ನಾಪೆÇೀಕ್ಲು, ಜೂ. 25: ಮಲೆನಾಡಿನ ಕಾಡಿನಲ್ಲಿ ಎಲ್ಲಿ ಹೋದರೂ ಹೂ ಹಣ್ಣುಗಳದೇ ಭರಾಟೆ. ಮಳೆಗಾಲದಲ್ಲಿ ಇವುಗಳ ಸಂಖ್ಯೆ ಸ್ವಲ್ಪ ಹೆಚ್ಚೇ ಎನ್ನಬಹುದು. ಮಾನವನಿಗೂ, ಪ್ರಕೃತಿಗೂ, ದೇವತೆ ಗಳಿಗೂ ಬಿಡಿಸಲಾರದ ನಂಟು. ಆದುದರಿಂದ ವೃಕ್ಷಗಳಿಗೆ, ಹಣ್ಣುಗಳಿಗೆ, ಹೂವುಗಳಿಗೆ, ಕಲ್ಲು ಬಂಡೆಗಳಿಗೆ ಅನೇಕ ದೇವಾನುದೇವತೆಗಳ ಹೆಸರನ್ನಿಟ್ಟಿರುವದು ಕಂಡುಬರುತ್ತದೆ.

ಪುರಾಣದಲ್ಲಿ ಶ್ರೀ ರಾಮ, ಸೀತೆ, ಲಕ್ಷ್ಮಣರು ವನವಾಸ ಮಾಡಿದ ಕಾರಣದಿಂದಲೋ ಏನೋ ಹಲವು ಹಣ್ಣುಗಳಿಗೆ, ಹೂವುಗಳಿಗೆ ಇವರ ಹೆಸರುಗಳೇ ಹೆಚ್ಚಾಗಿ ಪ್ರಚಲಿತದಲ್ಲಿವೆ. ರಾಮ ಫಲ, ಸೀತಾ ಫಲ. ಸೀತೆ ಹೂವು ಹೀಗೆ.

ವನ ಪುಷ್ಪಗಳಲ್ಲಿ ಪುಷ್ಪ ಪ್ರಿಯರನ್ನು ಹೆಚ್ಚಿಗೆ ಆಕರ್ಷಿಸುತ್ತಿರು ವದು ಸೀತೆ ಹೂ. ಇದು ಮರಗಳನ್ನಾಶ್ರಯಿಸಿ ಬೆಳೆಯುವ ಒಂದು ಪರಾವಲಂಬಿ ಸಸ್ಯ. ಇದರ ಹೆಸರೇ ಸೂಚಿಸುವಂತೆ ಸೀತೆಯಷ್ಟೇ ಸುಂದರ ಕೂಡ. ಇದು ಮಳೆಗಾಲದಲ್ಲಿ ಹೂ ಬಿಡುತ್ತದೆ. ಬಿಳಿ, ತಿಳಿ ನೀಲಿ ಹಾಗೂ ನೇರಳೆ ಬಣ್ಣವನ್ನು ಹೊಂದಿರುವ ಹೂಗಳು ಗೊಂಚಲು, ಗೊಂಚಲಾಗಿ ನೋಡುಗರ ಮನ ಸೆಳೆಯುತ್ತದೆ. ಇವುಗಳಲ್ಲಿ ಸಾಮಾನ್ಯವಾಗಿ ಎರಡು ವಿಧದ ಹೂಗಳು ಹೆಚ್ಚಾಗಿ ಕಂಡುಬರುತ್ತದೆ. ಉದ್ದದಂಟಿನ ಹೂಗಳು ಮತ್ತು ಒತ್ತೊತ್ತಾಗಿರುವ ಹೂಗಳು.

ಮಳೆಗಾಲದಲ್ಲಿ ಅರಳಿ ಕಂಗೊಳಿಸುತ್ತಿರುವ ಸೊಬಗಿನ ಈ ಸೀತೆ ಹೂವು ಈಗೀಗ ಬಲೂ ಅಪರೂಪವಾಗುತ್ತಿದೆ. ಒಂದು ಉದ್ದದ ಮರದ ಕಡ್ಡಿಗೆ ಪೆÇೀಣಿಸಿದಂತೆ ಕಂಡು ಬರುವ ಈ ಹೂಗಳು ಕಾಡಿನ ಸಸ್ಯಗಳಾದರೂ, ಇತ್ತೀಚೆಗೆ ಗ್ರಾಮೀಣ ಪ್ರದೇಶದ ಜನರು ಇವುಗಳನ್ನು ತಂದು ಮನೆಯ ಪಕ್ಕದ ಮರದ ಕವಲುಗಳಲ್ಲಿ ಬೆಳೆಸಿ ಸೊಬಗು ಆನಂದಿಸುವವದನ್ನು ಕಾಣಬಹುದು. ಇದರ ವೈಜ್ಞಾನಿಕ ಹೆಸರು ರಿಂಕೋ ಸ್ಪ್ರೆಲಿಸ್ ರೆಟೂಸ್ ಎಂಬದಾಗಿದ್ದು, ತಿಂಗಳುಗಳವರೆಗೆ ಅರಳಿರುವ ಈ ಹೂ ಆರ್ಕೆಡ್ ಜಾತಿಗೆ ಸೇರಿದೆ.

ನಾಪೆÇೀಕ್ಲು ಗ್ರಾಮದ ಬೊಪ್ಪಂಡ ಕಾಶಿ ನಂಜಪ್ಪ ಮತ್ತು ಕಾವೇರಮ್ಮ ದಂಪತಿಗಳು ತಮ್ಮ ಅಂಗಳದ ಮರದಲ್ಲಿ ಬೆಳೆಸಿದ ಸೀತೆ ಹೂ ಬಳ್ಳಿ ಸುಮಾರು 27 ಹೂಗಳನ್ನು ಅರಳಿಸಿ ಎಲ್ಲರನ್ನು ಆಕರ್ಷಿಸುತ್ತಿದೆ.

-ಪಿ.ವಿ. ಪ್ರಭಾಕರ್