ಮಡಿಕೇರಿ, ಜೂ. 24: ಸೇವೆ ಎಂಬದು ಸದಾ ಮಹತ್ತರವಾದದ್ದನ್ನೇ ಬಯಸುತ್ತದೆ ಎಂಬ ತಪ್ಪು ಕಲ್ಪನೆ ಮರೆಯಾಗಿ, ಕಿಂಚಿತ್ತು ಸೇವೆ ಕೂಡ ಮಹತ್ವದ್ದು ಎಂಬ ಭಾವನೆ ಬೇರೂರಬೇಕಾದ ಅಗತ್ಯ ಇಂದಿನ ಕಾಲಘಟ್ಟದಲ್ಲಿದೆ ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ರೋಟರಿ ಮಿಸ್ಟಿಹಿಲ್ಸ್ ನ ನೂತನ ಅಧ್ಯಕ್ಷರಾಗಿ ಎಂ.ಆರ್. ಜಗದೀಶ್ ಮತ್ತು ಕಾರ್ಯದರ್ಶಿಯಾಗಿ ಪ್ರಮೋದ್ ಕುಮಾರ್ ರೈ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಯಾವದೇ ಚಿಕ್ಕ ಸೇವೆಯನ್ನೂ ಉಪೇಕ್ಷೆ ಮಾಡಬಾರದು; ಯಾವದೇ ಚೌಕಟ್ಟಿಗೆ ನಿಲುಕದ ಸೇವೆ ಎಲ್ಲಾ ವ್ಯಾಪಿಯನ್ನೂ ಮೀರಿ ವಿಶಾಲವಾಗಿದೆ, ನಾವು ಮನುಜರಾಗಿ ಜೀವಿಸಿದ್ದಕ್ಕೆ ಸೇವೆಯಿಂದ ಸಾರ್ಥಕತೆ ದೊರಕುತ್ತದೆ ಎಂದು ಹೇಳಿದರು.

ಯಾವದೇ ವ್ಯಕ್ತಿ, ಸಂಘಸಂಸ್ಥೆಗಳಿಗೆ ತಾವು ಮಾಡಿದ ಸೇವೆಯ ಬಗ್ಗೆ ಅಹಂ ಇರಕೂಡದು ಎಂದು ಕಿವಿಮಾತು ಹೇಳಿದ ಸ್ವಾಮೀಜಿ, ಎಲ್ಲವನ್ನೂ ಸಂಪತ್ತಿನಿಂದಲೇ ಪಡೆಯಬಹುದು ಎಂದು ಅನೇಕರಲ್ಲಿರುವ ಭ್ರಮೆ ನಿವಾರಣೆಯಾಗಬೇಕು. ಭಗವಂತ ಕೊಟ್ಟ ಸಿರಿವಂತಿಕೆಯಲ್ಲಿ ಸ್ವಲ್ಪ ಪಾಲನ್ನಾದರೂ ಸಮಾಜದಲ್ಲಿರುವ ಶೋಷಿತ ವರ್ಗಕ್ಕೆ ವಿನಿಯೋಗಿಸಬೇಕು. ಈ ರೀತಿ ಸಮಾಜಕ್ಕೆ ನೀಡುವ ಮನೋಭಾವ ಹಾಸುಹೊಕ್ಕಾದರೆ ನಾನಾ ಕಡೆಗಳಿಂದ ಮತ್ತಷ್ಟು ನೆರವು ದಾನಿಗಳಿಗೆ ದೊರಕುವದು ಖಂಡಿತಾ ಎಂದು ಹೇಳಿದರು.

