ಕುಶಾಲನಗರ, ಜೂ. 25: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ವ್ಯಕ್ತಿಯೊಬ್ಬರ ಜಮೀನನ್ನು ಅತಿಕ್ರಮಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಸಮಿತಿ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.
ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಪಿ. ಶಿವಕುಮಾರ್ ನೇತೃತ್ವದಲ್ಲಿ ಕುಶಾಲನಗರ ನಾಡಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು. ದೊಡ್ಡತ್ತೂರು ಗ್ರಾಮದ ಸಿದ್ದ ಎಂಬವರ ಜಮೀನನ್ನು ವ್ಯಕ್ತಿಯೊಬ್ಬ ಅತಿಕ್ರಮಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಧಿಕ್ಕಾರ ಘೋಷಣೆ ಕೂಗಿದರು. ದೊಡ್ಡತ್ತೂರು ಗ್ರಾಮದ ಸಿದ್ದ ಎಂಬವರ ಜಮೀನಿನ ವಿಷಯದಲ್ಲಿ ಎಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಮತ್ತು ದೂರು ಸಲ್ಲಿಸಲಾಗಿದ್ದರೂ ಇದುವರೆಗೆ ಯಾವದೇ ರೀತಿಯ ಸ್ಪಂದನ ದೊರಕಿಲ್ಲ. ಈ ಹಿನ್ನೆಲೆ ಸಿದ್ದನ ಮೇಲೆ ನಡೆಯುತ್ತಿರುವ ದೌರ್ಜನ್ಯ ವನ್ನು ಖಂಡಿಸಿ ಆತನಿಗೆ ಭೂಮಿಯನ್ನು ಬಿಡಿಸಿಕೊಡಬೇಕು. ಸಿದ್ದನ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು. ಆತನ ಭೂಮಿಯಲ್ಲಿ ಕೃಷಿ ಮಾಡಲು ಅನುಕೂಲ ಕಲ್ಪಿಸಬೇಕೆಂದು ಸಮಿತಿ ಅಧ್ಯಕ್ಷ ಹೆಚ್.ಎಲ್. ದಿವಾಕರ ಮತ್ತು ಹೆಚ್.ಪಿ. ಶಿವಕುಮಾರ್ ತಾಲೂಕು ತಹಶೀಲ್ದಾರ್ ಗೋವಿಂದ ರಾಜು ಅವರಲ್ಲಿ ಒತ್ತಾಯಿಸಿದರು. ಬೇಡಿಕೆಗೆ ಸ್ಪಂದಿಸಿದ ತಹಶೀಲ್ದಾರ್ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಸಮಿತಿ ಪ್ರಮುಖರಾದ ಹೆಚ್.ಜೆ. ಕರಿಯಪ್ಪ, ದಾಮೋದರ್, ದೀಪಕ್, ಕುಮಾರ, ರವೀಂದ್ರ, ಸುರೇಶ್, ಸಿದ್ದ ಪಾಲ್ಗೊಂಡಿದ್ದರು.