ಸೋಮವಾರಪೇಟೆ, ಜೂ. 25: ಇಲ್ಲಿನ ಶ್ರೀ ರಾಮ ಪತ್ತಿನ ಸಹಕಾರ ಸಂಘದ ಪ್ರಥಮ ವರ್ಷದ ವಾರ್ಷಿಕ ಮಹಾಸಭೆ ಶ್ರೀ ರಾಮ ಮಂದಿರದಲ್ಲಿ ಅಧ್ಯಕ್ಷ ಬಿ.ಡಿ. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಮಂಜುನಾಥ್, ಸಹಕಾರ ಸಂಘಗಳಲ್ಲಿ ಸದಸ್ಯರುಗಳು ಕೆಲವು ನಿಬಂಧನೆಗಳನ್ನು ಪಾಲಿಸದಿದ್ದರೆ ಮತದಾನದ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಸದಸ್ಯರುಗಳು ಅರಿವು ಹೊಂದಿರಬೇಕು ಎಂದರು.
ಈಗಾಗಲೇ ಪರಿಶಿಷ್ಟ ಜಾತಿಗೆ ಮೀಸಲಿರುವ ಸ್ಥಾನವನ್ನು ಹೊರತುಪಡಿಸಿ ಉಳಿದಂತೆ 13 ಮಂದಿ ಸದಸ್ಯರನ್ನು ಹೊಂದಿರುವ ಆಡಳಿತ ಮಂಡಳಿ ರಚಿಸಲಾಗಿದೆ. ಸಂಘದಿಂದ ಸಿಗುವ ಲಾಭವನ್ನು ಸದಸ್ಯರುಗಳು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಸಂಘದ ವರದಿಯನ್ನು ನಿರ್ದೇಶಕ ಬಿ.ಎಸ್. ಅನಂತ್‍ರಾಮ್ ಮಂಡಿಸಿದರು. ಸಂಘದ ಪ್ರಭಾರ ಕಾರ್ಯದರ್ಶಿ ಬಿ.ಎಂ. ಶ್ರೀಧರ್ ಲೆಕ್ಕಪತ್ರ ಮಂಡಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎನ್.ಎನ್. ರಮೇಶ್ ಸೇರಿದಂತೆ ನಿರ್ದೇಶಕರುಗಳು ಉಪಸ್ಥಿತರಿದ್ದರು.