ಗೋಣಿಕೊಪ್ಪ ವರದಿ, ಜೂ. 24: ಯುವಕರಿಗೆ ಹೆಚ್ಚು ಕಾರ್ಯಕ್ರಮ ಆಯೋಜಿಸುವ ಮೂಲಕ ಬೆಸ್ಟ್ ಯೂತ್ ಸರ್ವಿಸ್ ಪ್ರಶಸ್ತಿ ಸೇರಿದಂತೆ ಒಟ್ಟು 15 ಪ್ರಶಸ್ತಿಗಳನ್ನು ಗೋಣಿಕೊಪ್ಪಲು ರೋಟರಿ ಕ್ಲಬ್ ಈ ಬಾರಿ ಪಡೆದುಕೊಂಡಿದೆ.

ಯುವ ಸಮೂಹವನ್ನು ರಕ್ತದಾನಕ್ಕೆ ಪ್ರೋತ್ಸಾಹಿಸುವದು, ರೋಟ್ರಾಕ್ಟ್ ಮೂಲಕ ಯುವ ಘಟಕಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಿದ ಕಾರಣ ಬೆಸ್ಟ್ ಯೂತ್ ಸರ್ವಿಸ್ ಪ್ರಶಸ್ತಿ ಲಭಿಸಿದೆ.

ಇದರೊಂದಿಗೆ ಪಬ್ಲಿಕ್ ರಿಲೇಶನ್ ಮತ್ತು ಇಮೇಜ್ ಪ್ರಶಸ್ತಿ, ಕ್ಲಬ್ ಹಣಕಾಸು ನಿರ್ವಹಣೆ, ರೋಟ್ರಾಕ್ಟ್, ಯೂತ್ ಆರ್ಗನೈಸೇಷನ್ ವಿಭಾಗದಲ್ಲಿ ಪ್ರಥಮ, ವೃತ್ತಿಪರ ಸೇವೆ, ಮಹಿಳಾ ಸಬಲೀಕರಣ, ಸಮುದಾಯ ಸೇವೆ, ಅಂತರಾಷ್ಟ್ರೀಯ ಸೇವೆ ವಿಭಾಗದಲ್ಲಿ ದ್ವಿತೀಯ, ಸಹಭಾಗಿತ್ವ, ರೋಟರಿ ಕುಟುಂಬ ನಿರ್ವಹಣೆ, ಸಾಕ್ಷರತೆ ಮತ್ತು ಮೂಲ ಶಿಕ್ಷಣ, ಸಾಕ್ಷರತಾ ಯೋಜನಾ ವಿಭಾಗದಲ್ಲಿ ಮೂರನೆ ಸ್ಥಾನ ಪಡೆದುಕೊಂಡಿದೆ.

ಇತ್ತೀಚೆಗೆ ಮಂಗಳೂರು ಕಾರ್ಡೆಲ್ ಚರ್ಚ್ ಸಭಾಂಗಣದಲ್ಲಿ ಮೈಸೂರು, ಮಂಗಳೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಿಗೆ ಅಡಗಿರುವ ರೋಟರಿ 3181 ಜಿಲ್ಲೆ ಆಯೋಜಿಸಿದ್ದ ರೋಟರಿ ಸಂತೃಪ್ತಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ಪಾರುವಂಗಡ ದಿಲನ್ ಚೆಂಗಪ್ಪ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭ ರೋಟರಿ ಜಿಲ್ಲಾ ಗವರ್ನರ್ ಪಿ. ರೋಹಿನಾಥ್, ಪ್ರಶಸ್ತಿ ಸಲಹಾ ಸಮಿತಿ ಮುಖ್ಯಸ್ಥ ಜಯರಾಮ್ ಕೋಟ್ಯನ್, ಗೋಣಿಕೊಪ್ಪ ರೋಟರಿ ಕಾರ್ಯದರ್ಶಿ ಬೀಟಾ ಲಕ್ಷ್ಮಣ್, ಪ್ರಮುಖರುಗಳಾದ ಡಾ. ಆಶಿಕ್ ಚೆಂಗಪ್ಪ, ಪ್ರಮೋದ್ ಕಾಮತ್, ರಿಸ್ತಾ ಚೆಂಗಪ್ಪ, ವಾಸು ಉತ್ತಪ್ಪ ಇದ್ದರು.