ಸೋಮವಾರಪೇಟೆ, ಜೂ. 20: ಇಲ್ಲಿನ ವಿದ್ಯುತ್ ಇಲಾಖೆಯ ವತಿಯಿಂದ ಸಹಾಯಕ ಕಾರ್ಯ ಪಾಲಕ ಅಭಿಯಂತರರ ಕಚೇರಿ ಆವರಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ವಿದ್ಯುತ್ ಗ್ರಾಹಕರು, ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಎದುರು ತೆರೆದಿಟ್ಟರು.

ತಾಕೇರಿ ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ಸಂಬಂಧಿತ ಸಮಸ್ಯೆಗಳಿದ್ದು, ಸಂಬಂಧಿಸಿದ ಅಭಿಯಂತರರಿಗೆ ಮಾಹಿತಿ ನೀಡಿದ್ದರೂ ಸಹ ಯಾವದೇ ಕ್ರಮ ಕೈಗೊಂಡಿಲ್ಲ. ಈ ಭಾಗದಲ್ಲಿ ತೋಟ, ಗದ್ದೆಗಳ ನಡುವೆ ವಿದ್ಯುತ್ ತಂತಿ ಹಾದು ಹೋಗಿದ್ದು, ಇದನ್ನು ಬದಲಾಯಿಸುವಂತೆ ಮನವಿ ಮಾಡಿದ್ದರೂ, ಪ್ರಯೋಜನೆ ಶೂನ್ಯವಾಗಿದೆ ಎಂದು ತಿಮ್ಮಯ್ಯ, ವಿನೋದ್ ಅವರುಗಳು ಅಧಿಕಾರಿಗಳ ಗಮನ ಸೆಳೆದರು.

ತಾಕೇರಿಯಲ್ಲಿ ಕಬ್ಬಿಣದ ಕಂಬಗಳಿಗೆ ವಿದ್ಯುತ್ ತಂತಿ ಅಳವಡಿಸಲಾಗಿದೆ. ಇದರೊಂದಿಗೆ ಟೆಲಿಫೋನ್ ಕಂಬಕ್ಕೂ ತಂತಿ ಹಾಕಲಾಗಿದೆ. ಕೆಲವೆಡೆ ಕೇವಲ 15 ಅಡಿಗಳಷ್ಟು ಅಂತರದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.

ತಂತಿಗಳು ಕೆಳಭಾಗದಲ್ಲಿ ಹಾದುಹೋಗಿರುವ ಕಡೆಗಳಲ್ಲಿ ಹೆಚ್ಚುವರಿ ಕಂಬಗಳನ್ನು ಅಳವಡಿಸಿ ತಕ್ಷಣ ಸಮಸ್ಯೆಯನ್ನು ಬಗೆಹರಿಸುವಂತೆ ಸಭೆಯಲ್ಲಿ ಭಾಗಿಯಾಗಿದ್ದ ಮಡಿಕೇರಿಯ ಕಾರ್ಯನಿರ್ವಾಹಕ ಅಭಿಯಂತರ ಸೋಮಶೇಖರ್ ಅವರು, ಕಿರಿಯ ಅಭಿಯಂತರರಿಗೆ ಸೂಚನೆ ನೀಡಿದರು.

ತಲ್ತರೆಶೆಟ್ಟಳ್ಳಿ ಗ್ರಾಮಕ್ಕೆ ಯಡೂರು, ಚಂದನಮಕ್ಕಿ ಮಾರ್ಗವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಸ್ಪಂದನೆ ಇಲ್ಲದಂತಾಗಿದೆ. ಈ ಮಾರ್ಗದ ವಿದ್ಯುತ್ ಲೈನ್‍ಗಳು ಜೋತು ಬಿದ್ದಿದ್ದು, ಅಪಾಯಕ್ಕೆ ಎಡೆಮಾಡುತ್ತಿದೆ ಎಂದು ದಿನೇಶ್, ದುದ್ದಯ್ಯ, ಪೃಥ್ವಿ, ಪ್ರೀತಂ ಸೇರಿದಂತೆ ಇತರರು ಆರೋಪಿಸಿದರು.

ಅಗತ್ಯವಿರುವ ಕಡೆಗಳಲ್ಲಿ ಹೆಚ್ಚುವರಿ ಕಂಬಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಜಂಗಲ್ ಕಟ್ಟಿಂಗ್ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಅಭಿಯಂತರ ಸೋಮಶೇಖರ್ ಅವರು ನಿರ್ದೇಶನ ನೀಡಿದರು.

