ಮಡಿಕೇರಿ, ಜೂ. 21: ಕೊಡಗಿನಲ್ಲಿ ಸ್ಥಳೀಯ ಜನರಿಗೆ ಸಣ್ಣ ಸಣ್ಣ ಕೆಲಸಗಳಿಗೆ ಸ್ವಂತ ಬಳಕೆಗೆ ಸ್ವಲ್ಪ ಪ್ರಮಾಣದಲ್ಲಿ ಮರಳಿನ ಅಗತ್ಯತೆ ಇರುತ್ತದೆ. ಆದರೆ ಇದನ್ನು ಹೊರಗಡೆಯಿಂದ ವಾಹನದಲ್ಲಿ ತರಲು ನಿರ್ಬಂಧ ಹಾಕಲಾಗಿದ್ದು, ಸ್ಥಳೀಯ ಜನರು ತಮ್ಮ ಟಿಲ್ಲರ್ - ಪಿಕ್‍ಅಪ್ ವಾಹನದಲ್ಲಿ ಸ್ವಲ್ಪ ಪ್ರಮಾಣದ ಮರಳು ಸಾಗಿಸಲು ಅವಕಾಶ ನೀಡಬೇಕು ಎಂದು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.

ಈ ಕುರಿತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೇಟಿ ಯಾಗಿದ್ದ ಸಮಿತಿ ಪದಾಧಿಕಾರಿಗಳು ನಿರ್ಬಂಧವನ್ನು ವಿಧಿಸದೆ ಸ್ಥಳೀಯರಿಗೆ ಅವರ ಅಗತ್ಯತೆಗೆ ಸನಿಹದ ತೋಡು - ನದಿಗಳಿಂದ ಮರಳು ತೆಗೆಯಲು ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ.

ಸಮಿತಿ ಅಧ್ಯಕ್ಷ ಎ.ಎಸ್. ಕಟ್ಟಿಮಂದಯ್ಯ, ಕಾರ್ಯಾಧ್ಯಕ್ಷ ಬಾಚಿರ ಎಸ್. ಕಾರ್ಯಪ್ಪ ಮತ್ತಿತರರು ಈ ಬಗ್ಗೆ ಗ್ರಾ.ಪಂ. ದೃಢೀಕರಣದ ಮೂಲಕ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ರೈತರಿಗೆ ಮಳೆ ಪರಿಹಾರ ವಿತರಣೆಯಲ್ಲಿ ಆದ ತಾರತಮ್ಯವನ್ನು ಸರಿಪಡಿಸಬೇಕೆಂದು ಈ ಸಂದರ್ಭ ಗಮನಕ್ಕೆ ತರಲಾಯಿತು.

ಎಸ್ಪಿಗೆ ಮನವಿ : ಜಿಲ್ಲೆಯಲ್ಲಿ ಪ್ರಸ್ತುತದ ದಿನಗಳಲ್ಲಿ ಗಾಂಜಾ ಹಾವಳಿ ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆಯಿಂದ ಈ ಕುರಿತು ಸೂಕ್ತ ಕ್ರಮಕೈಗೊಳ್ಳಲು ನಿರ್ದೇಶನ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಪ್ರತ್ಯೇಕ ಮನವಿಯನ್ನು ಸಲ್ಲಿಸಲಾಗಿದೆ.

ನಿಯೋಗದಲ್ಲಿ ಕಟ್ಟಿಮಂದಯ್ಯ, ಬಿ.ಎನ್. ಕಾರ್ಯಪ್ಪ ಅವರೊಂದಿಗೆ ಸಮಿತಿ ಉಪಾಧ್ಯಕ್ಷ ಕೆ.ಕೆ. ಉತ್ತಪ್ಪ, ಖಜಾಂಚಿ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ಕಾವೇರಪ್ಪ ಹಾಜರಿದ್ದರು.