ವೀರಾಜಪೇಟೆ, ಜೂ. 23: ಯುವ ಜನತೆಗೆ ಸ್ವಯಂ ಉದ್ಯೋಗಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುದ್ರಾ ಯೋಜನೆಯನ್ನು ಜಾರಿಗೆ ತಂದರೂ ಆರಂಭದಲ್ಲಿ ಕೆಲವು ಬ್ಯಾಂಕ್‍ಗಳು ನಿರೀಕ್ಷಿತ ಸಹಕಾರ ನೀಡಿಲ್ಲ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ವೀರಾಜಪೇಟೆ ಶಾನ್‍ಬಾಗ್ ಕಟ್ಟಡದಲ್ಲಿರುವ ಪ್ರಧಾನ ಮಂತ್ರಿಗಳ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಸಹಾಯ ಕೇಂದ್ರದ ವತಿಯಿಂದ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಧಾನಮಂತ್ರಿಗಳು 2022ಕ್ಕೆ ದೇಶದ ಪ್ರತಿಯೊಬ್ಬರು ಉದ್ಯೋಗಸ್ಥರಾಗಿ ಸ್ವಾವಲಂಭಿಗಳಾಗಬೇಕು ಎಂಬ ಕನಸನ್ನು ಹೊಂದಿದ್ದಾರೆ. ಅರ್ಹತೆಗೆ ಅನುಗುಣವಾಗಿ ಯುವಕ-ಯುವತಿಯರಿಗೆ ಸ್ವಂತ ಉದ್ದಿಮೆಯಿಂದ ಸ್ವಾವಲಂಭಿಗಳಾಗಲು ಕೌಶಲ್ಯ ತರಬೇತಿ ಕೇಂದ್ರಗಳು ಸಹಕಾರಿಯಾಗಲಿವೆ ಎಂದರು.
ಕೌಶಲ್ಯ ಕೇಂದ್ರದಲ್ಲಿ ತರಬೇತು ಪಡೆದ ವಿದ್ಯಾರ್ಥಿಗಳಿಗೆ ಶಾಸಕರು ಹಾಗೂ ಅತಿಥಿಗಳು ಪ್ರಮಾಣ ಪತ್ರ ವಿತರಿಸಿದರು. ಉದ್ಯೋಗ ಮೇಳದಲ್ಲಿ ಸುಮಾರು 200 ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಪಾಲ್ಗೊಂಡಿದ್ದರು. ಹನ್ನೆರಡು ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು.
ಪ್ರಾರಂಭದಲ್ಲಿ ಬಿ.ಎಸ್.ಪವನ್ ಸ್ವಾಗತಿಸಿ, ವ್ಯವಸ್ಥಾಪಕ ಎಚ್.ಎಂ.ದಿವಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನವನೀತ್ ವಂದಿಸಿದರು.