ಲೈನ್‍ಮೆನ್‍ಗಳು ಮತ್ತು ಗ್ಯಾಂಗ್‍ಮೆನ್‍ಗಳಿಗೆ ಉತ್ತಮ ಗುಣಮಟ್ಟದ ರೈನ್‍ಕೋಟ್ ಒದಗಿಸಿಕೊಡಿ. ಕಳಪೆ ಗುಣಮಟ್ಟದ ರೈನ್‍ಕೋಟ್‍ಗಳಿಂದ ಮಳೆಗಾಲದಲ್ಲಿ ಕೆಲಸ ಮಾಡಲು ಸಾಧ್ಯವಾಗುವದಿಲ್ಲ ಎಂದು ಸಭೆಯಲ್ಲಿದ್ದ ಜಯಕರ್ನಾಟಕ ಸಂಘಟನೆಯ ಸುರೇಶ್ ಶೆಟ್ಟಿ, ಬೇಳೂರು ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್ ಅವರುಗಳು ಸಭೆಯಲ್ಲಿ ಹೇಳಿದರು.

ಕೆಲ ಲೈನ್‍ಮೆನ್‍ಗಳು ವಿದ್ಯುತ್ ಸಂಬಂಧಿತ ಸೇವೆಗಳಿಗೆ ಹಣ ಕೇಳುತ್ತಿದ್ದಾರೆ ಎಂದು ಸುರೇಶ್ ಶೆಟ್ಟಿ ದೂರಿದರು. ಈ ಬಗ್ಗೆ ನಿಖರ ಮಾಹಿತಿ ನೀಡಿದ್ದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದು ಕಾರ್ಯಪಾಲಕ ಅಭಿಯಂತರರು ತಿಳಿಸಿದರು.

ಕಚೇರಿಯ ದೂರವಾಣಿಗೆ ಕರೆ ಮಾಡಿದರೆ ಯಾರೂ ಸ್ಪಂದನೆ ನೀಡು ವದಿಲ್ಲ. ಕಚೇರಿಯ ಕೆಲ ಸಿಬ್ಬಂದಿಗಳೂ ಸಹ ಸಾರ್ವಜನಿಕರೊಂದಿಗೆ ಸಮರ್ಪಕವಾಗಿ ವ್ಯವಹರಿಸುವದಿಲ್ಲ ಎಂದು ಸಂತೋಷ್ ಆರೋಪಿಸಿದರು. ಗ್ರಾಹಕರ ಸಮಸ್ಯೆಗಳನ್ನು ಆಲಿಸಲು ಇಲಾಖೆಯಿಂದ 1912 ಸಂಖ್ಯೆಯ ಸಹಾಯವಾಣಿ ಆರಂಭಿಸಿದ್ದು, ಇದಕ್ಕೆ ಕರೆ ಮಾಡಿ ದೂರು ನೀಡಬಹುದು ಎಂದು ಸೋಮಶೇಖರ್ ಮಾಹಿತಿ ನೀಡಿದರು.

ತೋಳೂರುಶೆಟ್ಟಳ್ಳಿ, ಕೂತಿ ವ್ಯಾಪ್ತಿಗೆ ತೋಟದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವದರಿಂದ ಮಳೆಗಾಲದಲ್ಲಿ ಮರದ ಕೊಂಬೆಗಳು ಮುರಿದು ಬೀಳುವ ಸಂದರ್ಭ ವಾರಗಟ್ಟಲೆ ಕರೆಂಟ್ ಇರುವದಿಲ್ಲ. ರಸ್ತೆ ಬದಿಗೆ ಈ ಮಾರ್ಗವನ್ನು ಸ್ಥಳಾಂತರಿಸುವಂತೆ ಕೆಲ ವರ್ಷಗಳಿಂದ ಮನವಿ ಮಾಡಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಈ ಮಾರ್ಗದ ಸ್ಥಳಾಂತರಕ್ಕೆ ಈ ಹಿಂದೆ 40 ಲಕ್ಷಕ್ಕೆ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಅನುದಾನದ ಕೊರತೆಯಿಂದ ಕಾಮಗಾರಿ ನಡೆದಿಲ್ಲ. ಇದೀಗ ಮತ್ತೊಮ್ಮೆ ಕ್ರಿಯಾಯೋಜನೆ ತಯಾರಿಸಿ ಕಳಿಸಲಾಗುವದು ಎಂದರು.

ಸೋಮವಾರಪೇಟೆಗೆ ವಿದ್ಯುತ್ ಸರಬರಾಜು ಮಾಡುವ 33 ಕೆ.ವಿ. ಲೈನ್‍ನಲ್ಲಿ ದುರಸ್ತಿ ಕಾರ್ಯ ನಡೆಸಲಾಗಿದೆ. ಐಪಿಡಿಎಸ್ ಯೋಜನೆಯಡಿ ಬ್ರೇಕರ್ ದುರಸ್ತಿ ಮಾಡಲಾಗಿದೆ. ಸೆಕ್ಷನ್‍ಗೆ ಒಂದರಂತೆ ನೂತನ ವಾಹನ ಒದಗಿಸಲಾಗಿದೆ ಎಂದು ಸೋಮಶೇಖರ್ ತಿಳಿಸಿದರು. ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಧನಂಜಯ್ ಸೇರಿದಂತೆ ಅಭಿಯಂತರರುಗಳು ಉಪಸ್ಥಿತರಿದ್ದರು.