ಶ್ರೀಮಂಗಲ, ಜೂ. 26: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುರ್ಚಿ ಗ್ರಾಮದಲ್ಲಿ ಹಾಡಹಗಲೇ ಹುಲಿ ಧಾಳಿಗೆ ಮೇಯಲು ಗದ್ದೆಯಲ್ಲಿ ಕಟ್ಟಿದ್ದ ಎತ್ತು ಬಲಿಯಾಗಿದೆ. ಗ್ರಾಮದ ರೈತ ಅಜ್ಜಮಾಡ ಬಾಲಕೃಷ್ಣ (ಲಾಲ) ಅವರು ತಮ್ಮ ಎತ್ತನ್ನು ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಸಂದರ್ಭ ಹುಲಿ ಧಾಳಿ ನಡೆಸಿದೆ.

ಬುಧವಾರ ಬೆಳಿಗ್ಗೆ 10 ಗಂಟೆಗೆ ಹುಲಿ ಧಾಳಿ ನಡೆದಿದ್ದು, ಹುಲಿ ಧಾಳಿಗೆ ಎತ್ತು ನರಳಾಟದ ಶಬ್ದಕ್ಕೆ ಸಮೀಪದಲ್ಲಿದ್ದ ಕಾರ್ಮಿಕರು ಬೊಬ್ಬೆ ಹಾಕಿದ್ದರಿಂದ ಎತ್ತನ್ನು ಕೊಂದು ಹುಲಿ ಅಲ್ಲಿಂದ ಸಮೀಪದ ತೋಟಕ್ಕೆ ನುಗ್ಗಿ ಕಣ್ಮರೆಯಾಗಿದೆ.

ಸ್ಥಳಕ್ಕೆ ಪ್ರೊ. ನಂಜುಂಡ ಸ್ವಾಮಿ ರೈತ ಸಂಘದ ಜಿಲ್ಲಾ ಸಮಿತಿಯ ಅಧ್ಯಕ್ಷ ಚಿಮ್ಮಂಗಡ ಗಣೇಶ್ ನೇತೃತ್ವದಲ್ಲಿ ಸಂಘದ ಸದಸ್ಯರು ಸ್ಥಳಕ್ಕೆ ತೆರಳಿದ್ದರು.

ಶ್ರೀಮಂಗಲ ವನ್ಯ ಜೀವಿ ವಲಯದ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ್ ಮತ್ತು ಸಿಬ್ಬಂದಿ ಮಹಜರು ನಡೆಸಿದರು. ಸ್ಥಳದಲ್ಲೆ ಪರಿಹಾರ ನೀಡಬೇಕೆನ್ನುವ ರೈತ ಸಂಘದ ಒತ್ತಾಯಕ್ಕೆ ಮಣಿದು ರೂ. 10 ಸಾವಿರವನ್ನು ಸಂತ್ರಸ್ತ ರೈತನಿಗೆ ನೀಡಿದರು. ಉಳಿದ ಮೊತ್ತವನ್ನು ಸರ್ಕಾರದ ಆದೇಶದಂತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು. ಈ ಸಂದರ್ಭ ರೈತ ಸಂಘದ ತಾಲೂಕು ಸಂಚಾಲಕ ಮಚ್ಚಮಾಡ ರಂಜಿ, ತಾಲೂಕು ಕಾರ್ಯದರ್ಶಿ ಗುಡಿಯಂಗಡ ಮುತ್ತು ಪೂವಪ್ಪ, ಜಿಲ್ಲಾ ಖಜಾಂಚಿ ಚಂಗುಲಂಡ ರಾಜಪ್ಪ, ಶ್ರೀಮಂಗಲ ಹೋಬಳಿ ಕಾರ್ಯದರ್ಶಿ ಬೊಜ್ಜಂಗಡ ಚಂಗಪ್ಪ, ರೈತ ಮುಖಂಡರಾದ ಅಯ್ಯಮಾಡ ಹ್ಯಾರಿ ಸೋಮೆಶ್, ತೀತೀರ ದೊರೆ, ಕೋಳೇರ ಪೊನ್ನಣ್ಣ, ಕೋಟ್ರಂಗಡ ಹರೀಶ್, ಚೆಟ್ಟಂಗಡ ನವೀನ್ ಹಾಜರಿದ್ದರು.