ಮಡಿಕೇರಿ, ಜೂ. 25: ಕಡಗದಾಳು ಗ್ರಾಮ ಪಂಚಾಯಿತಿಯ ಕತ್ತಲೆಕಾಡು- ಕ್ಲೋಸ್‍ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟದ ಕಾಮಗಾರಿ ತಾ. 28 ರಿಂದ ಆರಂಭವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಹಾಗೂ ಗುತ್ತಿಗೆದಾರರು ಭರವಸೆ ನೀಡಿದ್ದಾರೆ.

ಸರ್ಕಾರದಿಂದ ಹಣ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಆಗಿದ್ದರೂ ಕಾಮಗಾರಿ ಶುರುವಾಗದಿರುವ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೇ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ ಕ್ಷೇತ್ರದ ತಾಲೂಕು ಪಂಚಾಯಿತಿ ಸದಸ್ಯ ಅಪ್ರು ರವೀಂದ್ರ ಅವರ ಗಮನ ಸೆಳೆಯಲಾಗಿತ್ತು. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದ ಮೇರೆಗೆ ಇಂದು ಪಿಡಬ್ಲ್ಯೂಡಿ ಇಂಜಿನಿಯರ್ ಚನ್ನಕೇಶವ, ಕಾಮಗಾರಿ ಟೆಂಡರ್ ಪಡೆದಿರುವ ಪರಮೇಶ್ವರ್ ಶಾಲೆಗೆ ಭೇಟಿ ನೀಡಿದರು.

ರೂ. 21.20 ಲಕ್ಷ ವೆಚ್ಚದಲ್ಲಿ ಎರಡು ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಆಗಿದ್ದು, ತಾ. 28 ರಿಂದ ಕಾಮಗಾರಿ ಆರಂಭಿಸಲಾಗುವದೆಂದು ತಿಳಿಸಿದರು. ಶಾಲೆಯ ಹಳೆ ಕಟ್ಟಡ ಶಿಥಿಲಾವಸ್ಥೆಗೆ ತಲಪಿದ್ದ ಕಾರಣಕ್ಕೆ ನಾಲ್ಕು ಕೊಠಡಿಗಳು ಬಳಕೆಗೆ ಯೋಗ್ಯವಲ್ಲದ ಸ್ಥಿತಿಗೆ ತಲಪಿದ್ದವು. ಹೀಗಾಗಿ ಹಳೆ ಕಟ್ಟಡದ ಬದಲು ನೂತನ ಕಟ್ಟಡ ನಿರ್ಮಿಸುವಂತೆ ವಿವಿಧ ಇಲಾಖೆ ಹಾಗೂ ಕಳೆದ ವರ್ಷ ಮುಖ್ಯಮಂತ್ರಿ ಕೊಡಗಿಗೆ ಭೇಟಿ ನೀಡಿದ್ದಾಗ ಖುದ್ದು ಮನವಿ ಸಲ್ಲಿಸಲಾಗಿತ್ತು. ಅದಾದ ನಂತರ ನೂತನ ಕಟ್ಟಡಕ್ಕೆ ರೂ. 21.20 ಲಕ್ಷ ಮಂಜೂರಾಗಿತ್ತು. ಟೆಂಡರ್ ಆಗಿ ಕಾಮಗಾರಿ ಶುರುವಾಗದಿರುವ ಬಗ್ಗೆ ಮಾಧ್ಯಮಗಳಲ್ಲೂ ನಿರಂತರ ಸುದ್ದಿ ಪ್ರಕಟವಾಗಿತ್ತು. ಇದೀಗ ಅಧಿಕಾರಿಗಳು ಎಚ್ಚೆತ್ತಿದ್ದು, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವದೆಂದು ಹೇಳಿದರು. ತಾ.ಪಂ. ಸದಸ್ಯ ಅಪ್ರು ರವೀಂದ್ರ, ಶಾಲೆ ಮುಖ್ಯ ಶಿಕ್ಷಕಿ ಸುಜಾತಾ ಹಾಗೂ ಇತರರಿದ್ದರು.