ಆಲೂರು-ಸಿದ್ದಾಪುರ, ಜೂ. 25: ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಹೊಂದಿಕೊಂಡಂತೆ ವರ್ಷಗಳ ಹಿಂದೆ ಪೇಟೆಯಲ್ಲಿ ಸುಮಾರು 8 ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಆದರೆ ಅದು ಸರಿಯಾಗಿ ಬಳಕೆಯಾಗದ ಕಾರಣ ನಿರ್ವಹಣೆ ಇಲ್ಲದೆ ಪಾಳು ಬಿದ್ದಿತ್ತು ಇದರಿಂದ ತೀವ್ರ ತೊಂದರೆಯನ್ನು ಸಾರ್ವಜನಿಕರು ಅನುಭವಿಸುತ್ತಿದ್ದರು.

ಇದರಿಂದ ಅನೇಕ ಬಾರಿ ಸ್ಥಳೀಯರು ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ ಹಿನ್ನೆಲೆ ಗ್ರಾಮ ಪಂಚಾಯಿತಿ ಸುಮಾರು ರೂ. 5 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲ ಯವನ್ನು ನಿರ್ಮಿಸಿದ್ದರು. ಆದರೆ ಆ ಶೌಚಾಲಯ ನಿರ್ಮಿಸಿ ಒಂದು ವರ್ಷ ಕಳೆಯುತ್ತ ಬಂದರೂ ಸಹ ಸಂಬಂಧ ಪಟ್ಟವರ ನಿರ್ಲಕ್ಷ್ಯದಿಂದಾಗಿ ಇನ್ನು ಸಹ ಬಳಕೆಗೆ ಸಿಕ್ಕಿಲ್ಲ.

ಈ ಶೌಚಾಲಯದ ಅಕ್ಕಪಕ್ಕದಲ್ಲಿ ಸರ್ಕಾರಿ ಕಚೇರಿಗಳಿರುವದರಿಂದ ಇಲ್ಲಿಗೆ ಬರುವ ಸಾರ್ವಜನಿಕರು ಶೌಚಾಲಯವನ್ನು ಬಳಕೆ ಮಾಡುತ್ತಿದ್ದಾರೆ. ಆದರೆ ನೀರಿನ ಸಂಪರ್ಕವನ್ನು ಮಾಡದೆ ಇರುವದರಿಂದ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಈ ಶೌಚಾಲಯವಿದ್ದು, ಸುಮಾರು ಎರಡು ವರ್ಷಗಳ ಹಿಂದೆಯೆ ನಿರ್ಮಿಸಿದ್ದಾರೆ.

ಈ ಶೌಚಾಲಯದ ಸುತ್ತಮುತ್ತಲಿರುವ ಸರ್ಕಾರಿ ಕಚೇರಿಗಳೆಂದರೆ ಪೊಲೀಸ್ ಠಾಣೆ, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಕಟ್ಟಡ ಸೇರಿದಂತೆ ಇನ್ನಿತರ ಕಚೇರಿಗಳು ಇದೆಯಾದರೂ ಎಚ್ಚೆತ್ತುಕೊಂಡಿಲ್ಲ.

ಈ ಶೌಚಾಲಯದ ಎಲ್ಲಾ ಕೆಲಸವು ಮುಗಿದಿದ್ದು ಇನ್ನು ನೀರಿನ ಸಂಪರ್ಕ ಕೊಡುವದೊಂದು ಬಾಕಿ ಇದೆ. ಸದ್ಯದಲ್ಲೇ ನೀರಿನ ಸಂಪರ್ಕವನ್ನು ನೀಡಲಾಗುವದು ಎಂದು ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಗೌಸ್ ತಿಳಿಸಿದ್ದಾರೆ.