ಮಡಿಕೇರಿ, ಜೂ. 20: ಮಡಿಕೇರಿ ನಗರ ಕಾಂಗ್ರೆಸ್ ವತಿಯಿಂದ ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ನಗರಾಧ್ಯಕ್ಷ ಕೆ.ಯು. ಅಬ್ದುಲ್ ರಜಾóಕ್ ನೇತೃತ್ವದಲ್ಲಿ ಪ್ರತಿ ಮುಂಚೂಣಿ ಘಟಕಗಳ ಅಧ್ಯಕ್ಷರನ್ನು ಒಳಗೊಂಡಂತೆ ಸುಮಾರು 100ಕ್ಕೂ ಅಧಿಕ ಸ್ವಯಂ ಸೇವಕರ ತಂಡವನ್ನು ರಚಿಸಲಾಯಿತು.
ನಗರದ ಪ್ರತಿ ವಾರ್ಡ್ಗಳಲ್ಲಿ ಸಂಚರಿಸಲಿರುವ ನಿರ್ವಹಣಾ ಸಮಿತಿ ಜನರ ಸಮಸ್ಯೆಗಳನ್ನು ಆಲಿಸಿ ಸರಕಾರದಿಂದ ನೆರವನ್ನು ದೊರಕಿಸಿ ಕೊಡಲಿದೆ. ಮೂಲಭೂತ ಸೌಲಭ್ಯಗಳ ಅಗತ್ಯತೆಯ ಕುರಿತು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಟ್ಟು ಸಂಕÀಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಲಿದೆ.
ನಗರದಲ್ಲಿ 23 ವಾರ್ಡ್ಗಳಿಗೆ ನಗರಸಭಾ ಆಯುಕ್ತರನ್ನು ಮಾತ್ರ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಇನ್ನೋರ್ವ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲು ಸಭೆ ನಿರ್ಧರಿಸಿತು.
ಚಾಮುಂಡೇಶ್ವರಿನಗರ ಹಾಗೂ ಇಂದಿರಾನಗರ, ಅಜಾದ್ನಗರ, ರಾಜೇಶ್ವರಿನಗರ, ತ್ಯಾಗರಾಜ ಕಾಲೋನಿ, ಸುಬ್ರಹ್ಮಣ್ಯನಗರ, ಮಂಗಳಾದೇವಿನಗರಗಳನ್ನು ಅತೀ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ ಇಲ್ಲಿನ ಜವಾಬ್ದಾರಿಯನ್ನು ನೂತನ ಸಮಿತಿಯ ಸ್ವಯಂ ಸೇವಕರಿಗೆ ವಹಿಸಲಾಯಿತು. ಸಭೆಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ, ನಗರಸಭೆ ಮಾಜಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಾಜಿ ಸದಸ್ಯರುಗಳಾದ ಪ್ರಕಾಶ್ ಆಚಾರ್ಯ, ತಜಸ್ಸುಂ, ಗಿಲ್ಬರ್ಟ್ ಲೋಬೋ, ಮಹಿಳಾ ನಗರಾಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ನಗರ ಕಾಂಗ್ರೆಸ್ನ ಉಪಾಧ್ಯಕ್ಷ ಜಪ್ರುಲ್ಲ, ಸುದಯ್ ನಾಣಯ್ಯ, ಕಾನೆಹಿತ್ಲು ಮೊಣ್ಣಪ್ಪ, ಪ್ರೇಮಾ ಕೃಷ್ಣಪ್ಪ ಹಾಗೂ ಕಾರ್ಯಕರ್ತರು ಹಾಜರಿದ್ದರು.
ಪ್ರಧಾನ ಕಾರ್ಯದರ್ಶಿ ಆರ್.ಪಿ. ಚಂದ್ರಶೇಖರ್ ಸ್ವಾಗತಿಸಿದರು, ಟಿ.ಎಂ. ಅಯ್ಯಪ್ಪ ಮತ್ತಿತರರು ಮಾತನಾಡಿದರು.