ಕಳೆದ 4 ವರ್ಷಗಳಲ್ಲಿ 3 ವರ್ಷ ಬರಗಾಲ ಮತ್ತು ಕಳೆದ ನಾಲ್ಕನೇ ವರ್ಷ ಅತೀವೃಷ್ಟಿಯಿಂದ ಹಾಗೂ 40 ವರ್ಷದಲ್ಲೇ ಅತೀ ಕಡಿಮೆ ಬೆಲೆಯಿಂದ ತತ್ತರಿಸಿರುವ ಕಾಫಿ ಬೆಳೆಗಾರರಿಗೆ 31.12.2018 ರವರೆಗೆ ಬಾಕಿ ಇರುವ ಸಾಲ ಮತ್ತು ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡುವುದು. ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆಯುವ ಬೆಳೆಗಾರರಿಗೆ ಶೇ. 3ರ ಬಡ್ಡಿ ದರದಲ್ಲ್ಲಿ ಸಾಲ ನೀಡುವುದು. ಡಾ|| ಸ್ವಾಮಿನಾಥನ್ ವರಧಿಯಂತೆ ಕಾಫಿ ಮತ್ತು ಕಾಳುಮೆಣಸಿಗೆ ಕನಿಷ್ಟ ಬೆಂಬಲ ಬೆಲೆ ನಿಗಧಿ ಪಡಿಸುವುದು. ಕಾಫಿ ಉದ್ಯಮಕ್ಕೆ ಸಂಬಂಧಿಸಿದ 7ಬಿ (ಸೆಂಟ್ರಲ್ ಬೋರ್ಡ್ ಡೈರೆಕ್ಟ್ ಟ್ಯಾಕ್ಸ್) ನ್ನು ತೆಗೆದು ಹಾಕಬೇಕು. ಭಾರತದಲ್ಲಿ ಶೇ. 98.5 ರಷ್ಟು ಸಣ್ಣ ಕಾಫಿ ಹಿಡುವಳಿದಾರರಾಗಿದ್ದು, 7ಬಿ ಕಾರಣದಿಂದಾಗಿ ಹಲ್ಲಿಂಗ್ ಮತ್ತು ಗ್ರೇಡಿಂಗ್ ತೆರಿಗೆಗೆ ಒಳಪಡುತ್ತಿರುವುದರಿಂದ ಅದನ್ನು ಫಾರಂ ಗೇಟ್‍ನಲ್ಲಿ ಮಾಡಲಾಗದೇ ವರ್ತಕರು ಇದರ ಲಾಭ ಪಡೆದು ಬೆಳೆಗಾರರನ್ನು ಶೋಷಿಸುತ್ತಿರುವುದರಿಂದ 7ಬಿ ಯನ್ನು ತೆಗೆದು ಹಾಕಬೇಕು. ಭಾರತ ದೇಶದ ಕೊಚ್ಚಿನ್ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಧಾರಣೆ ರೂ. 500-00(ಕರ್ನಾಟಕ ಸರ್ಕಾರ ಕೃಷಿ ಬೆಲೆ ಆಯೋಗದ ವರದಿಯ ಅನ್ವಯ) ಕ್ಕಿಂತ ಹೆಚ್ಚಾದಲ್ಲಿ ಮಾತ್ರ ವಿದೇಶಿ ಕಾಳುಮೆಣಸು ಆಮದಿಗೆ ಅವಕಾಶ ಕೊಡಬೇಕು.ಮತ್ತು ಕಡಿಮೆಯಾದಲ್ಲಿ, ಯಾವುದೇ ಕಾರಣಕ್ಕೂ ಆಮದು ಮಾಡಿಕೊಳ್ಳಬಾರದು.
