ಕುಶಾಲನಗರ, ಜೂ. 23: ಕುಶಾಲನಗರ ದೊಡ್ಡತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ವ್ಯಕ್ತಿಯೊಬ್ಬರಿಗೆ ಜಮೀನಿನ ವಿಷಯದಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ಖಂಡಿಸಿ ಕುಶಾಲನಗರದಲ್ಲಿ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಹೂಡಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಲ್ಲಾ ಶಾಖೆಯ ಪ್ರಮುಖರಾದ ಶಿವಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ತಾ. 25 ರಂದು ಕುಶಾಲನಗರ ನಾಡಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಗುವುದು. ದೊಡ್ಡತ್ತೂರು ಗ್ರಾಮದ ಸಿದ್ದ ಎಂಬವರ ಜಮೀನಿನ ವಿಷಯದಲ್ಲಿ ಅಧಿಕಾರಿಗಳಿಗೆ ಮನವಿ ಮತ್ತು ದೂರು

ಸಲ್ಲಿಸಲಾಗಿದ್ದರೂ ಯಾವದೇ ರೀತಿಯ ಸ್ಪಂದನೆ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಸಿದ್ದನಿಗೆ ಭೂಮಿಯನ್ನು ಬಿಡಿಸಿಕೊಡಬೇಕು. ಸಿದ್ದನ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು. ಆತನ ಭೂಮಿಯಲ್ಲಿ ಕೃಷಿ ಮಾಡಲು ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದ್ದು ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಧರಣಿ ಸತ್ಯಾಗ್ರಹ ಹೂಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.