ಮಡಿಕೇರಿ, ಜೂ. 20: ಕೊಡಗು ಜಿಲ್ಲೆಯು ಬೆಟ್ಟಗುಡ್ಡಗಳಿಂದ ಕೂಡಿದ ಮಲೆನಾಡು ಪ್ರದೇಶವಾಗಿದ್ದು, ಜಲಪ್ರಳಯ ಉಂಟಾಗಿ ಕೊಡಗು ಜಿಲ್ಲೆಯು ಅಕ್ಷರಶಃ ನಲುಗಿ ಹೋಗಿದೆ. ಈ ಜಿಲ್ಲೆಯನ್ನು ಮೊದಲಿನ ಸ್ಥಿತಿಗೆ ತರುವಲ್ಲಿ ವಿಶೇಷ ಗಮನ ಹರಿಸಬೇಕಾಗಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರಲ್ಲಿ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು ಸುನಿಲ್ ಸುಬ್ರಮಣಿ ಮನವಿ ಮಾಡಿದ್ದಾರೆ.
ಈಗಾಗಲೇ ಕೊಡಗು ಜಿಲ್ಲಾಡಳಿತ ದಿಂದ ಈ ಹಿಂದೆ ಸರ್ಕಾರಕ್ಕೆ ಒಟ್ಟು ರೂ. 172619.62 ಲಕ್ಷಗಳ ನಷ್ಟ ಹೊಂದಿದ ಬಗ್ಗೆ ವಿವರಣೆ ನೀಡಲಾ ಗಿದೆ. ಬೆಳೆ ಹಾನಿ ರೂ. 30002.14 ಲಕ್ಷ, ಸಾರ್ವಜನಿಕ ಸೇತುವೆ ರಸ್ತೆ ಇತರೆಗೆ ರೂ. 140294.41, ಮನೆ ಹಾನಿ ರೂ. 2304.68 ಹಾಗೂ ಜಾನುವಾರುಗಳಿಗೆ ರೂ. 18.39 ಲಕ್ಷ ಒಟ್ಟು ರೂ. 172619.62 ಲಕ್ಷ ನಷ್ಟವಾಗಿದೆ ಎಂದು ತಿಳಿಸಲಾಗಿದೆ ಎಂದು ಶಾಸಕದ್ವಯರು ಗಮನ ಸೆಳೆದಿದ್ದಾರೆ.
ಆದರೆ ಸರ್ಕಾರದಿಂದ ಈಗಾಗಲೇ ಸಾರ್ವಜನಿಕ ರಸ್ತೆ ಮತ್ತು ಸೇತುವೆಗಾಗಿ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಗೆ ಸೇರಿದಂತೆ ಒಟ್ಟು ರೂ. 66.58 ಕೋಟಿ ಮಾತ್ರ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಇನ್ನೂ ಸಹ ಇಲ್ಲಿನ ಗ್ರಾಮೀಣ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣಕ್ಕೆ ಅನುದಾನವಿಲ್ಲದೆ ಕಾಮಗಾರಿ ಕೈಗೊಳ್ಳದೇ ಇರುವದರಿಂದ ಈ ಭಾಗದ ರೈತರು ತಮ್ಮ ಕೃಷಿ ಭೂಮಿಗೆ ಹೋಗಿ ಕೃಷಿ ಮಾಡಲು ಸಹ ಆಗದೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಚಿವರಿಗೆ ನೆನಪಿಸಿದ್ದಾರೆ.
ಇನ್ನು ಒಟ್ಟು 124117.00 ಹೆಕ್ಟೇರ್ ಕೃಷಿ ಭೂಮಿ ನಷ್ಟ ಹೊಂದಿದ ರೈತರಿಗೆ ಸೂಕ್ತ ಪರಿಹಾರ ದೊರೆತಿರುವದಿಲ್ಲ. ಸಂಪೂರ್ಣ ಭೂಮಿ ಕಳೆದುಕೊಂಡ ರೈತರಿಗೆ ಬದಲಿ ಭೂಮಿ ನೀಡಿರು ವದಿಲ್ಲ. ಇನ್ನು ಮನೆ ಕಳೆದುಕೊಂಡ ವರಿಗೆ ಒಂದು ವರ್ಷ ಕಳೆಯುತ್ತಾ ಬಂದು ಈಗಾಗಲೇ ಮಳೆ ಪ್ರಾರಂಭ ವಾಗಿದ್ದು, ಈವರೆಗೂ ಒಬ್ಬರಿಗೂ ಮನೆ ವಿತರಣೆ ಮಾಡಿರುವದಿಲ್ಲ. ಜಿಲ್ಲೆಯ ಜನರು ಕಣ್ಣೀರಿನಿಂದ ಕೈ ತೊಳೆಯುವ ಪರಿಸ್ಥಿತಿ ಉಂಟಾಗಿದ್ದು, ಸರ್ಕಾರವು ಜಿಲ್ಲೆಯ ರೈತರ ಮತ್ತು ಸಾರ್ವಜನಿಕರ ಅಹವಾಲಿಗೆ ಸ್ಪಂದಿಸಿ ನಲುಗಿ ಹೋಗಿರುವ ಜಿಲ್ಲೆಯನ್ನು ಯಥಾಸ್ಥಿತಿಗೆ ತರುವಲ್ಲಿ ಸಹಕರಿಸಲು ತ್ವರಿತವಾಗಿ ಈ ಕೆಳಕಂಡ ಪ್ರಮುಖ ಬೇಡಿಕೆಯನ್ನು ಈಡೇರಿಸಬೇಕಾಗಿ ಒತ್ತಾಯಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಮನೆ ಕಳೆದುಕೊಂಡು ನಿರ್ಗತಿಕರಾದ ನಿರಾಶ್ರಿತರಿಗೆ ಕೂಡಲೇ ಮನೆ ವಿತರಣೆಯಾಗಬೇಕು. ಮನೆ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ನೀಡಿ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಲು ಮುಂದೆ ಬರುವ ರೈತರಿಗೆ ಕೂಡಲೇ ಅನುದಾನ ಬಿಡುಗಡೆ ಮಾಡಿ ಹೊಸದಾಗಿ ಸರ್ಕಾರದ ವತಿಯಿಂದ ನಿರ್ಮಿಸುತ್ತಿರುವ ಮನೆಯನ್ನು ತ್ವರಿತವಾಗಿ ನಿರ್ಮಿಸಲು ಅನುದಾನ ಬಿಡುಗಡೆ ಮಾಡಬೇಕು. ಜಿಲ್ಲಾಡಳಿತದಿಂದ ಅಪಾಯದ ಅಂಚಿನಲ್ಲಿರುವ ಕೆಲವು ಮನೆಗಳನ್ನು ತೆರವುಗೊಳಿಸುವಂತೆ ನೋಟೀಸ್ ನೀಡಿದ್ದು, ಮನೆ ಖಾಲಿ ಮಾಡಲು ಒತ್ತಡ ಹೇರುತ್ತಿದ್ದಾರೆ. ಆದರೆ ಈ ರೀತಿ ಒತ್ತಡಕ್ಕೆ ಒಳಗಾದ ನಿರಾಶ್ರಿತರು ಬಾಡಿಗೆ ಮನೆಗೆ ತೆರಳಲು ಅಗತ್ಯ ವ್ಯವಸ್ಥೆ ಕಲ್ಪಿಸು ವಂತೆಯೂ ಅಪ್ಪಚ್ಚು ರಂಜನ್ ಹಾಗೂ ಸುನಿಲ್ ಸುಬ್ರಮಣಿ ಆಗ್ರಹಿಸಿದ್ದಾರೆ.