ಸೋಮವಾರಪೇಟೆ,ಜೂ.20: ಸೋಮವಾರಪೇಟೆ ತಾಲೂಕಿಗೆ ಒಳಪಟ್ಟಿದ್ದ ಕುಶಾಲನಗರವನ್ನು ಕೇಂದ್ರವಾಗಿಟ್ಟುಕೊಂಡು ನೂತನ ತಾಲೂಕು ರಚನೆ ಸಂಬಂಧಿತ ಕಾರ್ಯಗಳು ನಡೆಯುತ್ತಿದ್ದು, ಈ ಹಿನ್ನೆಲೆ ಸ್ಥಳಾಂತರಗೊಳ್ಳುವ ಕಚೇರಿಗಳ ಪಟ್ಟಿ ತಯಾರಿಸುವಂತೆ ತಾಲೂಕು ತಹಶೀಲ್ದಾರ್ ಮತ್ತು ತಾ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಲಾಯಿತು.ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ, ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು, ಸೋಮವಾರಪೇಟೆ ತಾಲೂಕಿಗೆ ಒಳಪಟ್ಟ ಕೆಲವೊಂದು ಕೇಂದ್ರ ಕಚೇರಿಗಳು ಕುಶಾಲನಗರ ವ್ಯಾಪ್ತಿಯಲ್ಲಿದ್ದು, ಅವುಗಳನ್ನು ವಾಪಸ್ ಸೋಮವಾರಪೇಟೆಗೆ ಸ್ಥಳಾಂತರಿಸಲು ಕಟ್ಟಡಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸ್ಥಳಾಂತರಗೊಳ್ಳುವ ಕಚೇರಿಗಳ ಪಟ್ಟಿ ತಯಾರಿಸುವಂತೆ ಸಭೆಯಲ್ಲಿ ಸೂಚನೆ ನೀಡಲಾಯಿತು.ಯಾವೆಲ್ಲಾ ಗ್ರಾ.ಪಂ.ಗಳು ನೂತನ ತಾಲೂಕಿಗೆ ಒಳಪಡಲಿವೆ ಎಂಬ ಬಗ್ಗೆ ಸರ್ವೆ ನಡೆಸಿ ವರದಿ ನೀಡುವಂತೆ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಸಮಿತಿ ರಚಿಸಿದ್ದಾರೆ. ಈ ಬಗ್ಗೆ ಗ್ರಾಮ ಸಭೆಗಳಲ್ಲಿ ವಿಷಯ ಪ್ರಸ್ತಾಪಿಸಿ ಸಾರ್ವಜನಿಕರು ಮತ್ತು ಜನ ಪ್ರತಿನಿಧಿಗಳ ಅಭಿಪ್ರಾಯ ಕ್ರೋಢೀಕರಿ ಸಲಾಗುವದು ಎಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ತಿಳಿಸಿದರು.

ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಯನ್ನು ಮಡಿಕೇರಿ ತಾಲೂಕಿಗೆ ಸೇರಿಸಲು ಕ್ರಮ ಕೈಗೊಳ್ಳಿ. ಈ ಬಗ್ಗೆ ನಿರಂತರವಾಗಿ ಹೋರಾಟಗಳೂ ನಡೆದಿವೆ ಎಂದು ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದರು.

ಮಾದಾಪುರದಲ್ಲಿ ವಿಶ್ವವಿದ್ಯಾಲಯ: ಮಾದಾಪುರದಲ್ಲಿ ತೋಟಗಾರಿಕಾ ಇಲಾಖೆಯ ಅಧೀನದಲ್ಲಿದ್ದ ಸುಮಾರು 100 ಏಕರೆಯಷ್ಟು ಜಾಗವನ್ನು ನಿರಾಶ್ರಿತರ ವಸತಿ, ಮೂಲಭೂತ ಸೌಕರ್ಯಕ್ಕೆ ನೀಡಲಾಗಿದ್ದು, ಉಳಿಕೆಯಾಗಿರುವ ಜಾಗವನ್ನು ಒತ್ತುವರಿ

