ಕೂಡಿಗೆ, ಜೂ. 25: ಪರಿಸರದಲ್ಲಿ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ರಕ್ಷಣೆ ಬಗ್ಗೆ ಮುಂಜಾಗ್ರತೆ ವಹಿಸುವ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ವನ್ಯ ಜೀವಿಗಳ ಸಂರಕ್ಷಣೆಯಲ್ಲಿ ಪಶುವೈದ್ಯಾಧಿಕಾರಿಗಳು ಸ್ವಯಂ ಪ್ರೇರಣೆಯಿಂದ ತಮ್ಮನ್ನು ತೊಡಗಿಸಿ ಕೊಳ್ಳಬೇಕು ಎಂದು ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಪ್ರೊ. ಡಿನ್ ಡಾ. ನಾರಾಯಣ್‍ಭಟ್ ಕರೆ ನೀಡಿದರು.

ದೊಡ್ಡ ಅಳುವಾರದ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ದೊಡ್ಡಅಳುವಾರದ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ನಡೆದ ವನ್ಯ ಜೀವಿಗಳ ಸಂಪತ್ತು ಮತ್ತು ಆರೋಗ್ಯ ಎಂಬ ವಿಷಯದ ಬಗ್ಗೆ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರಿನ ಜೀವ ವೈವಿದ್ಯ ಸಂಸ್ಥೆಯ ಪಶು ಶಾಸ್ತ್ರಜ್ಞರಾದ ಡಾ. ಉಪೇಂದ್ರ ಅವರು, ವನ್ಯ ಜೀವಿಗಳ ಜೀವ ವೈವಿಧ್ಯತೆಯ ಪ್ರಮುಖ ವಿಷಯಗಳ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಬೆಂಗಳೂರಿನ ಪಶುವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ಮುರುಳೀಧರ್ ಅವರು ಆನೆಗಳ ಸಂಗೋಪನೆ ಮತ್ತು ರೋಗಗಳ ಬಗ್ಗೆ ವಿವರಿಸಿದರು.

ಕಾಡಾನೆಗಳನ್ನು ಹಿಡಿಯುವದರಲ್ಲಿ ಹೆಚ್ಚು ಅನುಭವಿಯಾದ ಕೊಡಗಿನವರೆ ಆದ ಡಾ. ಚಿಟಿಯಪ್ಪ ಅವರು ಕಾಡಾನೆಗಳನ್ನು ಅರವಳಿಕೆ ಮದ್ದು ಬಳಸಿ ಸುರಕ್ಷಿತವಾಗಿ ಹಿಡಿಯುವದು, ಅವುಗಳ ಆರೋಗ್ಯ ಸಮತೋಲನ ಕಾಪಾಡುವ ಬಗ್ಗೆ ಮಾಹಿತಿಯಿತ್ತರು. ದೊಡ್ಡಅಳುವಾರದ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ. ಡಾ. ಶಿವಕುಮಾರ್ ಎಂ.ಸಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಚಾರಗೋಷ್ಠಿಯಲ್ಲಿ ಬೆಂಗಳೂರು, ಕೊಡಗು, ತುಮಕೂರು, ಕೊಳ್ಳೆಗಾಲ, ಮೈಸೂರು ಮತ್ತು ಹೊರ ರಾಜ್ಯ ಕೇರಳದ ವನ್ಯಜೀವಿ ಪಶುವೈದ್ಯಕೀಯ ವಿದ್ಯಾರ್ಥಿಗಳು, ಬಿ.ಕಾಂ ವಿದ್ಯಾರ್ಥಿಗಳು, ಪ್ರೌಢಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ನುರಿತ ಉಪನ್ಯಾಸಕರಿಂದ ವನ್ಯಜೀವಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ, 15 ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ವೈಜ್ಞಾನಿಕ ಲೇಖನಗಳನ್ನು ಪ್ರಬಂಧದ ಮೂಲಕ ವಿಚಾರ ಸಂಕಿರಣದಲ್ಲಿ ಮಂಡಿಸಿದರು.

ಅಲ್ಲದೆ, 25 ವಿದ್ಯಾರ್ಥಿಗಳು ವನ್ಯಜೀವಿಗಳಿಗೆ ಸಂಬಂಧಪಟ್ಟಂತೆ ಪ್ರಾಣಿಗಳ ಹುಟ್ಟಿನಿಂದ ಮರಣದವರೆಗೆ ಅವುಗಳ ಪೋಷಣೆ, ಅನಾರೋಗ್ಯಕ್ಕೆ ತುತ್ತಾದಾಗ ಸಂರಕ್ಷಣೆ ಮತ್ತು ಆರೈಕೆ ಮಾಡುವದರ ಬಗ್ಗೆ, ಆನೆ, ಹುಲಿ, ಹಾವುಗಳ ಬಗ್ಗೆ ಮಾಹಿತಿ ಭಿತ್ತಿ ಪತ್ರಗಳ ಮೂಲಕ ಪ್ರದರ್ಶಿಸಿ, ವಿವರಿಸಿದರು.

ಈ ಸಂದರ್ಭ ಹಿರಿಯ ವಿಜ್ಞಾನಿಗಳಾದ ಡಾ.ಸುರೇಂದ್ರವರ್ಮ ವೈಜ್ಞಾನಿಕ ಜಗತ್ತಿನಲ್ಲಿ ಪ್ರಾಣಿಗಳ ಕೊಲ್ಲುವಿಕೆಯಿಂದ ಆಗುವ ತೊಂದರೆ ಗಳ ಬಗ್ಗೆ ತಿಳಿಸಿದರು. ಈ ಸಂದರ್ಭ ಡಾ.ದಿವ್ಯ, ಡಾ. ಕಿಶೋರ್‍ರಾಜ್, ನಿಶಾಂತ್ ನಮಿ ಸೇರಿದಂತೆ ವೈದ್ಯಕೀಯ ಸಂಸ್ಥೆಯ ಹಿರಿಯ ತಾಂತ್ರೀಕ ವರ್ಗದವರು ಇದ್ದರು.