ಮಡಿಕೇರಿ, ಜೂ. 20: ಮಡಿಕೇರಿ ಹೃದಯಭಾಗದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಕಳೆದ ಮಳೆಗಾಲದಲ್ಲಿ ಕುಸಿದಿರುವ ಸ್ಥಳದಲ್ಲಿ ತಡೆಗೋಡೆಯ ನಿರ್ಮಾಣಕ್ಕೆ ನಗರಸಭೆ ಕಾರ್ಯೋನ್ಮುಖವಾಗಿದೆ. ಬದಲಾಗಿ ‘ಮಡಿಕೇರಿ ಸ್ಕ್ವೇರ್’ ನಿರ್ಮಾಣ ಸಂಬಂಧ ಭವಿಷ್ಯದಲ್ಲಿ ಕ್ರಮ ವಹಿಸುವದಾಗಿ ಹೇಳಿಕೊಂಡಿದೆ. ‘ಶಕ್ತಿ’ಗೆ ಲಭಿಸಿರುವ ನಿಖರ ಮಾಹಿತಿ ಪ್ರಕಾರ ಕಳೆದ ಮಳೆ ಪರಿಹಾರ ನಿಧಿಯಿಂದ ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿರುವ ರೂ. 1.07 ಕೋಟಿ ಹಣದಲ್ಲಿ ಈಗ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗುತ್ತದೆ ಎಂದು ಆಯುಕ್ತ ಕೆ.ಎಲ್. ರಮೇಶ್ ಖಚಿತಪಡಿಸಿದ್ದಾರೆ.ಆ ಪ್ರಕಾರ ಪ್ರಸಕ್ತ ಸುಮಾರು 30 ಮೀಟರ್ ಅಗಲ ಹಾಗೂ 20 ಮೀಟರ್ ಎತ್ತರದ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲು ಈಗಾಗಲೇ ಕಿಶೋರ್ ಬಾಬು ಎಂಬವರಿಗೆ ಗುತ್ತಿಗೆ ನೀಡಿದ್ದು, ಈ ಕೆಲಸಕ್ಕೆ ಚಾಲನೆ ಲಭಿಸಿದೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಾ.ರಾ. ಮಹೇಶ್ ನಿರ್ದೇಶನದಂತೆ ಭವಿಷ್ಯದಲ್ಲಿ ಇದೇ ತಡೆಗೋಡೆಗೆ ಹೊಂದಿಕೊಂಡಂತೆ ಪ್ರವಾಸೀ ಕೇಂದ್ರವನ್ನಾಗಿ ರೂಪಿಸಲು ಕ್ರಮವಹಿಸಲಾಗುತ್ತದೆ. ಈ ಸಂಬಂಧ ಪ್ರವಾಸೋದ್ಯಮ ಇಲಾಖೆ ತಾಂತ್ರಿಕ ಇಂಜಿನಿಯರ್, (ಮೊದಲ ಪುಟದಿಂದ) ನಗರಸಭೆಯ ಅಭಿಯಂತರರು ಜಂಟಿಯಾಗಿ ಈ ಬಗ್ಗೆ ನಕಾಶೆ ಯೊಂದಿಗೆ ಕ್ರಿಯಾಯೋಜನೆ ರೂಪಿಸಿದ್ದು, ಇನ್ನಷ್ಟೇ ಸಚಿವರು ಹಾಗೂ ಪ್ರವಾಸೋದ್ಯಮ ಇಲಾಖೆಯ ಅನುಮೋದನೆ ಲಭಿಸಬೇಕಿದೆ ಎಂದು ಅವರು ವಿವರಿಸಿದ್ದಾರೆ.

ಹಾಗಾಗಿ ಜಿಲ್ಲಾಧಿಕಾರಿಗಳ ಕಾಳಜಿಯಂತೆ ಈಗ ತುರ್ತು ತಡೆಗೋಡೆ ನಿರ್ಮಿಸಿ, ಮಳೆಯಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಹಾನಿ ತಡೆಗಟ್ಟಲು ಕ್ರಮವಹಿಸಲಾಗುತ್ತಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಕಾರ್ಮಿಕರ ಆಕ್ರೋಶ : ಪ್ರಸಕ್ತ ನಗರಸಭೆ ಕೈಗೊಂಡಿರುವ ಕಾಮಗಾರಿಯ ಪರಿಣಾಮ ನಿತ್ಯ ಪ್ರಯಾಣಿಕರೊಂದಿಗೆ; ಬಸ್‍ಗಳು ಹಾಗೂ ಇತರ ವಾಹನ ಚಾಲಕರು ತೊಂದರೆ ಅನುಭವಿಸುವಂತಾಗಿದೆ ಎಂದು ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ಭರತ್ ಹಾಗೂ ಕಾರ್ಯದರ್ಶಿ ಸಲೀಂ ಸಹಿತ ಇತರರು ‘ಶಕ್ತಿ’ಯೊಂದಿಗೆ ಅಸಮಾ ಧಾನ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರು ಸೇರಿದಂತೆ ನಿತ್ಯ ಪ್ರಯಾಣಿಕರ ತೊಂದರೆ ಬಗ್ಗೆ ಜಿಲ್ಲಾಧಿಕಾರಿಗಳು ಕುಂದುಕೊರತೆ ಆಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ದಾನಿಗಳ ಸಲಹೆ ಈಡೇರಿಸಲಿ : ಹಿಂದಿನ ಬಸ್ ನಿಲ್ದಾಣ ಬಳಿ ಮುಳಿಯ ಪ್ರತಿಷ್ಠಾನದಿಂದ ಪ್ರಯಾಣಿಕರಿಗೆ ತಂಗುದಾಣ ವ್ಯವಸ್ಥೆಯೊಂದಿಗೆ; ಶಾಲಾ - ಕಾಲೇಜು ವಿದ್ಯಾರ್ಥಿನಿಯರ ಸಹಿತ ಪ್ರಯಾಣಿಕರು ತುರ್ತು ಕರೆಗೆ ಪೂರಕ ಆಧುನಿಕ ಶೌಚಾಲಯ ಕಲ್ಪಿಸುವದಾಗಿ ಮುಂದೆ ಬಂದಿದ್ದಾಗಿ ಅವರುಗಳು ಬೊಟ್ಟು ಮಾಡಿದ್ದಾರೆ. ಈ ಬಗ್ಗೆ ನಗರಸಭೆ ಅಸಹಕಾರ ತೋರಿದ್ದರಿಂದ ಜನತೆ ತೊಂದರೆಪಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ನಾಗರಿಕರ ಆಶಯ ದಿಕ್ಕರಿಸಿ, ಇಲ್ಲಿ ಪ್ರವಾಸಿ ತಾಣ ರೂಪಿಸುವ ಬದಲಿಗೆ ಕೋಟಿ ಹಣ ವ್ಯಯಿಸಿ ಕೈಗೊಂಡಿರುವ ಕಾಮಗಾರಿ ಯಿಂದ ಭವಿಷ್ಯದಲ್ಲಿ ಸಾಕಷ್ಟು ಕಿಷ್ಕಿಂಧೆ ಎದುರಾಗಲಿದೆ ಎಂದು ಅವರುಗಳು ಬೊಟ್ಟು ಮಾಡಿದ್ದಾರೆ.