ಮಾನವ ಮತ್ತು ಪ್ರಾಣಿಗಳ (ಪ್ರಮುಖವಾಗಿ ಕಾಡಾನೆ) ಸಂಘರ್ಷ : ಮಾನವ-ವನ್ಯ ಜೀವಿ ಸಂಘರ್ಷ ದಿನೇ-ದಿನೇ ಹೆಚ್ಚಾಗುತ್ತಿದ್ದು, ಮಲೆನಾಡಿನ ಭಾಗದ ಜನಸಾಮಾನ್ಯರು ಪ್ರಾಣಭಯದಿಂದ ಜೀವಿಸುತ್ತಿದ್ದು, ಅದರಲ್ಲೂ ಮುಖ್ಯವಾಗಿ ಕಾಡಾನೆಗಳ ದಾಳಿಗೆ ಪ್ರಾಣಹಾನಿ ಮತ್ತು ಬೆಳೆಹಾನಿ ಸಂಭವಿಸು ತ್ತಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಹಾಗೂ ಕಾಡಾನೆಗಳಿಗೆ ಕಾಡಿನಲ್ಲಿಯೇ ಮೂಲ ಸೌಲಭ್ಯಗಳನ್ನು ಒದಗಿಸಿಕೊಟ್ಟು ಕಾಡಿನಿಂದ ನಾಡಿಗೆ ಬಾರದಂತೆ ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಿಸಬೇಕು. 12 ನೇ ಪಂಚವಾರ್ಷಿಕ ಯೋಜನೆಯನ್ನು 2021ರ ವರೆಗೆ ಮುಂದುವರೆಸು ವುದು. ಶೀಘ್ರದಲ್ಲೇ ಕಾಫಿ ಮಂಡಳಿ ಮುಖೇನ ಕಾಫಿ ಬೆಳೆಗಾರರಿಗೆ ಉಳಿಕೆಯಾಗಿರುವ ಸಹಾಯಧನದ ಹಣವನ್ನು ಬಿಡುಗಡೆಗೊಳಿಸುವುದು. 3 ತಿಂಗಳುಗಳಲ್ಲಿ ಕನಿಷ್ಟ 60 ದಿನಗಳ ಕಾಲ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಮಾತ್ರ ಭವಿಷ್ಯನಿಧಿ ಸೌಲಭ್ಯವನ್ನು ನೀಡುವಂತೆ ಕಾನೂನು ರೂಪಿಸುವುದು. ವಿದೇಶದಿಂದ ಆಮದು ಶುಲ್ಕ ಇರುವ ಬ್ರೂವಿಂಗ್ ಮತ್ತು ವೈಂಡಿಂಗ್ ಮಿಷಿನ್‍ಗೆ ಶೇ. 0 ಶುಲ್ಕವನ್ನು ವಿಧಿಸುವುದು. ಇದರಿಂದ ಕಾಫಿ ಆಂತರಿಕ ಮಾರುಕಟ್ಟೆ ಹೆಚ್ಚಾಗುವುದು. ಬಿಳಿಕಾಂಡಕೊರಕದ ನಿಯಂತ್ರಣಕ್ಕೆ ಸೂಕ್ತ ಔಷಧಿ ಕಂಡುಹಿಡಿಯಲು ಈಗಾಗಲೇ ಇಂಡಿಯನ್ ಇನ್ಸ್‍ಟ್ಯೂಟ್ ಆಫ್ ಸೈನ್ಸ್‍ಗೆ ವಹಿಸಿರುವ ಪ್ರಾಜೆಕ್ಟನ್ನು ಮುಂದುವರೆಸುವುದು.
