ಕುಶಾಲನಗರ, ಜೂ. 28: ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ನಾಗರಿಕರಿಗೆ ಕುಶಾಲನಗರದಲ್ಲಿಯೇ ಪಡಿತರ ಚೀಟಿ ವಿತರಿಸಲು ಕ್ರಮಕೈಗೊಳ್ಳುವಂತೆ ಮಡಿಕೇರಿ ಕ್ಷೇತ್ರ ಶಾಸಕರಾದ ಅಪ್ಪಚ್ಚುರಂಜನ್ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದ್ದಾರೆ.
ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ನಾಗರಿಕರು ಪಡಿತರ ಚೀಟಿ ಪಡೆಯಲು ದೂರದ ಸೋಮವಾರಪೇಟೆಗೆ ತೆರಳುವ ಪರಿಸ್ಥಿತಿಯಿದ್ದು, ಇದರಿಂದ ಅನಾನುಕೂಲ ಉಂಟಾಗುವ ಬಗ್ಗೆ ಸ್ಥಳೀಯ ಪ.ಪಂ. ಸದಸ್ಯ ಅಮೃತ್‍ರಾಜ್ ಶಾಸಕರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಶಾಸಕರು ಕುಶಾಲನಗರದಲ್ಲಿ ಪಡಿತರ ಚೀಟಿ ವಿತರಿಸುವಂತೆ ಪತ್ರದ ಮೂಲಕ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಕುಶಾಲನಗರದಲ್ಲಿ ವಾರದ ಎರಡು ದಿನಗಳ ಕಾಲ ನಾಡಕಚೇರಿಯಲ್ಲಿ ಪಡಿತರ ಚೀಟಿ ವಿತರಿಸಲು ಇಲಾಖೆ ಅಧಿಕಾರಿಗಳು ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ.