಲಿತಿದ್ದು, 303 ಸಂಸದರನ್ನು ಹೊಂದಿದ್ದರೂ, ಪಕ್ಷ ಸಂಘಟನೆಯಿಂದ ವಿಮುಖರಾಗದೆ ಕಾರ್ಯನಿರ್ವಹಿಸುವದಾಗಿ ನುಡಿದರು.
ಉತ್ಪಾದನಾ ಘಟಕದಂತೆ : ಯಾವದೇ ಉತ್ಪನ್ನ ಚೆನ್ನಾಗಿರಬೇಕಾದರೆ ಉತ್ಪಾದನಾ ಘಟಕ ಚೆನ್ನಾಗಿರಬೇಕೆಂದು ಉದಾಹರಿಸಿದ ಅವರು, ಬಿಜೆಪಿ ಅಂಥ ಉತ್ತಮ್ಮ ಕಾರ್ಯಕರ್ತರನ್ನು ತಯಾರಿಸುವ ಪಕ್ಷವಾಗಿದ್ದು, ಅಟಲ್ಜೀ ಬಳಿಕ ಇಂದು ಮೋದಿಯಂತೆ ಮುಂದೆ ಮತ್ತಷ್ಟು ಉತ್ತಮ ನಾಯಕರು ಬರಲಿದ್ದಾರೆ ಎಂದು ವಿಶ್ವಾಸದ ನುಡಿಯಾಡಿದರು. ಈ ದಿಸೆಯಲ್ಲಿ ಪ್ರತಿ ಬೂತ್ ಮಟ್ಟದಿಂದ ಎಲ್ಲ ವರ್ಗದ ಮತದಾರರನ್ನು ಬಿಜೆಪಿ ಸದಸ್ಯರನ್ನಾಗಿ ನೋಂದಾಯಿಸುವದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಹಾದಿಯಲ್ಲಿ ಕಾರ್ಯಕರ್ತರು ಶ್ರಮಿಸಬೇಕೆಂದು ತಿಳಿ ಹೇಳಿದರು.
ದೇಶದ್ರೋಹಿ ಸಹಿಸಲ್ಲ : ಬಿಜೆಪಿ ಮತ್ತು ಪರಿವಾರ ಸಂಘಟನೆಗಳು ಯಾವದೇ ದೇಶದ್ರೋಹಿ ಸಹಿಸುವದಿಲ್ಲವೆಂದು ಘೋಷಿಸಿದ ಅವರು, ಆ ಮಾತ್ರಕ್ಕೆ ಅಲ್ಪಸಂಖ್ಯಾತರ ಸಹಿತಿ ಯಾವದೇ ದೇಶಭಕ್ತ ಜನಾಂಗದ ವಿರೋಧಿ ಅಲ್ಲವೆಂದು ಮಾರ್ನುಡಿದರು. ಬದಲಾಗಿ ಭಾರತೀಯ ನಾಗರಿಕ ಕಾನೂನನ್ನು ವೈಯಕ್ತಿಕ ಲಾಭಕ್ಕಾಗಿ ಬೆಂಬಲಿಸುತ್ತಾ, ಅಪರಾಧಗಳನ್ನು ಎಸಗುವ ವೇಳೆ ಅದನ್ನು ಧಿಕ್ಕರಿಸಿ ಪ್ರತ್ಯೇಕ ಶೆರಿಯತ್ ಎಂದರೆ ಸಹಿಸಲು ಸಾಧ್ಯವಿಲ್ಲವೆಂದು ಸೂಚ್ಯವಾಗಿ ನುಡಿದರು.
