ಮಡಿಕೇರಿ, ಜೂ. 28: ಕೊಡಗು ಜಿಲ್ಲೆಯ ಕಾಮಗಾರಿಗಳನ್ನು ಹೊರ ಜಿಲ್ಲೆಯ ಗುತ್ತಿಗೆದಾರರನ್ನು ಕರೆ ತಂದು ನಿರ್ವಹಿಸುತ್ತಿರುವ ಉಸ್ತುವಾರಿ ಸಚಿವರ ವಿರುದ್ಧ ಹೋರಾಟ ಅನಿವಾರ್ಯ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಎಚ್ಚರಿಸಿದರು. ಇಂದು ಬಾಲಭವನದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹೊರಗಿನ ಗುತ್ತಿಗೆದಾರರಿಗೆ ಕೆಲಸ ಕೊಟ್ಟರೆ ಸ್ಥಳೀಯ ಗುತ್ತಿಗೆದಾರರ ಪಾಡೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.ಒಂದೆಡೆ ಮನಬಂದಂತೆ ಮುಖ್ಯಮಂತ್ರಿ ಮಾತನಾಡುತ್ತಿದ್ದರೆ; ಈ ಜಿಲ್ಲೆಯ ಮಂತ್ರಿ ಕೆ.ಆರ್. ನಗರದ ವ್ಯಕ್ತಿಗಳನ್ನು ಕರೆ ತಂದು ಕೆಲಸ ಮಾಡಿಸುತ್ತಿದ್ದಾರೆ; ಇಂತಹ ಮಂತ್ರಿ ವಿರುದ್ಧ ಹೋರಾಟ ಹಮ್ಮಿಕೊಳ್ಳಬೇಕೆಂದು ಮಾರ್ನುಡಿದರು. ರಾಜ್ಯದ ಮುಖ್ಯಮಂತ್ರಿ ಈಗಾಗಲೇ ಜನತೆಯ ಆಕ್ರೋಶ ಎದುರಿಸುತ್ತಿದ್ದು; ಡಿಸೆಂಬರ್ ವೇಳೆಗೆ ಜೆಡಿಎಸ್ - ಕಾಂಗ್ರೆಸ್ ಕಿತ್ತಾಟದಿಂದ ರಾಜ್ಯ ಸರಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದರು.
ಹಣ ಎಲ್ಲಿಟ್ಟಿಯಪ್ಪಾ?: ಶಾಸಕ ಅಪ್ಪಚ್ಚು ರಂಜನ್ ಮಾತಿನಿಂದ ಪ್ರೇರಣೆ ಪಡೆದ ಇನ್ನೋರ್ವ ಶಾಸಕ ಸಿ.ಟಿ. ರವಿ ‘ಇದುವರೆಗೆ ನಿಖಿಲ್ ಎಲ್ಲಿದ್ದಿಯಪ್ಪಾ? ಎಂದರೆ ಮುಂದಿನ ದಿನಗಳಲ್ಲಿ ಕೊಡಗಿನ ಸಂತ್ರಸ್ತರಿಗಾಗಿ ಕೇಂದ್ರ ಸರಕಾರ ಬಿಡುಗಡೆಗೊಳಿಸಿರುವ ಹಣ ಮತ್ತು ದಾನಿಗಳಿಂದ ನೀಡಿರುವ ದೇಣಿಗೆ ಹಣ ಎಲ್ಲಿಟ್ಟಿಯಪ್ಪಾ ಕುಮಾರಸ್ವಾಮಿ’ ಎಂದು ಕೇಳಬೇಕಾದೀತು ಎಂದು ಮಾತಿನ ನಡುವೆ ಚಟಾಕಿ ಹಾರಿಸಿದರು.
ಕೊಡಗಿಗಾಗಿ ಇಷ್ಟೊಂದು ಹಣ ಸಂಗ್ರಹವಾಗಿದ್ದರೂ; ಯಾವ ಸಂತ್ರಸ್ತರಿಗೆ ಸೂಕ್ತ ಪರಿಹಾರ, ರೈತರಿಗೆ ಸಹಾಯ; ನೊಂದವರಿಗೆ ಮನೆ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಮಾತು ಮುಂದುವರೆಸಿದ ಶಾಸಕ ಅಪ್ಪಚ್ಚುರಂಜನ್, ಹೀಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದರು.
