ಭಾಗಮಂಡಲ, ಜೂ. 20: ಮಳೆಗಾಲದಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ದೊಂದಿಗೆ, ಮಡಿಕೇರಿ ಹಾಗೂ ಭಾಗಮಂಡಲ, ಅಯ್ಯಂಗೇರಿ ಮಾರ್ಗದ ಸಂಪರ್ಕ ಸ್ಥಗಿತಗೊಂಡು ಅಲ್ಲಿನ ನಿವಾಸಿಗಳ ಸಹಿತ ಯಾತ್ರಾರ್ಥಿಗಳು ಸಮಸ್ಯೆಯಲ್ಲಿ ಸಿಲುಕುವ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುವದು ಎಂದು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ಅವರು ಇಂದು ಭಾಗಮಂಡಲಕ್ಕೆ ಖುದ್ದು ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲಿಸಿದರು.
ಪ್ರತಿವರ್ಷ ಪ್ರವಾಹದಿಂದ ರಸ್ತೆ ಸಂಪರ್ಕ ಸ್ಥಗಿತಗೊಳ್ಳುವ ಮಾರ್ಗಗಳ ಪರಿಶೀಲನೆ ನಡೆಸಿದ ಅವರು, ಈಗಿನಿಂದಲೇ ಮುಂಜಾಗ್ರತಾ ಕ್ರಮವಾಗಿ ಭಾಗಮಂಡಲದಲ್ಲಿ ದೋಣಿ, ತೆಪ್ಪ, ಈಜು ತಜ್ಞರ ಸಹಿತ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಪ್ರಮುಖ ರೊಂದಿಗೆ ಚರ್ಚಿಸಿದರು. ಅಲ್ಲದೆ ಭಾಗಮಂಡಲದ ಆಗುಹೋಗುಗಳ ಬಗ್ಗೆ ಜಿಲ್ಲಾಡಳಿತದೊಂದಿಗೆ ನಿತ್ಯ ಸಂಪರ್ಕ ಸಾಧಿಸಲು ನೋಡಲ್ ಅಧಿಕಾರಿಯನ್ನು ನಿಯುಕ್ತಿ ಗೊಳಿಸಿದರು.
ಪ್ರಸಕ್ತ ಅಲ್ಲಿ ನಡೆಯುತ್ತಿರುವ ಮೇಲ್ಸೇತುವೆ (ಮೊದಲ ಪುಟದಿಂದ) ಕಾಮಗಾರಿಯನ್ನು ಚುರುಕುಗೊಳಿಸಿ ಮುಂದಿನ ಸಾಲಿನ ಮಳೆಗಾಲಕ್ಕೆ ಮೊದಲು ಪೂರ್ಣಗೊಳಿಸುವಂತೆ ಅವರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು. ಈ ಮಳೆಗಾಲದಲ್ಲಿ ಅಲ್ಲಿನ ನಿವಾಸಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಿತ ಶಾಲಾ-ಕಾಲೇಜು ಮಕ್ಕಳು, ಉದ್ಯೋಗಿಗಳ ಸಂಚಾರಕ್ಕೆ ತೊಂದರೆಯಾಗದಂತೆ ಎಲ್ಲಾ ರೀತಿ ಗಮನಹರಿಸಲು ಸೂಚಿಸಿದರು.
ಈ ಸಂಬಂಧ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ, ಉಪವಿಭಾಗಾಧಿಕಾರಿ ಟಿ. ಜವರೇಗೌಡ ಸೇರಿದಂತೆ ತಹಶೀಲ್ದಾರ್, ಎನ್ಡಿಆರ್ಎಫ್ ತಂಡದ ಮುಖ್ಯಸ್ಥರು ಹಾಗೂ ಅಗ್ನಿ ಶಾಮಕದಳ, ಕಾವೇರಿ ನೀರಾವರಿ ನಿಗಮ ಮತ್ತು ಅಲ್ಲಿನ ಗ್ರಾ.ಪಂ., ಪೊಲೀಸ್ ವ್ಯವಸ್ಥೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಭಾಗಮಂಡಲ ವ್ಯಾಪ್ತಿಯ ನಾಗರಿಕ ಪ್ರಮುಖರು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.