ಭಾರತದ ಅವಿಭಾಜ್ಯ ಅಂಗ : ಕಾಶ್ಮೀರ ಅಂದು - ಇಂದು ಮುಂದೆಯೂ ಭಾರತದ ಅವಿಭಾಜ್ಯ ಅಂಗವೆಂದು ಉಲ್ಲೇಖಿಸಿದ ಸಿ.ಟಿ. ರವಿ, ದೇಶದ್ರೋಹಿ ಮಾನಸಿಕತೆಯ ಯಾರನ್ನೂ ಸಹಿಸಲಾಗದು ಎಂದರಲ್ಲದೆ, ಭಾರತಾಂಭೆಗೆ ಜೈಕಾರ ಮೊಳಗಿಸುತ್ತ ನಿರಂತರ ಹಿಂಸೆಯ ವಿರುದ್ಧ ಧ್ವನಿಯೆತ್ತುತ್ತಾ ಅಹಿಂಸೆಯನ್ನು ಪ್ರತಿಪಾದಿಸಿದವರು ನಾವೆಂದು ಸಮರ್ಥಿಸಿದರು. ಬದಲಾಗಿ ರಾಷ್ಟ್ರೀಯ ಮೌಲ್ಯಗಳಿಗಾಗಿ ಮತ್ತು ಪರಿವಾರದ ಕಾರ್ಯಕರ್ತರೇ ಬಲಿದಾನ ಗೈದಿರುವದಾಗಿ ಮೆಲುಕು ಹಾಕಿದರು. ಭಾರತದಲ್ಲಿ ಇಂದು ಮೋದಿ ನಾಯಕತ್ವದ ಬಲಿಷ್ಠ ಸರಕಾರದೊಂದಿಗೆ ಬಲಿಷ್ಠ ಸಂಘಟನೆ ಇರುವ ಮಾತ್ರದಿಂದ ವಿರೋಧಿಗಳು ತಣ್ಣಗಾಗುವಂತಾಗಿದೆ ಎಂದು ಅಭಿಪ್ರಾಯಪಟ್ಟರು. ಈ ದಿಸೆಯಲ್ಲಿ ಪಕ್ಷ ಸಂಘಟನೆ ಹಾಗೂ ಹೆಚ್ಚಿನ ಸದಸ್ಯತ್ವ ನೋಂದಾವಣೆ ಅವಶ್ಯಕವೆಂದು ಅವರು ಪ್ರತಿಪಾದಿಸಿದರು.
ಮೈಮರೆಯದಿರಲು ಕರೆ : ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಶಾಸಕತ್ರಯರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಎಂ.ಪಿ. ಸುನಿಲ್ ಸುಬ್ರಮಣಿ, ರಾಜ್ಯ ಪ್ರಮುಖರಾದ ಉದಯಕುಮಾರ್ ಶೆಟ್ಟಿ, ರಾಜೇಂದ್ರ, ಮನುಮುತ್ತಪ್ಪ ಮೊದಲಾದವರು ಮಾತನಾಡಿದರು. ವೇದಿಕೆಯಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಪ್ರಮುಖರಾದ ಎಸ್.ಜಿ. ಮೇದಪ್ಪ, ಸುಜಾಕುಶಾಲಪ್ಪ, ರವಿ ಕುಶಾಲಪ್ಪ, ಲೋಕೇಶ್ ಕುಮಾರ್, ಕಾಂತಿ ಸತೀಶ್, ರೀನಾ ಪ್ರಕಾಶ್ ಮೊದಲಾದವರು ಹಾಜರಿದ್ದರು. ಅನಿತಾ ಪೂವಯ್ಯ ಪ್ರಾರ್ಥನೆಯೊಂದಿಗೆ ರಾಬಿನ್ ದೇವಯ್ಯ ಸ್ವಾಗತಿಸಿ, ಅರುಣ್ಕುಮಾರ್ ನಿರೂಪಿಸಿದರು. ಬಿಜೆಪಿಯ ವಿವಿಧ ಘಟಕಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಮಂಡಲ ಪ್ರಮುಖರ ಸಹಿತ ಆಹ್ವಾನಿತ ಕಾರ್ಯಕರ್ತರು ಪಾಲ್ಗೊಂಡಿದ್ದರು.