ಗೋಣಿಕೊಪ್ಪ ವರದಿ, ಜೂ. 19: ದಕ್ಷಿಣ ಕೊಡಗಿನ ರಸ್ತೆ ಬದಿಗಳಲ್ಲಿ ಹಣ್ಣುಗಳ ಮಾರಾಟ ನಡೆಯುತ್ತಿರು ವದರಿಂದ ಜನರಲ್ಲಿ ನಿಫಾ ರೋಗಾಣು ಹರಡುವ ಆತಂಕ ಮೂಡಿದೆ. ಸ್ಥಳೀಯ ಆಡಳಿತ ಹಣ್ಣು ಮಾರಾಟಕ್ಕೆ ನಿರ್ಬಂಧ ಹೇರುವಂತೆ ಸಾರ್ವಜನಿಕ ರಿಂದ ಒತ್ತಾಯ ಕೇಳಿ ಬಂದಿದೆ.ಹಣ್ಣುಗಳಿಂದ ಹರಡುವ ನಿಫಾ ವೈರಸ್‍ನಿಂದ ಜೀವ ಭಯದಲ್ಲಿರುವ ಜನತೆಗೆ ಹೊರರಾಜ್ಯಗಳಿಂದ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಿರುವದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಮುಖ್ಯ ಹೆದ್ದಾರಿಗಳ ಬದಿಯಲ್ಲಿಯೇ ಹಣ್ಣುಗಳ ಮಾರಾಟ ಎಗ್ಗಿಲ್ಲದೆ (ಮೊದಲ ಪುಟದಿಂದ) ನಡೆಯುತ್ತಿದ್ದು, ಜಿಲ್ಲಾಡಳಿತ ಇವರನ್ನು ಜಿಲ್ಲೆಯಿಂದ ಹೊರಗೆ ಕಳುಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ನಿಫಾ ವೈರಸ್ ಹರಡುವ ಮುನ್ಸೂಚನೆ ಇದ್ದು, ಇದರಲ್ಲಿ ಕೊಡಗು ಜಿಲ್ಲೆ ಕೂಡ ಒಂದಾಗಿದೆ. ಆದರೆ, ನೆರೆ ರಾಜ್ಯದ ಹಣ್ಣುಗಳನ್ನು ಮಾರಾಟ ಮಾಡದಂತೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಒತ್ತಾಯ ಹೇರಿದ್ದರೂ ಕೂಡ ಅದರ ಅನುಷ್ಟಾನವಾಗದಿರುವದು ಮಾರಾಟಗಾರರಿಗೆ ನಿರಾತಂಕವಾಗಿದೆ.

ಲಿಚ್ಚಿ ಹಾಗೂ ರಾಂಬುತನ್ ಹಣ್ಣುಗಳನ್ನು ಬಿಹಾರ ಹಾಗೂ ಕೇರಳ ಭಾಗದಿಂದ ಮಾರಾಟ ಮಾಡಲಾಗುತ್ತಿದೆ. ನಿಫಾ ವೈರಸ್ ಬಗ್ಗೆ ಮಾಹಿತಿ ಇಲ್ಲದ ಜನತೆ ಖರೀದಿಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಇರುವವರು ಜನರಿಗೆ ಮನವರಿಕೆ ಮಾಡುವ ಮೂಲಕ ದೂರ ಸರಿಯುವಂತೆ ಮಾಡುತ್ತಿದ್ದಾರೆ.

ನಿಫಾ ಎಂಬ ವೈರಸ್ ಜ್ವರ ಆವರಿಸಿಕೊಂಡು ಮೆದುಳು ಮತ್ತು ಹೃದಯವನ್ನು ಘಾಸಿಗೊಳಿಸುತ್ತದೆ. ಕೊಡಗು ಜಿಲ್ಲೆಯ ನೆರೆ ರಾಜ್ಯದಲ್ಲಿ ಹರಡಿದ್ದು, ಇಲ್ಲಿನ ಹಣ್ಣುಗಳನ್ನು ಕೊಡಗು ಜಿಲ್ಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ವೈರಸ್ ಪ್ರಾಣಿ, ಪಕ್ಷಿಗಳು ಕಚ್ಚಿದ ಹಣ್ಣುಗಳಿಂದ ಹರಡುತ್ತವೆ. ಬಾವಲಿಗಳು ಕಚ್ಚಿರುವ ಹಣ್ಣುಗಳಿಂದ ಹೆಚ್ಚು ಹರಡುತ್ತವೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಾಗೃತಿ ಮೂಡಿಸುತ್ತಿದೆಯಾದರೂ ಮಾರಾಟವನ್ನು ನಿಯಂತ್ರಣ ಮಾಡುತ್ತಿಲ್ಲ.

ಲಿಚ್ಚಿ ಹಣ್ಣುಗಳನ್ನು ಬಿಹಾರ ರಾಜ್ಯದಿಂದ ತಂದು ಮಾರಾಟ ಮಾಡಲಾಗುತ್ತಿದೆ. ಲಿಚ್ಚಿ ಮೂಲಕ ದೇಹಕ್ಕೆ ವೈರಸ್ ಆವರಿಸಿಕೊಂಡು ಮೆದುಳು ಮೇಲೆ ಕಾಯಿಲೆ ಹರಡುತ್ತವೆ. ಮೆದುಳಿನ ರಕ್ತನಾಳದ ಉರಿಯೂತಕ್ಕೆ ಕಾರಣವಾಗುವದರಿಂದ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವದರಿಂದ ಅಪಾಯಕಾರಿ ಎಂಬ ಮಾಹಿತಿ ಈಗಾಗಲೇ ವೈದ್ಯರಿಂದ ಅರಿವಾಗಿದೆ. ಇದನ್ನು ಮನಗಂಡು ಜಿಲ್ಲಾಡಳಿತ ಮಾರಾಟಗಾರರ ವಿರುದ್ಧ ಕ್ರಮಕ್ಕೆ ಜನತೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ವೇಕ್ಷಣಾಧಿಕಾರಿ ಡಾ. ಶಿವಕುಮಾರ್, ಸ್ಥಳೀಯ ಆಡಳಿತ ಇದರ ವಿರುದ್ಧ ಪರಿಶೀಲಿಸಿ ಕ್ರಮಕೈಗೊಳ್ಳಬಹುದು, ಗ್ರಾಮ ಪಂಚಾಯ್ತಿ, ನಗರಸಭೆ ಇವುಗಳು ಮುಂಜಾಗ್ರತೆ ತೆಗೆದುಕೊಳ್ಳಬೇಕು. ಹಣ್ಣುಗಳನ್ನು ತಿನ್ನುವ ಮುನ್ನ ತೊಳೆದು ಸಿಪ್ಪೆ ಸುಲಿದು ತಿನ್ನುವದು ಒಳ್ಳೆಯದು. ಕೇರಳದಲ್ಲಿ ಕೂಡ ರೋಗ ಹತೋಟಿಗೆ ಬಂದಿರುವದರಿಂದ ಭಯ ಪಡುವ ಆತಂಕವಿಲ್ಲ. ಆದರೂ ಮುಂಜಾಗೃತೆ ಬೇಕು ಎಂದು ಅವರು ತಿಳಿಸಿದ್ದಾರೆ.

-ಸುದ್ದಿಪುತ್ರ