ಅಂತರಾಜ್ಯ ಸಹಕಾರ ಸಂಸ್ಥೆಯ ಪುನಶ್ಚೇತನ : ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕೋಮಾರ್ಕ್ ಪುನಶ್ಚೇತನಕ್ಕಾಗಿ ಕರ್ನಾಟಕ ಸರ್ಕಾರವು ರೂ.10 ಕೋಟಿ ಮೃದುಸಾಲವನ್ನು ಮಂಜೂರುಮಾಡಿ, ಇದರಲ್ಲಿ ಇದುವರೆಗೂ ರೂ.8.28 ಕೋಟಿ ಬಿಡುಗಡೆ ಮಾಡಿರುತ್ತದೆ. ಬಿಡುಗಡೆ ಆದ ಹಣದಲ್ಲಿ ರೂ.6.77 ಕೋಟಿಯನ್ನು ಸಮೂಹ ಬ್ಯಾಂಕರುಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳಿಗೆ ಮತ್ತು ವಾಣಿಜ್ಯ ತೆರಿಗೆ ಬಾಕಿ ತೀರಿಸಲು ಸರ್ಕಾರದ ಹಂತದಲ್ಲಿಯೇ ಹೊಂದಾಣಿಕೆ ಮಾಡಿಕೊಳ್ಳಲಾಗಿದ್ದು, ಉಳಿದ ಹಣ ಹಾಸನ ಜಿಲ್ಲಾಧಿಕಾರಿಗಳು ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಜಂಟಿ ಎಸ್ಕ್ರ್ಯೂ ಖಾತೆಯಲ್ಲಿ ಜಮಾವಿರುತ್ತದೆ. ಸರ್ಕಾರದ ಸುಪರ್ದಿಯಲ್ಲಿರುವ ರೂ.1.72 ಕೋಟಿ ಮೃದುಹಣವನ್ನು ಸಂಸ್ಥೆಯ ವಹಿವಾಟಿಗೆ ಅನುಕೂಲವಾಗುವಂತೆ ಬಿಡುಗಡೆ ಮಾಡಿ, ಸದರಿ 10 ಕೋಟಿ ಮೃದು ಸಾಲವನ್ನು ಒಂದು ಬಾರಿ ಅನುದಾನವಾಗಿ ಪರಿವರ್ತಿಸಿಕೊಡುವಂತೆ ಕೇಳಿಕೊಳ್ಳುತ್ತೇವೆ. ಸಂಸ್ಥೆಯು ಪರಿಣಾಮಕಾರಿಯಾಗಿ ವಹಿವಾಟು ನಡೆಸಲು ಹೆಚ್ಚುವರಿಯಾಗಿ ರೂ.20 ಕೋಟಿ ಹಣವನ್ನು ಸರ್ಕಾರದ ಆವರ್ತ ನಿಧಿಯಿಂದ ಒದಗಿಸಿಕೊಡುವಂತೆ ಕೇಳಿಕೊಳ್ಳುತ್ತೇವೆ. ಕಾಫಿ ಮಂಡಳಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡುವುದರಿಂದ ಕಾಫಿ ಉಧ್ಯಮದಲ್ಲಿ ಪ್ರಮುಖವಾಗಿ ಬೆಳೆಗಾರರ ಪರನಾದ ಕಾರ್ಯಚಟುವಟಿಕೆಯನ್ನು ನಡೆಸುವಲ್ಲಿ ಅನುವು ಮಾಡುವುದು. ಚಿಕೋರಿ ರಹಿತ ಕಾಫಿ ಪುಡಿಗೆ ಕಾನೂನು ತಿದ್ದುಪಡಿ ತರುವುದು. ಮತ್ತು ಚಿಕೋರಿ ಮಿಶ್ರಿತ ಕಾಫಿ ಪುಡಿಯನ್ನು ಎಫ್.ಎಸ್.ಎಸ್.ಎ.ಐ.ನಲ್ಲಿ ಕಲಬೆರಕೆ ಎಂದು ಪರಿಗಣಿಸುವುದು.
ರಾಜ್ಯ ಸರ್ಕಾರ ಪರಿಹರಿಸಬೇಕಾದ ಸಮಸ್ಯೆಗಳು : ಕರ್ನಾಟಕ ಸರ್ಕಾರವು ಕಾಫಿ ಬೆಳೆಗಾರರಿಗೆ ಸರ್ಕಾರಿ ಭೂಮಿ ಗುತ್ತಿಗೆ ಆಧಾರದ ಮೇಲೆ ನೀಡುವ ಸಂಬಂಧ ನಿಯಮಗಳ ಪರಿಶೀಲಿಸಿ ದಾಗ ಕಂಡುಬಂದ ಅಂಶಗಳು ರೈತ ಬೆಳೆಗಾರರ ಪೂರಕವಾಗಿಲ್ಲದ ಕಾರಣ ದಿಂದ ಹಾಗೂ ಬೆಳೆಗಾರರಿಗೆ ಪೂರಕ ವಾಗಿ ಕಾನೂನು ನಿಯಮಗಳು ರೂಪಿಸಬೇಕಾಗಿರುತ್ತದೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಒತ್ತುವರಿಗೆ ರೈತಪರ ನಿಯಮಗಳನ್ನು ಒದಗಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೇವೆ.