(ಮೊದಲ ಪುಟದಿಂದ) ಮಾಡಿಕೊಳ್ಳುವ ಯತ್ನ ನಡೆಯುತ್ತಿದೆ. ಈ ಹಿನ್ನೆಲೆ ಮಾದಾಪುರದಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಹಾಗೂ ಇಲಾಖೆಯ ಸಚಿವರಿಗೆ ಈ ಬಗ್ಗೆ ಪತ್ರ ಬರೆಯುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಉಳಿಕೆಯಾಗಿರುವ ಜಾಗವನ್ನು ಕಂದಾಯ ಇಲಾಖೆಯಿಂದ ಹದ್ದುಬಸ್ತು-ಸರ್ವೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸೂಚಿಸಿದರು. ಪ್ರಸ್ತುತ ತೋಟಗಾರಿಕಾ ಇಲಾಖೆಗೆ 146 ಏಕರೆಯಷ್ಟು ಜಾಗ ಮಾತ್ರ ಉಳಿಕೆಯಾಗಿದ್ದು, ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಲಾಖಾಧಿಕಾರಿ ಶೋಭಾ ತಿಳಿಸಿದರು.

ಸದ್ಯದಲ್ಲೇ ಹಕ್ಕುಪತ್ರ ವಿತರಣೆ: 94 ಸಿ ಮತ್ತು 94 ಸಿಸಿ ಅಡಿಯಲ್ಲಿ ಅರ್ಜಿದಾರರಿಗೆ ಯಾವಾಗ ಹಕ್ಕುಪತ್ರ ವಿತರಿಸುತ್ತೀರಿ? ಎಂದು ಸದಸ್ಯ ಗಣೇಶ್ ಪ್ರಶ್ನಿಸಿದ ಸಂದರ್ಭ ಉತ್ತರಿಸಿದ ತಹಶೀಲ್ದಾರ್, ಈಗಾಗಲೇ 113 ಹಕ್ಕುಗಳು ವಿತರಣೆಗೆ ಸಿದ್ಧವಾಗಿದೆ. 421 ಮಂದಿಗೆ ನೋಟೀಸ್ ನೀಡಲಾಗಿದ್ದರೂ ನಿಗದಿತ ಶುಲ್ಕವನ್ನು ಪಾವತಿಸಿಲ್ಲ. ಸಿದ್ಧಗೊಂಡಿರುವ ಹಕ್ಕುಪತ್ರವನ್ನು ಸದ್ಯದಲ್ಲೇ ವಿತರಿಸಲಾಗುವದು ಎಂದರು.

ಬಿಪಿಎಲ್ ದುರುಪಯೋಗಕ್ಕೆ ತಡೆ: ಶ್ರೀಮಂತರು ಬಿಪಿಎಲ್ ಕಾರ್ಡ್‍ಗಳನ್ನು ಹೊಂದಿದ್ದು, ಹಲವಷ್ಟು ನಿರ್ಗತಿಕರಿಗೆ ಬಿಪಿಎಲ್ ಕಾರ್ಡ್ ಇಲ್ಲದಂತಾಗಿದೆ. ಈ ಬಗ್ಗೆ ತನಿಖೆ ನಡೆಸಿ ಅಂತಹ ಕಾರ್ಡ್‍ಗಳನ್ನು ರದ್ದುಗೊಳಿಸಲು ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಮತ್ತು ತಾಲೂಕು ಆಹಾರ ಇಲಾಖಾ ಅಧಿಕಾರಿಗೆ ಸೂಚಿಸಲಾಯಿತು.

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಾರಿಯಲ್ಲಿದ್ದು, ತೋಟಗಾರಿಕಾ ಇಲಾಖೆಯಿಂದ ಹನಿ ನೀರಾವರಿಗೆ ಸಹಾಯಧನದ ಸೌಲಭ್ಯ ಇದೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತಪ್ಪ ಸಭೆಯಲ್ಲಿ ಹೇಳಿದರು.

ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಕೇಂದ್ರದಿಂದ ರೈತರಿಗೆ ಯಾವದೇ ರೀತಿಯ ಮಾಹಿತಿ ನೀಡುತ್ತಿಲ್ಲ. ಕಾರ್ಯಕ್ರಮಗಳ ಬಗ್ಗೆ ಜನಪ್ರತಿನಿಧಿಗಳಿಗೂ ಮಾಹಿತಿ ಕೊಡುತ್ತಿಲ್ಲ. ಈ ಬಗ್ಗೆ ಸಂಸದರ ಗಮನ ಸೆಳೆಯುವಂತೆ ಸದಸ್ಯ ಮಣಿ ಉತ್ತಪ್ಪ ಒತ್ತಾಯಿಸಿದರು.

ಹಲವಷ್ಟು ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಸಹ ಆಹಾರ ಸಾಮಗ್ರಿಗಳು ಹೆಚ್ಚು ಪೂರೈಕೆಯಾಗುತ್ತಿದೆ. ಹಾಜರಾತಿಗೆ ಅನುಗುಣವಾಗಿ ಆಹಾರ ವಿತರಣೆಯಾಗಬೇಕು. ಇಂತಹ ಅಂಗನವಾಡಿಗೆ ಸರಬರಾಜಾಗುವ ಸಾಮಗ್ರಿಗಳು ಎಲ್ಲಿಗೆ ಹೋಗುತ್ತಿವೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ ಅವರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಅವರಿಗೆ ಸೂಚಿಸಿದರು.

ಗ್ರಾಮೀಣ ಭಾಗದಲ್ಲಿ ಹಲವಷ್ಟು ಗೋವುಗಳು ಕಳ್ಳತನವಾಗುತ್ತಿದ್ದರೆ, ಕೆಲವೆಡೆ ಜಾನುವಾರುಗಳನ್ನು ಸಾಕುವದೇ ದುಸ್ತರವಾಗಿದೆ. ಈ ಹಿನ್ನೆಲೆ ಪಶು ಸಂಗೋಪನೆ ಇಲಾಖೆಯಿಂದ ಶಾಂತಳ್ಳಿ ಅಥವಾ ಗರ್ವಾಲೆಯಲ್ಲಿ ಗೋ ಶಾಲೆ ತೆರೆಯಲು ಕ್ರಮ ಕೈಗೊಳ್ಳಿ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಬದಾಮಿ ಅವರಿಗೆ ನಿರ್ದೇಶನ ನೀಡಿದರು.

ಮುಂಗಾರು ವಿಳಂಬದಿಂದ ಕೃಷಿ ಕಾರ್ಯಕ್ಕೆ ಕೊಂಚ ಹಿನ್ನಡೆಯಾಗಿದೆ. ಈಗಾಗಲೇ ಬಿತ್ತನೆ ಬೀಜ, ಗೊಬ್ಬರ ವಿತರಣೆ ಕಾರ್ಯ ನಡೆಯುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರು ಅರ್ಜಿ ಸಲ್ಲಿಸುವ ಮೂಲಕ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ಧನ ಹೊಂದಿಕೊಳ್ಳಲು ಮುಂದಾಗ ಬೇಕು ಎಂದು ಕೃಷಿ ಇಲಾಖಾ ಸಹಾಯಕ ನಿರ್ದೇಶಕ ರಾಜಶೇಖರ್ ಅವರು ಮಾಹಿತಿ ನೀಡಿದರು.

ನಿಫಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕೇರಳದಿಂದ ಬರುವ ಹಣ್ಣುಗಳನ್ನು ಬಳಸದಂತೆ ಆರೋಗ್ಯ ಇಲಾಖೆ ಯಿಂದ ಜಾಗೃತಿ ಮೂಡಿಸಬೇಕು ಎಂದು ತಾಲೂಕು ಆರೋಗ್ಯಾ ಧಿಕಾರಿಗೆ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸೂಚಿಸಿದರು.

ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಅನೇಕ ಬಾರಿ ದನಿ ಎತ್ತಿದ್ದರೂ ಯಾವದೇ ಪ್ರಯೋಜನ ಇಲ್ಲದಂತಾಗಿದೆ. ಕಾಫಿ ತೋಟಗಳ ಲೈನ್‍ಮನೆಯಲ್ಲಿ ಬೀಡುಬಿಡುತ್ತಿರುವ ಬಾಂಗ್ಲಾ ವಲಸಿಗರದಿಂದ ಮುಂದಿನ ದಿನಗಳಲ್ಲಿ ಮೂಲನಿವಾಸಿಗಳಿಗೆ ತೊಂದರೆಯಾಗಲಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ತಾಲೂಕು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಮಣಿ ಉತ್ತಪ್ಪ ಅವರು ಸಭೆಯ ಗಮನ ಸೆಳೆದರು.

ತೋಟದಲ್ಲಿರುವ ಲೈನ್‍ಮನೆ ಗಳಲ್ಲಿ ನೆಲೆಸಿರುವ ಕಾರ್ಮಿಕರ ಬಗ್ಗೆ ಮಾಹಿತಿ ನೀಡಬೇಕು. ಇದರೊಂದಿಗೆ ಕಾರ್ಮಿಕರು ಕಡ್ಡಾಯವಾಗಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿ ಕೊಳ್ಳಬೇಕು ಎಂದು ಎಲ್ಲಾ ತೋಟ ಮಾಲೀಕರಿಗೆ ನೋಟೀಸ್ ಜಾರಿ ಮಾಡುವಂತೆ ಕಾರ್ಮಿಕ ಇಲಾಖಾಧಿಕಾರಿ ಮಹದೇವಸ್ವಾಮಿ ಅವರಿಗೆ ಸೂಚಿಸಲಾಯಿತು.

ಮಳೆಗಾಲದಲ್ಲಿ ನಿರಾಶ್ರಿತರ ಕೇಂದ್ರಗಳನ್ನು ತೆರೆದರೆ ತೋಟದ ಮಾಲೀಕರು ತಮ್ಮ ಲೈನ್‍ಮನೆಯ ಕಾರ್ಮಿಕರನ್ನು ತಂದು ಬಿಡುವ ಸಾಧ್ಯತೆ ಇದೆ. ಇದರಿಂದಾಗಿ ನಿಜವಾದ ನಿರಾಶ್ರಿತರಿಗೆ ಅನ್ಯಾಯವಾಗಲಿದೆ. ಈ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಹಾರಂಗಿ ಜಲಾಶಯಕ್ಕೆ 262 ಕ್ಯೂಸೆಕ್ಸ್ ನೀರಿನ ಒಳಹರಿವು ಇದೆ. ಕಳೆದ ಸಾಲಿಗಿಂತ 26 ಅಡಿ ನೀರು ಕಡಿಮೆ ಸಂಗ್ರಹವಿದೆ. ಜಲಾಶಯದ ಹೂಳು ತೆಗೆಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಭಿಯಂತರ ರಾಜೇಗೌಡ ಸಭೆಗೆ ವಿವರಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕು. ಅಂಗನವಾಡಿ, ಶಾಲೆಗಳ ಸ್ಥಿತಿಗತಿ ಅರಿಯಬೇಕು ಎಂದು ಸದಸ್ಯ ಮಣಿ ಉತ್ತಪ್ಪ, ಕುಶಾಲಪ್ಪ ಸೇರಿದಂತೆ ಇತರರು ಒತ್ತಾಯಿಸಿದರು. ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್ ಸೇರಿದಂತೆ ವಿವಿಧ ಇಲಾಖಾಧಿಕಾರಿ ಗಳು ಉಪಸ್ಥಿತರಿದ್ದು, ತಮ್ಮ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.