ವೀರಾಜಪೇಟೆ, ಜೂ. 24: ವೀರಾಜಪೇಟೆ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿರುವದನ್ನು ಖಂಡಿಸಿ ಪಟ್ಟಣದ ನಾಗರಿಕರು ವರ್ತಕರು ಇಂದು ಆರ್.ಎಂ.ಸಿ ಸದಸ್ಯ ಮಾಳೇಟಿರ ಬೋಪಣ್ಣ ಅವರ ನೇತೃತ್ವದಲ್ಲಿ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಸಮಸ್ಯೆ ಇದೇ ರೀತಿ ಮುಂದುವರೆದರೆ ಒಂದು ವಾರದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮತ್ತೊಮ್ಮೆ ಕಚೇರಿಗೆ ಮುತ್ತಿಗೆ ಹಾಕಿ ಉಗ್ರವಾಗಿ ಪ್ರತಿಭಟಿಸಲಾಗುವದು ಎಂದು ಚೆಸ್ಕಾಂ ಅಧಿಕಾರಿಗಳನ್ನು ಎಚ್ಚರಿಸಿದರು.
ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಬೋಪಣ್ಣ, ಕಳೆದ ಬಾರಿ ಪ್ರಕೃತಿ ವಿಕೋಪ ನಡೆದಂತಹ ಸಂದರ್ಭದಲ್ಲೂ ಈ ರೀತಿಯಲ್ಲಿ ವಿದ್ಯುತ್ ಅಡಚಣೆ ಆಗುತ್ತಿರಲಿಲ್ಲ. ಪಟ್ಟಣಕ್ಕೆ ಪ್ರತಿದಿನ ಸಾವಿರಾರು ಸಾರ್ವಜನಿಕರು ಸರ್ಕಾರಿ, ಅರೆಸರ್ಕಾರಿ ಕಚೇರಿಗಳಲ್ಲಿ ಕೆಲಸ ಸೇರಿದಂತೆ ವಿವಿಧ ಕಾರ್ಯಗಳಿಗೆ ಆಗಮಿಸುತ್ತಾರೆ. ವಿದ್ಯುತ್ ಇಲ್ಲದ ಕಾರಣ ಹಾಗೆಯೇ ಹಿಂತಿರುಗುತ್ತಾರೆ. ಇನ್ನು ಕೆಲವರು ಖಾಸಗಿ ಸಂಸ್ಥೆಗಳಲ್ಲಿ ದುಬಾರಿ ಹಣ ನೀಡಿ ತಮ್ಮ ಕಾರ್ಯಗಳನ್ನು ಮಾಡಿಕೊಳ್ಳುತ್ತಾರೆ. ಇನ್ನು ಮಳೆಗಾಲ ಸರಿಯಾಗಿ ಪ್ರಾರಂಭಗೊಂಡಿಲ್ಲ ಈಗಲೇ ಇಂತಹ ಪರಿಸ್ಥಿತಿ ಎದುರಾದರೆ ಮುಂದಿನ ದಿನಗಳಲ್ಲಿ ನಾವುಗಳು ಕತ್ತಲಲ್ಲಿ ಕಳೆಯಬೇಕಾಗುತ್ತದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಡಾ ದುರ್ಗಾಪ್ರಸಾದ್ ಮಾತನಾಡಿ ವಿದ್ಯುತ್ ಅಡಚಣೆಯ ಬಗ್ಗೆ ಇಲಾಖೆಗೆ ದೂರು ನೀಡಿದರೆ ಏನಾದರು ಒಂದು ನೆಪ ಹೇಳಿ ನುಣುಚಿಕೊಂಡು ದೂರುದಾರರನ್ನು ಹಿಂತಿರುಗಿ ಕಳುಹಿಸುತ್ತಾರೆ. ಕಾರಣ ಹೇಳುವದಕ್ಕಾಗಿಯೆ ತರಬೇತಿ ಪಡೆದುಕೊಂಡ ಸಿಬ್ಬಂದಿಗಳು ಚೆಸ್ಕಾಂ ಕಚೇರಿಯಲ್ಲಿದ್ದಾರೆ ಎಂದು ಟೀಕಿಸಿದರು. ಸಹಾಯಕ ಕಾರ್ಯಪಾಲ ಅಭಿಯಂತರ ಸುರೇಶ್ ಅವರ ಅನುಪಸ್ಥಿತಿಯಲ್ಲಿ ಸಹಾಯಕ ಅಭಿಯಂತರ ಎ. ಎಂ. ದಿಲೀಪ್ ದೂರಿನ ಮನವಿ ಸ್ವೀಕರಿಸಿ ಕೆಲವೊಂದು ಕಡೆಗಳಲ್ಲಿ ಕೇಬಲ್ ಸಮಸ್ಯೆಗಳು ಇರುವದರಿಂದ ವಿದ್ಯುತ್ ಸಂಪರ್ಕದ ಅಡಚಣೆಯಾಗುತ್ತಿದೆ. ಎರಡು ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾದಪಂಡ ಕಾಶಿ ಕಾವೇರಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ ಮೋಹನ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂಬಂಡ ಕರುಣ್ ಕಾಳಯ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಗಸ್ಟಿನ್, ರಾಫಿ, ರಾಜೇಶ್, ಮಾಜಿ ಅಧ್ಯಕ್ಷ ವಿ.ಕೆ ಸತೀಶ್‍ಕುಮಾರ್, ಸಿ.ಬಿ ರವಿ ಸೇರಿದಂತೆ ಕಟ್ಟಡ ಕಾರ್ಮಿಕಸಂಘ, ಸಿಪಿಐಎಂ ಕಾರ್ಯಕರ್ತರು ಪಾಲ್ಗೊಂಡಿದ್ದರು.