ಮಡಿಕೇರಿ, ಜೂ. 20: ಕರ್ನಾಟಕದ ಪುಟ್ಟ ಜಿಲ್ಲೆ ಕೊಡಗು. ಆದರೆ ರಾಜ್ಯಕ್ಕೆ ಮಾತ್ರವಲ್ಲದೆ ದೇಶಕ್ಕೆ ಕೊಡಗಿನ ಕೊಡುಗೆ ಅಪಾರaa. ಸೇನೆ, ಕ್ರೀಡೆ, ಕಾಫಿ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಕೊಡಗು ಜಿಲ್ಲೆಯ ಕೊಡುಗೆ ಸಾಕಷ್ಟಿದೆ. ಮಾತ್ರವಲ್ಲದೆ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಸಂಭವಿಸಿದ ಸಾವು - ನೋವುಗಳಿಗೂ ನಮ್ಮ ಈ ಪುಟ್ಟ ಜಿಲ್ಲೆಯ ಲಕ್ಷಾಂತರ ಹೃದಯಗಳು ಮಿಡಿದಿವೆ. ಕುಡಿಯಲು ನೀರನ್ನು ನೀಡುವದರ ಜೊತೆಗೆ ಅಸಹಾಯಕರ ಕಣ್ಣೀರು ಒರೆಸುವಲ್ಲಿ ಕೊಡಗಿನವರು ಎಂದೂ ಹಿಂದೆ ಬಿದ್ದಿಲ್ಲ.ಆದರೆ, ಯಾರೂ ಊಹಿಸದ ರೀತಿಯಲ್ಲಿ ಕಳೆದ ಬಾರಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ; ಸ್ವಾಭಿಮಾನದಿಂದ ಬದುಕುತ್ತಿದ್ದ ಕೊಡಗಿನ ಜನರ ಜೀವನವನ್ನೆ ದುರ್ಬರವಾಗಿಸಿತು. ಹತ್ತಾರು ಜೀವ ಹಾನಿಗಳು ಸಂಭವಿಸುವದರ ಜೊತೆಗೆ ಸಾವಿರಾರು ಮಂದಿ ಮನೆಗಳನ್ನು, ಆಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾದರು. ಆದರೂ ಮಾಡಿದ ದಾನ ಧರ್ಮ ಎಂದಿಗೂ ಕೈ ಬಿಡುವದಿಲ್ಲ ಎಂಬ ಮಾತಿನಂತೆ ಲೆಕ್ಕಕ್ಕೆ ಸಿಗದಷ್ಟು ನೆರವು ಕೊಡಗಿನ ಸಂತ್ರಸ್ತರಿಗಾಗಿ ಹರಿದು ಬಂತು. ಸಾಮಗ್ರಿಗಳು, ಆಹಾರ ಪದಾರ್ಥಗಳು ಮಾತ್ರವಲ್ಲದೆ ಕೋಟ್ಯಂತರ ರೂಪಾಯಿ ಧನ ಸಹಾಯವು ದಾನಿಗಳಿಂದ ಲಭಿಸಿತು. ಇವೆಲ್ಲದರ ಪರಿಣಾಮ ಕುಂದಿಹೋಗಿದ್ದ ಕೊಡಗಿನವರ ಆತ್ಮಸ್ಥೈರ್ಯ ಕೊಂಚ ಹಿಗ್ಗಲಾರಂಭಿಸಿತು. ಕಳೆದುಹೋಗಿದ್ದ ಬದುಕು ಮತ್ತೆ ಸಿಗುವ ಭರವಸೆ ಮೂಡಿತು.

ಆದರೇನು ಪ್ರಯೋಜನ?

ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಿಕೊಡುವ ಜವಾಬ್ದಾರಿವಹಿಸಿಕೊಂಡ ಸರ್ಕಾರ ಇನ್ನೂ ಕೂಡ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ಪೂರ್ಣಗೊಳಿಸಿಲ್ಲ. ಪ್ರಾಕೃತಿಕ ವಿಕೋಪ ಸಂಭವಿಸಿ ಒಂದು ವರ್ಷಗಳಾಗುತ್ತಾ ಬಂದರೂ ಇಲ್ಲಿಯವರೆಗೆ ಸರ್ಕಾರದ ಮನೆಗಳು ನಿರಾಶ್ರಿತರಿಗೆ ಲಭ್ಯವಾಗಿಲ್ಲ. ಆದಷ್ಟು ತ್ವರಿತಗತಿಯಲ್ಲಿ ಕೊಡಗು ಜಿಲ್ಲೆಯನ್ನು ಪುನರ್‍ನಿರ್ಮಾಣ ಮಾಡುವ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಚನೆಗೊಂಡ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ಇದುವರೆಗೆ ಒಂದೇ ಒಂದು ಸಭೆಯನ್ನು ನಡೆಸಿಲ್ಲ. ಪ್ರಾಧಿಕಾರದ ಸಭೆ ನಡೆಸಿ ಮುಂದಡಿ ಇಟ್ಟಿದ್ದರೆ ಪರಿಹಾರ ಕಾಮಗಾರಿಗಳು ಚುರುಕಾಗುತ್ತಿದ್ದುದರಲ್ಲಿ ಸಂಶಯವಿಲ್ಲ. ಆದರೆ, ಸರ್ಕಾರದ ಕೆಲ ಸಚಿವರು ಆಗೊಮ್ಮೆ ಈಗೊಮ್ಮೆ ಜಿಲ್ಲೆಗೆ ಭೇಟಿ ನೀಡಿ ಎರಡು ತಿಂಗಳಲ್ಲಿ ಮನೆಗಳನ್ನು ಹಸ್ತಾಂತರಿಸುತ್ತೇವೆ. ಮೂರು ತಿಂಗಳಲ್ಲಿ ಮನೆಗಳು ಸಂತ್ರಸ್ತರಿಗೆ ಸಿಗಲಿದೆ ಎಂದು ತರಾವರಿ ಹೇಳಿಕೆಗಳನ್ನು ನೀಡಿ ತೆರಳುತ್ತಿರುವದನ್ನು ಹೊರತುಪಡಿಸಿ ಮುಖ್ಯಮಂತ್ರಿಗಳು ಕೊಡಗಿನ ಬಗ್ಗೆ ತಲೆಕೆಡಿಸಿಕೊಂಡಂತೆ ಕಂಡು ಬರುತ್ತಿಲ್ಲ.

ಮಂತ್ರಿಗಳು ಬಂದು ಮನೆಗಳ ನಿರ್ಮಾಣವನ್ನು ಪರಿಶೀಲಿಸುವದು; ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಸೂಚಿಸುವದು ಮಾಮೂಲಿಯಾಗಿದ್ದು, ಯಾವಾಗ ಮನೆಗಳು ಸಂತ್ರಸ್ತರ ಕೈ ಸೇರಲಿದೆ ಎಂಬ ಬಗ್ಗೆ ಯಾರಿಗೂ ನಿಖರತೆ ಇಲ್ಲ. 1 ವರ್ಷ ತುಂಬುತ್ತಾ ಬಂದರೂ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಈಗಲೂ ಈ ವಿಚಾರ ಚರ್ಚೆಗೆ ಮಾತ್ರ ಸೀಮಿತ ಎಂಬಂತಾಗಿದೆ.

