ಸಿದ್ದಾಪುರ, ಜೂ. 21: ಪಾಲಿಬೆಟ್ಟ ಗ್ರಾ.ಪಂ.ನ ಗ್ರಾಮಸಭೆಯು ಅಧ್ಯಕ್ಷ ಪುಲಿಯಂಡ ಬೋಪಣ್ಣ ಅಧ್ಯಕ್ಷತೆಯಲ್ಲಿ ಪಾಲಿಬೆಟ್ಟ ಸಮುದಾಯ ಭವನದಲ್ಲಿ ನಡೆಯಿತು.
ಪಾಲಿಬೆಟ್ಟ ಪಟ್ಟಣ ನಿವಾಸಿ ವೆಂಕಟೇಶ್ ಮಾತನಾಡಿ, ಪಾಲಿಬೆಟ್ಟ ಗ್ರಾ.ಪಂ ಗೆ ಒಳಪಡುವ ಬ್ರಿಟೀಷರ ಕಾಲದ ಕಟ್ಟಡವನ್ನು ಪಂಚಾಯಿತಿಯು ಏಕಾಏಕಿ ಕೆಡವಿ ಹಾಕಿರುವ ಕ್ರಮ ಸಮಂಜಸವಲ್ಲ ಎಂದರು. ಇದಕ್ಕೆ ದ್ವನಿಗೂಡಿಸಿದ ಗ್ರಾಮಸ್ಥ ನಾಸರ್ ಮಾತನಾಡಿ, ಕೆಡವಿಹಾಕಲಾದ ಹಳೆಯ ಕಟ್ಟಡದ ಕಲ್ಲು ಸೇರಿದಂತೆ ಇತರ ಸಾಮಗ್ರಿಗಳು ಏನಾಯಿತು ಎಲ್ಲಿದೆ ಎಂದು ಅಧ್ಯಕ್ಷರ ಬಳಿ ಪ್ರಶ್ನಿಸಿದರು. ಈ ಸಂದರ್ಭ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ತನ್ನ ಗಮನಕ್ಕೆ ಬಂದಿಲ್ಲ ಎಂದು ಅಧ್ಯಕ್ಷರು ಪ್ರತಿಕ್ರಿಯಿಸಿದರು. ಪಾಲಿಬೆಟ್ಟದ ಯಂಗ್ ಇಂಡಿಯಾ ಯುವಕ ಸಂಘದ ಕಟ್ಟಡ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಪಾಲಿಬೆಟ್ಟ ಪಟ್ಟಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಿದ್ದು, ಬಗೆಹರಿಸುವಂತೆ ಗ್ರಾಮಸ್ಥ ರಾಮ್‍ದಾಸ್ ತಿಳಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವದಾಗಿ ಪಿ.ಡಿ.ಓ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ ಕಟ್ಟಡದ ಹಿಂಬಾಗದಲ್ಲಿರುವ ನಿವಾಸಿಗಳ ಮನೆ ಕುಸಿದು ಬೀಳುವ ಹಂತದಲ್ಲಿದ್ದು, ಹಲವು ಬಾರಿ ಗ್ರಾ.ಪಂ ಗೆ ದೂರು ನೀಡಿದ್ದರೂ ಪ್ರಯೋಜನವಾಗಲಿಲ್ಲ ಎಂದು ನಿವಾಸಿಗಳು ಅಳಲನ್ನು ತೋಡಿಕೊಂಡರು. ಮಳೆಗಾಲವಾದ ಕಾರಣ ಮನೆ ಕುಸಿದು ಬೀಳುವ ಸಾಧ್ಯತೆ ಇದೆ ಎಂದು ಜಯಮ್ಮ ಹಾಗೂ ಸುಶೀಲ ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವದಾಗಿ ಅಧ್ಯಕ್ಷರು ಭರವಸೆ ನೀಡಿದರು.
ಪಾಲಿಬೆಟ್ಟ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ವಿದ್ಯಾರ್ಥಿಗಳು, ವರ್ತಕರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸಮಸ್ಯೆಯನ್ನು ಬಗೆಹರಿಸುವಂತೆ ಗ್ರಾಮಸ್ಥರು ಸೆಸ್ಕ್ ಅಧಿಕಾರಿಗಳ ಗಮನ ಸೆಳೆದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಗ್ರಾಮಸಭೆಯಲ್ಲಿ ನೋಡಲ್ ಅಧಿಕಾರಿ, ಪಿ.ಡಿ.ಓ. ಶ್ರೀನಿವಾಸ್, ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಇದ್ದರು.