ಮಾನವ ಮತ್ತು ಪ್ರಾಣಿಗಳ ಸಂಘರ್ಷ : ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆ ಗಳ ಹಾವಳಿಯು ಮಿತಿಮೀರಿದ್ದು, ಪುಂಡಾನೆಗಳ ದಾಳಿಗೆ ಸಿಲುಕಿ ಹಲವು ಜನರ ಪ್ರಾಣವನ್ನು ಬಲಿತೆಗೆದು ಕೊಂಡಿರುವ ನಿದರ್ಶನಗಳು ನಮ್ಮ ಮುಂದಿವೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡುವಂತೆ, ರಾಜ್ಯ ಸರ್ಕಾರವನ್ನು ಆಗ್ಗಿಂದಾಗ್ಗೆ ಒಕ್ಕೂಟವು ಒತ್ತಾಯಿಸುತ್ತಲೇ ಬಂದಿದೆ. ಜಿಲ್ಲೆಯಾದ್ಯಂತ ಗುಂಪುಗಳಲ್ಲಿ ದಿನನಿತ್ಯ ರೈತರ ಬೆಳೆಯನ್ನು ನಾಶಪಡಿಸುತ್ತಿದ್ದು, ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕೂಡಲೇ ಈ ಭಾಗದಲ್ಲಿ ಬೀಡುಬಿಟ್ಟು, ದಾಂದಲೆ ನಡೆಸುತ್ತಿರುವ ಕಾಡಾನೆಗಳನ್ನು ಸಂಪೂರ್ಣವಾಗಿ ಹಿಡಿದು ಸ್ಥಳಾಂತರಿಸಬೇಕೆಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತೇವೆ.
ಕೃಷಿ ಪಂಪ್‍ಸೆಟ್‍ಗೆ ವಿಧಿಸುತ್ತಿರುವ ಶುಲ್ಕ : ಪ್ರಸ್ತುತ ಕಾಫಿ ಬೆಳೆಗಾರರು ನೀರಾವರಿಗಾಗಿ ಉಪಯೋಗಿಸುವ ವಿದ್ಯುತ್ ಯುನಿಟ್‍ಗಳ ಮೇಲೆ ಎಲ್.ಟಿ.4 ಸಿ ರಡಿಯಲ್ಲಿ ಶುಲ್ಕ ವಿಧಿಸುತ್ತಿದ್ದು, ಸದರಿ ನಿಯಮವನ್ನು ಸಡಿಲಿಸಿ, ಎಲ್.ಟಿ.4 ಎ ಗೆ ವರ್ಗಾಯಿಸಿ, ಬೆಳೆಗಾರರಿಗೆ ಉಂಟಾಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಡಬೇಕಾಗಿ ಕೇಳಿಕೊಳ್ಳುತ್ತೇವೆ. ಬೆಳೆಗಾರರು ನೀರಾವರಿಗಾಗಿ ವರ್ಷದಲ್ಲಿ ಕೇವಲ 3 ತಿಂಗಳು ಮಾತ್ರ ವಿದ್ಯುಚ್ಛಕ್ತಿಯನ್ನು ಉಪಯೋಗಿಸುತ್ತಿದ್ದು, ವಾರ್ಷಿಕ ದರವನ್ನು ವಿಧಿಸಲಾಗುತ್ತಿದೆ. ಈಗಾಗಲೇ ಬೆಳೆಗಾರರು ಸಂಕಷ್ಟದಲ್ಲಿದ್ದು, ಇದೀಗ ಚೆಸ್ಕಾಂ ಅಧಿಕಾರಿಗಳು ಬಾಕಿ ಉಳಿದಿರುವ ವಿದ್ಯುತ್ ಶುಲ್ಕ ವಸೂಲಾತಿ ಗಾಗಿ ಬೆಳೆಗಾರರನ್ನು ಸಂಪರ್ಕಿಸುತ್ತಿದ್ದು ಶುಲ್ಕ ಪಾವತಿಸದ ಕೆಲವು ಬೆಳೆಗಾರರು ಐ.