ಕುಶಾಲನಗರ, ಜೂ. 24: ಕುಶಾಲನಗರದ ಹಳೆ ಕೆಹೆಚ್ಬಿ ಕಾಲನಿಯಲ್ಲಿ ಮೊಬೈಲ್ ಟವರ್ ಅಳವಡಿಸಲು ಪ್ರಾರಂಭಗೊಂಡ ಕಾಮಗಾರಿಯನ್ನು ರದ್ದುಗೊಳಿಸಲು ಪಂಚಾಯ್ತಿ ಮೂಲಕ ಕ್ರಮ ಕೈಗೊಳ್ಳಲಾಗುವದೆಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುಜಯ್ ಕುಮಾರ್ ಭರವಸೆ ನೀಡಿದ್ದಾರೆ.
ಸ್ಥಳೀಯ ನಿವಾಸಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗುವದೆಂದು ತಿಳಿಸಿರುವ ಮುಖ್ಯಾಧಿಕಾರಿ ಸುಜಯ್ಕುಮಾರ್, ಕಾಮಗಾರಿಗೆ ಪಂಚಾಯಿತಿ ಅನುಮತಿ ನೀಡಿಲ್ಲ. ಈ ಸಂಬಂಧ ಕಾಮಗಾರಿ ಕೈಗೊಂಡ ಜಾಗದ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲಾಗುವದು ಎಂದರು.
ಸ್ಥಳೀಯ ಆಡಳಿತದ ಎನ್ಒಸಿ ಪಡೆಯದೆ ಜನನಿಬಿಡ ಪ್ರದೇಶದಲ್ಲಿ ಮೊಬೈಲ್ ಟವರ್ ಅಳವಡಿಸಲಾಗುತ್ತಿದೆ. ಮೊಬೈಲ್ ಟವರ್ನಿಂದ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ಆರೋಪಿಸಿದ ಕಾಲನಿ ನಿವಾಸಿಗಳು ಟವರ್ ಅಳವಡಿಕೆಗೆ ತೆಗೆದಿರುವ ಗುಂಡಿಯನ್ನು ಮುಚ್ಚಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಕಾಲನಿ ನಿವಾಸಿಗಳಾದ ಎಂ.ನಂಜುಂಡಸ್ವಾಮಿ, ಪಪಂ ಸದಸ್ಯೆ ಜಯಲಕ್ಷ್ಮಮ್ಮ, ಜಿಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್, ಸಲೀನ ಡಿ ಕುನ್ನ, ಜೆ.ಪಿಂಟೋ, ಡಾ.ವಿನಯ್, ಗಣಪತಿ, ರವಿ, ವೆಂಕಟೇಶ್, ನಾಗರಾಜ್, ಯಶೋಧಮ್ಮ ಮತ್ತಿತರರು ಇದ್ದರು.