ಸೋಮವಾರಪೇಟೆ, ಜೂ. 22: ತಾಲೂಕಿನ ಅರಸಿನಗುಪ್ಪೆ-ಸಿದ್ಧಲಿಂಗಪುರದ ಶ್ರೀ ಮಂಜುನಾಥ ಸ್ವಾಮಿ ಮತ್ತು ನವನಾಗ ದೇವಾ ಲಯದಲ್ಲಿ ವಾರ್ಷಿಕ ಪೂಜೋತ್ಸವ ವಿವಿಧ ಧಾರ್ಮಿಕ ಕೈಂಕ ರ್ಯಗಳೊಂದಿಗೆ ಸಂಪನ್ನಗೊಂಡಿತು.
ದೇವಾಲಯದ ಪ್ರಧಾನ ಗುರು ರಾಜೇಶ್‍ನಾಥ್ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ಮಂಜುನಾಥ ದೇವರ ಸನ್ನಿಧಿಯಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ನಡೆಸುವ ಮೂಲಕ ವಾರ್ಷಿಕ ಮಹಾ ಪೂಜೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಗಣಪತಿ ಹವನ, ಶುದ್ಧೀಕಲಶಾಭಿಷೇಕ, ಪಂಚಾಮೃತಾಭಿಷೇಕ, ಅಲಂಕಾರ ಪೂಜೆ, ಮಹಾಮಂಗಳಾರತಿ ನೆರವೇರಿತು.
ಕ್ಷೇತ್ರದಲ್ಲಿರುವ ಶ್ರೀ ನವನಾಗ ಸನ್ನಿಧಿಯಲ್ಲಿ ತಂಬಿಲ ಸೇವೆ, ಆಶ್ಲೇಷ ಬಲಿ ಪೂಜೆ, ಹೋಮ, ಮಹಾ ಪೂಜೆ, ನಾಗದೇವರಿಗೆ ಎಳನೀರು ಅಭಿಷೇಕ, ಹಾಲಾಭಿಷೇಕ, ಮಹಾಮಂಗಳಾರತಿ ನಡೆಯಿತು.
ಮಂಗಳೂರಿನ ವಿಠಲದಾಸ ತಂತ್ರಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ಜಗದೀಶ್ ಉಡುಪ ಪೌರೋಹಿತ್ಯದಲ್ಲಿ ವಾರ್ಷಿಕ ಪೂಜಾ ಕೈಂಕರ್ಯಗಳು ನಡೆದವು. ಪೂಜೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತಾದಿಗಳಿಗೆ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಗೌರವಾಧ್ಯಕ್ಷ ನಾಪಂಡ ಮುದ್ದಪ್ಪ, ತೊರೆನೂರು ಗ್ರಾ.ಪಂ. ಸದಸ್ಯ ಕಿಶೋರ್‍ಕುಮಾರ್ ಸೇರಿದಂತೆ ನೂರಾರು ಮಂದಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ರಾಜೇಶ್‍ನಾಥ್ ಗುರೂಜಿ, ಸಾಮೂಹಿಕ ಧಾರ್ಮಿಕ ಆಚರಣೆ ಗಳಿಂದ ಸಾಮರಸ್ಯ ವೃದ್ಧಿಯಾಗುತ್ತದೆ. ಭಗವಂತನ ಸ್ಮರಣೆಯಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ ಎಂದರು.