ಪಿ.ಸೆಟ್‍ನಿರುವ ವಿದ್ಯುತ್ ಸರಬರಾಜಿನ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಬೆಳೆಗಾರರಿಗೆ ಯಾವುದೇ ರೀತಿಯಲ್ಲಿ ಐ.ಪಿ.ಸೆಟ್ ಮೇಲಿನ ವಿದ್ಯುತ್ ಬಾಕಿ ಶುಲ್ಕವನ್ನು ಪಾವತಿಸುವ ಸಾಮಥ್ರ್ಯವಿರುವುದಿಲ್ಲ. ಕೆಲವು ವರ್ಷಗಳ ಹಿಂದೆ ಮೆಸ್ಕಾಂನಿಂದ ವಿದ್ಯುತ್ ಬಾಕಿ ಶುಲ್ಕವನ್ನು ಬಳಕೆ ದಾರರಿಗೆ ಮನ್ನಾ ಮಾಡಿಕೊಟ್ಟಿದ್ದು, ಸದರಿ ಯೋಜನೆಯನ್ನು ಮುಂದುವರೆಸಬೇಕಾಗಿ ಕೇಳಿಕೊಳ್ಳುತ್ತೇವೆ.
ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ದರ ನಿಗಧಿಸುವಲ್ಲಿ ತಂದ ಬದಲಾವಣೆ : ಸರ್ಕಾರದ ಯಾವುದೇ ಯೋಜನೆಗಳಿಗೆ ಭೂ ಸ್ವಾದೀನಪಡಿಸಿಕೊಳ್ಳುವಾಗಲೆಲ್ಲಾ ಪುನರ್ವಸತಿ, ಪುನರ್‍ವ್ಯವಸ್ಥೆ ಮಾಡಬೇಕು ಎಂಬದು ಕೇಂದ್ರದ ಕಾಯ್ದೆಯಲ್ಲಿರುವುದು ಸರಿಯಷ್ಟೆ. ಆದರೆ ರಾಜ್ಯ ಸರ್ಕಾರ ಇದಕ್ಕೆ ಮಸೂದೆಯಲ್ಲಿ (ತಿದ್ದುಪಡಿ 31ಎ) ಇದರ ಬದಲು ರಾಜ್ಯ ಸರ್ಕಾರ ನಿರ್ಧರಿಸಬಹುದು ಮತ್ತು ಇಂತಿಷ್ಟೇ ಮೊತ್ತ ಪಾವತಿ ಮಾಡಬಹುದು. ಮತ್ತು ಯಾವುದೇ ಭೂಮಿಯ ಪರಿಹಾರ ನಿರ್ಧರಣೆಯು ಅದೇ ಪ್ರದೇಶದ ಅಥವಾ ಬೇರೆ ಕಡೆಯ ಇತರ ಭೂಮಿಯ ಪರಿಹಾರ ನಿರ್ಧರಣೆಗೆ ಅನ್ವಯಿಸುವುದಿಲ್ಲ. ಈ ಮಸೂದೆ ಜಾರಿಯಾದಲ್ಲಿ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ತಾರತಮ್ಯ ಮತ್ತು ಪರಿಹಾರ ಮೊತ್ತ ತಪ್ಪಿಸುವ ಉದ್ದೇಶವನ್ನು ಕೂಡಲೇ ಹಿಂತೆಗೆದುಕೊಳ್ಳ ಬೇಕೆಂದು ಒಕ್ಕೂಟ ಆಗ್ರಹಿಸುತ್ತದೆ. ಕರ್ನಾಟಕ ಎ.ಪಿ.ಎಂ.ಸಿ.ಯಲ್ಲಿ ಕಾಳುಮೆಣಸಿಗೆ ಸುಂಕ ವಿದಿಸಲಾಗುತ್ತಿದ್ದು ಇದರಿಂದ ನೇರವಾಗಿ ಬೆಳೆಗಾರರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಕೇರಳ, ತಮಿಳುನಾಡು, ರಾಜ್ಯಗಳಲ್ಲಿ ಎ.ಪಿ.