ಯಾರಪ್ಪನ ಮನೆಗೆ : ಪ್ರಾಕೃತಿಕ ತೊಂದರೆಗೆ ಸಿಲುಕಿರುವ ಗ್ರಾಮಸ್ಥರಿಗೆ ಆಯ ಭೂಕುಸಿತ ಪ್ರದೇಶಗಳನ್ನು ತೊರೆಯುವಂತೆ ಆದೇಶಿಸಲಾಗುತ್ತಿದ್ದು, ಇವರೆಲ್ಲ ‘ಯಾರಪ್ಪನ ಮನೆಗೆ ಹೋಗಬೇಕು?’ ಎಂದು ಖಾರವಾಗಿ ಪ್ರಶ್ನಿಸಿದ ಅವರು; ಐಎಂಎ ಹಗರಣದ ಕಳ್ಳನಿಗೆ ಈ ರಾಜ್ಯದ ಮುಖ್ಯಮಂತ್ರಿ ಬಾಯಿಗೆ ತುತ್ತು ತಿನ್ನಿಸುತ್ತಾರೆಂದು ವಾಗ್ದಾಳಿ ನಡೆಸಿದರು.
(ಮೊದಲ ಪುಟದಿಂದ)
ಸಿಬಿಐ ತನಿಖೆಯಾಗಲಿ : ಮುಗ್ಧ ಜನರಿಗೆ ಕೋಟಿ ಕೋಟಿ ವಂಚಿಸಿರುವ ಕಳ್ಳರೊಂದಿಗೆ ಯಾರ್ಯಾರಿಗೆ ನಂಟಿದೆ ಎಂದು ಬಹಿರಂಗವಾಗಬೇಕಾದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಪ್ರಧಾನಿ ಮಾದರಿ : ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಪರೋಕ್ಷವಾಗಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ವಿರುದ್ಧ ಕುಟುಕುತ್ತಾ; ದೊಡ್ಡಗೌಡ, ಚಿಕ್ಕಗೌಡ, ಮರಿಗೌಡರು ಸೋಲಿನ ಹತಾಶೆಯಿಂದ ಮನಬಂದಂತೆ ಮಾತನಾಡುತ್ತಿದ್ದು, ಈ ಸರಕಾರಕ್ಕೆ ಉಳಿಗಾಲವಿಲ್ಲವೆಂದು ವ್ಯಾಖ್ಯಾನಿಸಿದರು.,
ಕನಸಿನಲ್ಲೂ ಬಿಜೆಪಿ : ಮಾಜಿ ಪ್ರಧಾನಿ, ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಚುನಾವಣಾ ಸೋಲಿನ ಹತಾಶೆಯಿಂದ ಕನಸಿನಲ್ಲೂ ಬಿಜೆಪಿ ಕುರಿತು ಕನವರಿಸುತ್ತಾರೆಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತಿನ ಚಾಟಿ ಬೀಸಿದರು.
ಪ್ರತಿಧ್ವನಿ
* ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆ ಎಂಬಂತೆ ಕೇಂದ್ರದ ಅನುದಾನದಿಂದ ಜಾರಿಗೊಂಡ ಯೋಜನೆಗಳನ್ನು; ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ; ಟಿಪ್ಪು ಜಯಂತಿ, ಸಾಧಿ ಭಾಗ್ಯ ಹೆಸರಿನಲ್ಲಿ ಜಾತಿ ರಾಜಕಾರಣದೊಂದಿಗೆ ಗಲಭೆ ಸೃಷ್ಟಿಸಿ ಸಮಾಜ ಒಡೆದವರು ಇವರು. ಜನ ಚುನಾವಣೆಯಲ್ಲಿ ಹೀನಾಯ ಸೋಲುಣಿಸಿದರೂ; ಅದೃಷ್ಟದ ಆಟದಿಂದ ಸರಕಾರ ನಡೆಸುತ್ತಿದ್ದಾರೆ. ಇಂತಹವರಿಗೆ ಪ್ರಧಾನಿ ಮೋದಿ ಕುರಿತು ಮಾತನಾಡಲು ನಾಚಿಕೆಯಾಗಬೇಕು.