ವೃದ್ಧರಿಗೆ ಸಹಾಯ ಮಾಡುವದು ಸಂಘ ಸಂಸ್ಥೆಗಳ ಕರ್ತವ್ಯವಾಗಬೇಕೆಂದು ಹೇಳಿದ ಸ್ವಾಮೀಜಿ, ಆದರೆ ವೃದ್ಧಾಶ್ರಮಗಳು ಸಮಾಜದಲ್ಲಿ ಹೆಚ್ಚುತ್ತಿರುವದು ಆತಂಕಕಾರಿಯಾಗಿದ್ದು ಆರೋಗ್ಯಕರ ಹಾಗೂ ನಾಗರಿಕ ಸಮಾಜಕ್ಕೆ ಉತ್ತಮ ಲಕ್ಷಣವಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಮಿಸ್ಟಿ ಹಿಲ್ಸ್‍ನ ನೂತನ ಆಡಳಿತ ಮಂಡಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದ ರೋಟರಿಯ ಮಾಜಿ ಸಹಾಯಕ ಗವರ್ನರ್ ಹಾಗೂ ಸದಸ್ಯತ್ವ ನೋಂದಣಿ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ.ರವೀಂದ್ರ ರೈ, ಜಾಗತಿಕ ಮಟ್ಟದಲ್ಲಿನ 34 ರೋಟರಿ ವಲಯದ ಪೈಕಿ ವಲಯ 5 ರಲ್ಲಿ ಭಾರತವು 72 ಸಾವಿರ ಸದಸ್ಯರನ್ನು ಹೊಂದಿದೆ. ಈ ಸಾಲಿನಲ್ಲಿ 6,500 ಹೊಸ ಸದಸ್ಯರನ್ನು ಭಾರತ ರೋಟರಿಗೆ ಸೇರ್ಪಡೆಗೊಳಿಸಿದೆ ಎಂದರಲ್ಲದೆ, ಈ ಪೈಕಿ 850 ಸದಸ್ಯರ ನೋಂದಣಿ ಮೂಲಕ ಕೊಡಗು ಜಿಲ್ಲೆಯನ್ನೂ ಒಳಗೊಂಡ ರೋಟರಿ 3181 ಜಿಲ್ಲೆಯೂ ಅತ್ಯಧಿಕ ಸದಸ್ಯರ ಸೇರ್ಪಡೆಯ ವಿಶ್ವದಾಖಲೆ ಮಾಡಿದೆ ಎಂದರು. ಸಮಾಜಸೇವೆ, ಶಾಂತಿ, ಗೆಳೆತನದ ಸಂದೇಶವನ್ನು ರೋಟರಿ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ರವೀಂದ್ರರೈ ಹೆಮ್ಮೆ ವ್ಯಕ್ತಪಡಿಸಿದರು.

ಮಾತಿಗಿಂತ ಕೃತಿಯೇ ಸಾಮಾಜಿಕ ಸಂಸ್ಥೆಗಳಿಗೆ ಮುಖ್ಯವಾಗಿ ಫಲಾಪೇಕ್ಷೆಯಿಲ್ಲದ ಕಾರ್ಯಸಾಧನೆ ಆದ್ಯತೆಯಾಗಬೇಕೆಂದು ರವೀಂದ್ರರೈ ಹೇಳಿದರು.

ರೋಟರಿ ವಲಯ 6 ರ ನೂತನ ಸಹಾಯಕ ಗವನ9ರ್ ಪಿ.ನಾಗೇಶ್ ಮಿಸ್ಟಿ ಹಿಲ್ಸ್‍ನ ವಾರ್ತಾ ಸಂಚಿಕೆ ರೋಟೋ ಮಿಸ್ಟ್ ನ್ನು ಬಿಡುಗಡೆ ಗೊಳಿಸಿ ಮಾತನಾಡಿ, ಜೀವನ ಸಂಧ್ಯಾ, ಸೇವ್ ಎ ಲೈಫ್ ನಂಥ ಯೋಜನೆಗಳ ಮೂಲಕ ರೋಟರಿ ಜಿಲ್ಲೆ ಈ ಬಾರಿ ಸಾಕಷ್ಟು ಫಲಾನುಭವಿಗಳನ್ನು ತಲಪಲಿದೆ ಎಂದರಲ್ಲದೇ, ರೋಟರಿ ಮಿಸ್ಟಿ ಹಿಲ್ಸ್ ಸದಾ ಸಕ್ರಿಯತೆಗೆ ಹೆಸರಾಗಿ ರುವ ಕ್ಲಬ್ ಎಂದೂ ಶ್ಲಾಘಿಸಿದರು.