ಎಂ.ಸಿ ಸುಂಕ ವ್ಯವಸ್ಥೆ ಇರುವುದಿಲ್ಲ, ಈಗಾಗಲೇ ಕಾಳುಮೆಣಸು ಬೆಲೆ ಕುಸಿತ ಕಂಡಿದ್ದು ಎ.ಪಿ.ಎಂ.ಸಿ.ಯಲ್ಲಿ ಪ್ರತಿ ಕೆ.ಜಿ.ಕಾಳು ಮೆಣಸಿನ ಮೇಲೆ 6.5 ರೂ. ಸುಂಕ ವಿದಿಸುತ್ತಿರುವುದರಿಂದ ಬೆಳೆಗಾರರಿಗೆ ನೇರವಾಗಿ ಹೊರೆಯಾಗುತ್ತಿದೆ. ವ್ಯಾಪಾರಿಗಳು ಸುಂಕದ ಹಣವನ್ನು ಕಡಿತಗೊಳಿಸಿಕೊಂಡು ಬೆಳೆಗಾರರಿಗೆ ಬೆಲೆ ನೀಡುತ್ತಿದ್ದಾರೆ. ಆದ್ದರಿಂದ ತಾವು ದಯಮಾಡಿ ಕರ್ನಾಟÀಕದ ಎ.ಪಿ.ಎಂ.ಸಿಯಲ್ಲಿ ಕಾಳುಮೆಣಸಿಗೆ ವಿಧಿಸುತ್ತಿರುವ ಸುಂಕವನ್ನು ರದ್ದುಗೊಳಿಸ ಬೇಕೆಂದು ಮನವಿ ಮಾಡುತ್ತೇವೆ.
ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರ ಕೋರಿ : ಕಾಫಿ ಬೆಳೆಯುವ ಪ್ರದೇಶವಾದ ಮಲೆನಾಡಿನ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಕಳೆದ ಜುಲೈ ಮತ್ತು ಆಗಸ್ಟ್ 2018 ರ ಮಾಹೆಗಳಲ್ಲಿ ಸುರಿದ ಅತಿಯಾದ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಶೇ.50 ರಷ್ಟು ನಷ್ಟ ಸಂಭವಿಸಿರುವುದರ ಜೊತೆಗೆ ಭೂಕುಸಿತದ ಕಾರಣದಿಂದ ಜೀವಹಾನಿ, ತೋಟ ನಾಶವಾಗುವುದರ ಜೊತೆಗೆ ಅನೇಕರು ಮನೆ ಕಳೆದುಕೊಂಡು ನಿರ್ಗತಿಕರಾಗಿರುತ್ತಾರೆ. ಮುಖ್ಯವಾಗಿ ಕೊಡಗು ಜಿಲ್ಲೆಯಲ್ಲಿ ಉಂಟಾದ ಭೂ ಕುಸಿತದಿಂದ ಅನೇಕ ಜೀವಹಾನಿ ಸಂಭವಿಸಿ ತೋಟಗಳನ್ನು, ಮನೆಗಳನ್ನು ಕಳೆದುಕೊಂಡವರಿಗೆ ಸಮಗ್ರ ಪರಿಹಾರ ಯೋಜನೆಯನ್ನು ಈ ಮೂಲಕ ಅವರಿಗೆ ಮನೆ, ಭೂಮಿ, ಹಾಗೂ ಹಣಕಾಸು ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಕೇಳಿಕೊಳ್ಳುತ್ತೇವೆ. ಹಾಗೂ ಅತಿವೃಷ್ಟಿಯಿಂದ ಉಂಟಾದ ಹಾನಿಯಿಂದ ಸಂಕಷ್ಟಕ್ಕೊಳಗಾಗಿರುವ ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಕೇಳಿಕೊಳ್ಳುತ್ತೇವೆ.
-ಕರ್ನಾಟಕ ಬೆಳೆಗಾರರ ಒಕ್ಕೂಟ.