ಸೋಮವಾರಪೇಟೆ,ಜೂ.26: ಸರಕು ಸಾಗಾಣೆ ವಾಹನಗಳಲ್ಲಿ ಜನರನ್ನು ಸಾಗಾಟಗೊಳಿಸುತ್ತಿದ್ದ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಪೊಲೀಸರು, ಪಿಕ್‍ಅಪ್ ವಾಹನ ಹಾಗೂ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಮಾರುತಿ ವ್ಯಾನ್ ವಶಕ್ಕೆ ಪಡೆದಿದ್ದಾರೆ.

ಕಾನೂನು ಮೀರಿ ಜನರನ್ನು ಸಾಗಿಸುತ್ತಿದ್ದ 6 ಪಿಕ್‍ಅಪ್, 18 ವಿದ್ಯಾರ್ಥಿಗಳನ್ನು ಒಂದೇ ಮಾರುತಿ ಓಮ್ನಿಯಲ್ಲಿ ಸಾಗಿಸುತ್ತಿದ್ದ ಚಾಲಕರ ವಾಹನ ಪರವಾನಗಿ ಪತ್ರವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯಕ್ಕೆ ಪೊಲೀಸರು ಮನವಿ ಮಾಡಿದ್ದಾರೆ.

ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಅವರು ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿ, ಜಿಲ್ಲಾ ಪೊಲೀಸ್ ಅಧೀಕ್ಷಕರ ಆದೇಶದಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿರುವ ಮನವಿಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಸರಕು ಸಾಗಾಟದ ವಾಹನಗಳಲ್ಲಿ ಕಾನೂನು ಬಾಹಿರವಾಗಿ ಜನರನ್ನು ಸಾಗಿಸುವಂತಿಲ್ಲ. ಶಾಲಾ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುವಂತಿಲ್ಲ. ಆದಾಗ್ಯೂ ಸಾಗಿಸುವದು ಕಂಡುಬಂದಲ್ಲಿ ಅಂತಹ ವಾಹನ ಚಾಲಕರ ಪರವಾನಗಿಯನ್ನು ಮುಟ್ಟುಗೋಲು ಹಾಕಿಕೊಂಡು ನ್ಯಾಯಾಲಯಕ್ಕೆ ಸಲ್ಲಿಸಲಾಗುವದು ಎಂದರು.

ಜೂ. 25ರಿಂದ ಜು. 8ರ ವರೆಗೆ ವಾಹನ ಚಾಲಕರಿಗೆ, ಸರಕು ಸಾಗಾಟದ ವಾಹನಗಳ ಮಾಲೀಕರು ಹಾಗೂ ಚಾಲಕರಿಗೆ, ಖಾಸಗಿ ಶಾಲಾ ಮತ್ತು ಕಾಲೇಜುಗಳ ಮಾಲೀಕರುಗಳು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು.

ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವದು, ಪ್ರಬಂಧ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲಾಗುವದು. ಶಾಲಾ ವಿದ್ಯಾರ್ಥಿಗಳು, ಆಟೋ ಮತ್ತು ಮೋಟಾರು ಕೆಲಸಗಾರರ ಸಂಘದ ಸದಸ್ಯರು, ಸಾರ್ವಜನಿಕರೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅರಿವು ಮೂಡಿಸುವ ಜಾಥಾ ಹಮ್ಮಿಕೊಳ್ಳಲಾಗುವದು. ಕಾನೂನು ಮೀರಿ ಜನರ ಸಾಗಾಟ ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವದು ಎಂದರು.