ಮಡಿಕೇರಿಯ ವಿಕಾಸ ಜನಸೇವಾ ಟ್ರಸ್ಟ್‍ನ ವಾಸಿಗಳಿಗೆ ಟ್ರಸ್ಟ್ ನ ಮುಖ್ಯಸ್ಥ ರಮೇಶ್ ಮೂಲಕ ಮಿಸ್ಟಿ ಹಿಲ್ಸ್ ವತಿಯಿಂದ ಪರಿಕರಗಳನ್ನು ವಿತರಿಸಲಾಯಿತು.

ಮಿಸ್ಟಿ ಹಿಲ್ಸ್‍ಗೆ ಎಸ್.ಎಸ್. ಪೂವಯ್ಯ ಮತ್ತು ಬಿ.ಕೆ. ಕಾರ್ಯಪ್ಪ ಅವರನ್ನು ನೂತನ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು. ಡಾ.ರಾಜೇಶ್ವರಿ ಅವರಿಗೆ ರೋಟರಿ ಪಿ.ಎಚ್.ಎಫ್.ನ್ನು ನೀಡಲಾಯಿತಲ್ಲದೆ, ರೋಟರಿ ಜಿಲ್ಲೆಯಲ್ಲಿ ಅತ್ಯಧಿಕ ಸದಸ್ಯರು ಹಾಗೂ ಕ್ಲಬ್‍ಗಳನ್ನು ನೋಂದಾಯಿಸಿದ ಹಿನೆÀ್ನಲೆಯಲ್ಲಿ ಬಿ.ಕೆ.ರವೀಂದ್ರ ರೈ ಅವರನ್ನು ಸನ್ಮಾನಿಸಲಾಯಿತು. ಮಿಸ್ಟಿ ಹಿಲ್ಸ್‍ನ ಸಾಧಕ ಮಕ್ಕಳನ್ನೂ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ರೋಟರಿಯ ಹಿಂದಿನ ಸಾಲಿನ ಸಹಾಯಕ ಗವರ್ನರ್ ಧರ್ಮಪುರ ನಾರಾಯಣ್, ನೂತನ ಸಾಲಿನ ರೋಟರಿ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ., ಹಿಂದಿನ ಸಾಲಿನ ವಲಯ ಕಾರ್ಯದರ್ಶಿ ಕ್ರೆಜ್ವಲ್ ಕೋಟ್ಸ್, ಜೋನಲ್ ಲೆಫ್ಟಿನೆಂಟ್ ಕೇಶವಪ್ರಸಾದ್ ಮುಳಿಯ, ಹಿಂದಿನ ಸಾಲಿನ ಜೋನಲ್ ಲೆಫ್ಟಿನೆಂಟ್ ಚೀಯಣ್ಣ, ಮಿಸ್ಟಿ ಹಿಲ್ಸ್‍ನ ನಿರ್ಗಮಿತ ಅಧ್ಯಕ್ಷ ಜಿ.ಆರ್. ರವಿಶಂಕರ್, ನಿರ್ಗಮಿತ ಕಾರ್ಯದರ್ಶಿ ಎಂ.ಯು. ಮಹೇಶ್ ವೇದಿಕೆಯಲ್ಲಿದ್ದರು.

ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ವಂದಿಸಿದರು. ವಲಯ 6 ರ ವಿವಿಧ ರೋಟರಿ ಕ್ಲಬ್ ಗಳ ಪ್ರಮುಖರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಎ.ಕೆ.ವಿನೋದ್, ಡಾ.ನವೀನ್, ಲೀನಾ ಪೂವಯ್ಯ, ಎಂ.ಧನಂಜಯ್, ಡಾ.ಶ್ರೀಧರ್ ಹೆಗ್ಗಡೆ, ಪ್ರಸಾದ್ ಗೌಡ, ಎಂ.ಪಿ.ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.