- ಸಿ.ಟಿ. ರವಿ, ಬಿಜೆಪಿ ನಾಯಕ
* ಬಿಜೆಪಿ ಒಂದು ಸ್ಥಾನ ಗೆಲ್ಲದ ಕೇರಳಕ್ಕೆ ಭೇಟಿ ನೀಡುವಾಗ ಪ್ರಧಾನಿ ಮೋದಿ; ಆ ರಾಜ್ಯದ ಸಮಗ್ರ ಅಭಿವೃದ್ಧಿಗೆ ನೆರವು ಪ್ರಕಟಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಓಟಿನ ರಾಜಕಾರಣ ಮಾತನಾಡುತ್ತಾ ಗ್ರಾಮ ವಾಸ್ತವ್ಯದ ನಾಟಕವಾಡುತ್ತಿದ್ದಾರೆ. ಜನತೆ ಅಹವಾಲು ಹೇಳಿದರೆ; ಓಟು ನೀಡಿದ ಮೋದಿಗೆ ಕೇಳಿ ಎನ್ನುತ್ತಾರೆ ಇದು ವಿಪರ್ಯಾಸ.
- ಎಂ.ಪಿ. ಸುನಿಲ್ ಸುಬ್ರಮಣಿ, ಎಂಎಲ್‍ಸಿ
* ಬಿಜೆಪಿ ಡಿಎನ್‍ಎಯೊಂದಿಗೆ ಶ್ರೀಮಂತಿಕೆಯಿಂದ ಬೆಳೆದ ರಾಜಕೀಯ ಪಕ್ಷವಲ್ಲ; ಬದಲಾಗಿ ಕಾರ್ಯಕರ್ತರ ಪರಿಶ್ರಮದೊಂದಿಗೆ ತಳಮಟ್ಟದಿಂದ ಕಟ್ಟಿ ಬೆಳೆದ ಪಾರ್ಟಿ, ಅಧಿಕಾರಕ್ಕಾಗಿ ಎಂದೂ ಯಾರನ್ನೂ ಒಡೆದು ಆಳುವ ಕೆಲಸ ಮಾಡಿಲ್ಲ, ಹಾಗಾಗಿಯೇ ಸಮಾನ ನಾಗರಿಕ ಸಂಹಿತೆ ಕೇಳುತ್ತಿದ್ದೇವೆ.
- ಸಿ.ಟಿ. ರವಿ, ಶಾಸಕರು
* ಮಾಜಿ ಪ್ರಧಾನಿ ದೇವೇಗೌಡರು ಸ್ಥಾನ ಗೌರವ ಮರೆತು; ಚುನಾವಣೆ ಮುಗಿದ ಬಳಿಕವೂ ಸೋಲಿನ ಹತಾಶೆಯಿಂದ ಮತ್ತೆ ಚುನಾವಣೆಯ ಮಾತನಾಡುತ್ತಿದ್ದಾರೆ; ನೆಲಕಚ್ಚಿರುವ ಕಾಂಗ್ರೆಸ್ಸಿಗರಿಗೂ ಏನೂ ತೋಚದಾಗಿದೆ. ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಮೈ ಮರೆಯದೆ ಪಕ್ಷ ಸಂಘಟನೆಗಾಗಿ ಶ್ರಮಿಸಬೇಕು.
- ಕೆ.ಜಿ. ಬೋಪಯ್ಯ, ಶಾಸಕರು
* ಅಂದು ಚಿಕ್ಕಮಗಳೂರಿನಿಂದ ಗೆದ್ದಿದ್ದ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಕ್ಷೇತ್ರ ಇಂದು ಬಿಜೆಪಿಯದ್ದು, ಇಂದು ವಯನಾಡಿನಿಂದ ಗೆದ್ದಿರುವ ರಾಹುಲ್ ಗಾಂಧಿ ಕ್ಷೇತ್ರ ಭವಿಷ್ಯದಲ್ಲಿ ಬಿಜೆಪಿಯದ್ದು ಆಗುವಂಥದ್ದೇ.
- ಸಿ.ಟಿ. ರವಿ, ಶಾಸಕರು