ಶನಿವಾರಸಂತೆ, ಜೂ. 20: ಬಾಲ ಕಾರ್ಮಿಕ ಪದ್ಧತಿ ಅಂತರರಾಷ್ಟ್ರೀಯ ಸಮಸ್ಯೆಯಾಗಿದ್ದು, ಮಕ್ಕಳ ರಕ್ಷಣೆಯ ದೃಷ್ಟಿಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಾಲ ಕಾರ್ಮಿಕ ದಿನವನ್ನು ಆಚರಿಸಲಾಗುತ್ತಿದೆ ಎಂದು ಪೊಲೀಸ್ ಹೆಡ್‍ಕಾನ್ಸ್‍ಟೇಬಲ್ ಬೋಪಣ್ಣ ಹೇಳಿದರು.

ಪಟ್ಟಣದ ಸುಪ್ರಜ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಚೈಲ್ಡ್‍ಲೈನ್ ಸಂಸ್ಥೆ ಹಾಗೂ ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನಡೆದ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಅಂತಹ ಮಾಲೀಕರ ವಿರುದ್ಧ ಬಾಲ ಕಾರ್ಮಿಕ ವಿರೋಧಿ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದರು.

ಬಿ.ಆರ್. ಕುಸುಮಾ ಕುಮಾರಿ ಮಾತನಾಡಿದರು. ಶಿಕ್ಷಣ ಸಂಯೋಜಕ ಶೇಖರ್, ಸುಪ್ರಜ ಗುರುಕುಲ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಡಿ. ಸುಜಲಾದೇವಿ, ಚೈಲ್ಡ್‍ಲೈನ್ ಸಂಸ್ಥೆಯ ಕಾರ್ಯಕರ್ತ ಪ್ರವೀಣ್, ಯೋಗೇಶ್ ಇತರರು ಹಾಜರಿದ್ದರು.

ನಂತರ ಗುರುಕುಲ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂಸ್ಥೆಯಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ಜಾಗೃತಿ ಜಾಥಾ ನಡೆಸಿ ಅರಿವು ಮೂಡಿಸಿದರು.