(ಮೊದಲ ಪುಟದಿಂದ) ಲೋಕಸಭೆ ಚುನಾವಣೆ, ರಾಜ್ಯ ರಾಜಕೀಯ ಬೆಳವಣಿಗೆಗಳಲ್ಲೆ ಮುಳುಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ‘ನಮ್ಮ ಸರ್ಕಾರ ಕೊಡಗಿನ ಪುನರ್ ನಿರ್ಮಾಣಕ್ಕೆ ಕಟಿಬದ್ಧ’ ಎಂದು ನೀಡಿದ್ದ ಭರವಸೆಯನ್ನು ಮರೆತಂತಿದೆ. ಯಾವದೇ ಕಾರಣಕ್ಕೂ ಸರ್ಕಾರ ಕೊಡಗನ್ನು ನಿರ್ಲಕ್ಷಿಸಲು ಅವಕಾಶ ನೀಡಲಾರೆವು ಎಂದು ಆಶ್ವಾಸನೆಯಿತ್ತಿದ್ದ ವಿಪಕ್ಷ ನಾಯಕರೂ ಕೂಡ ಮೌನಕ್ಕೆ ಜಾರಿದ್ದಾರೆ. ಇನ್ನೇನು ಕೆಲ ದಿನಗಳಲ್ಲಿ ಮತ್ತೆ ಮಳೆ ಆರಂಭವಾಗಲಿದ್ದು, ಸೂರಿಲ್ಲದ ನಿರಾಶ್ರಿತರು ಈಗಲೇ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ಏಕೆ ಹೀಗೆ..?

ಕರ್ನಾಟಕದ ಮುಕುಟ ಮಣಿ, ದಕ್ಷಿಣದ ಕಾಶ್ಮೀರ, ವೀರರನಾಡು ಎಂದೆಲ್ಲಾ ಕರೆಸಿಕೊಳ್ಳುವ ಕೊಡಗಿಗೆ ಸಿಗಬೇಕಾದ ಸವಲತ್ತುಗಳಾಗಲಿ; ನೆರವುಗಳಾಗಲಿ ಸರ್ಕಾರದಿಂದ ಸೂಕ್ತವಾಗಿ ಸಿಗುತ್ತಿಲ್ಲ. ಕೊಡಗಿನಿಂದ ಸರ್ಕಾರಗಳಿಗೆ ಆದಾಯದ ಅವಶ್ಯಕತೆ ಮಾತ್ರ ಇದೆ ಹೊರತು ಇಲ್ಲಿನ ಸಮೃದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಒಂದು ವೇಳೆ ಕಾಳಜಿ ಇದ್ದಿದ್ದರೆ ದಾನಿಗಳಿಂದ ಬಂದ ಕೋಟಿಗಟ್ಟಲೆ ಹಣ; ಸರ್ಕಾರದ ಖಜಾನೆಯ ಹಣವಿದ್ದಾಗ್ಯೂ ನಿರಾಶ್ರಿತರು ಇನ್ನೂ ಕೂಡ ಮನೆಗಳಿಲ್ಲದೆ ಕಣ್ಣೀರಿಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಏನು ಮಾಡುವದು? ರಾಜ್ಯ, ರಾಷ್ಟ್ರಮಟ್ಟದ ವಿಚಾರಗಳಿಗೆ ಖಂಡನೆ ಮಂಡನೆ ಮಾಡುತ್ತಾ ಪ್ರತಿಭಟನೆ ನಡೆಸುವ ಸಂಘ ಸಂಸ್ಥೆಗಳು, ಜನರಿಗಾಗಿ ಧ್ವನಿಎತ್ತಬೇಕಾದ ಜನಪ್ರತಿನಿಧಿಗಳು, ಕೊಡಗಿನ ವಿಚಾರದಲ್ಲಿ ಆಗೊಮ್ಮೆ ಈಗೊಮ್ಮೆ ಅರಚಾಡಿ ನಂತರ ಜಾಣ ಮೌನಕ್ಕೆ ಶರಣಾಗುತ್ತಿದ್ದಾರೆ. ಮೊತ್ತೊಂದೆಡೆಗೆ ಜಿಲ್ಲಾಡಳಿತ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಜನಪ್ರತಿನಿಧಿಗಳ ಆರೋಪ. ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳ ನಡುವಿನ ಹೊಂದಾಣಿಕೆಯ ಕೊರತೆ, ಇವೆಲ್ಲಾ ಕಾರಣಗಳಿಂದಾಗಿ ಅಭಿವೃದ್ಧಿ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯದೆ ನೊಂದ ಮನಗಳಿಗೆ ಮನೆ ಎಂದು ? ಎಂಬ ಪ್ರಶ್ನೆ ಕಾಡಲಾರಂಭಿಸಿದೆ. - ಉಜ್ವಲ್ ರಂಜಿತ್