ಮಡಿಕೇರಿ, ಜೂ. 20 : ಇತಿಹಾಸವನ್ನು ಇತಿಹಾಸವನ್ನಾಗಿಯೇ ನೋಡಬೇಕೇ ಹೊರತು ಅಲ್ಲಿ ಅನವಶ್ಯಕವಾದ ಸೀಮಿತ ಚೌಕಟ್ಟುಗಳನ್ನು ನಿರ್ಮಿಸುವದು ಸರಿಯಲ್ಲ. ಮರೆತು ಹೋಗುವದು ಮನುಷ್ಯ ಸಹಜ ಗುಣ ಆದರೇ, ಇತಿಹಾಸದ ಹೆಸರಿನಲ್ಲಿ ವಿಕೃತಿಗಳು, ಅಪಪ್ರಚಾರಗಳು ಮೆರೆಯಬಾರದೆಂದು ವಕೀಲ ಮತ್ತು ಪ್ರಗತಿಪರ ಚಿಂತಕ ಕೆ.ಆರ್ ವಿದ್ಯಾಧರ್ ಹೇಳಿದರು.

ಪತ್ರಿಕಾ ಭವನದಲ್ಲಿ ಹೆಮ್ಮನೆ ಪುಟ್ಟಬಸಪ್ಪ ಸಂಸ್ಮರಣಾ ಸಮಿತಿ ವತಿಯಿಂದ ಅಮರ ಸುಳ್ಯ ಬಂಡಾಯದ ಸಂದರ್ಭದಲ್ಲಿ 1837ರ ಜೂನ್ 19ರಂದು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ನೇಣು ಗಂಬವನ್ನೇರಿದ ಹೆಮ್ಮನೆ ಪುಟ್ಟಬಸಪ್ಪ ಅವರ ಸಂಸ್ಮರಣಾ ದಿನದಂದು ಪ್ರಧಾನ ಭಾಷಣಗಾರರಾಗಿ ಪಾಲ್ಗೊಂಡ ವಿದ್ಯಾಧರ್ ಅವರು, ಕೊಡಗಿನ ಇತಿಹಾಸವನ್ನು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ “ಚಿಕ್ಕ ವೀರ ರಾಜೇಂದ್ರ”, ನಿರಂಜನ ಅವರ “ಕಲ್ಯಾಣ ಸ್ವಾಮಿ” ಮತ್ತು “ಸ್ವಾಮಿ ಅಪರಂಪಾರ” ಕೃತಿಗಳು ಕೊಡಗಿನ ಇತಿಹಾಸದಲ್ಲಿ ಬ್ರಿಟಿಷ್ ವಿರುದ್ಧ ಕೊಡಗಿನ ಹೋರಾಟವನ್ನು ಅತ್ಯಂತ ಪ್ರಮಾಣೀಕರಿಸುವ ರೀತಿಯಲ್ಲಿ ಚಿತ್ರಿತವಾಗಿದೆ. ಭಾರತದ ಮೊದಲ ಸ್ವಾತಂತ್ರ್ಯ ಹೋರಾಟವೆಂದು ಕರೆಯಲ್ಪಡುವ 1857ಕ್ಕೂ ಮುಂಚೆಯೇ ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಟಗಳು ನಡೆದಿರುವದು ಗಮನಿಸಬೇಕಾದ ಅಂಶವೆಂದು ಹೇಳಿದರು.

ಹೆಮ್ಮನೆ ಪುಟ್ಟಬಸಪ್ಪ ಅವರು, ಕಲ್ಯಾಣ ಸ್ವಾಮಿಯಾಗಿ ಬ್ರಿಟಿಷರ ವಿರುದ್ಧ ಹೋರಾಡಿ ನೇಣು ಗಂಬವನ್ನೇರಿದಾಗ ಅವರಿಗೆ ಕೇವಲ 28 ವರ್ಷ. ಸ್ವಾತಂತ್ರ್ಯ ಹೋರಾಟ ಶತಮಾನೋತ್ಸವ ಸಂದರ್ಭದಲ್ಲಿ ಮಹರಾಷ್ಟ್ರ ಸರ್ಕಾರ ಸ್ವಾತಂತ್ರ್ಯ ಹೋರಾಟದ ಸಂಪುಟಗಳನ್ನು ಹೊರ ತಂದಾಗ ಕನ್ನಡಕ್ಕೆ ಸಂಬಂಧಿಸಿದಂತೆ ಹಿರಿಯ ಸಾಹಿತಿ ತಿ.ತಾ ಶರ್ಮ ಅವರು 1957-58ರ ಸುಮಾರಿಗೆ ಪುಟ್ಟ ಬಸಪ್ಪ ಕುರಿತು ಬರೆದಿದ್ದಾರೆ. ಮುಂದೆ ಡಾ.ಶ್ಯಾಂ ಭಟ್, ಡಾ.ಪುರುಷೋತ್ತಮ್ ಬಿಳಿಮಲೆÉÉ ಹಾಗೂ ಎನ್.ಎಸ್ ದೇವಿಪ್ರಸಾದ್ ಅವರು ಅಧ್ಯಯನ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

1834 ರಿಂದ 1837 ಮತ್ತು ಆ ನಂತರದ ಚರಿತ್ರೆಯ ದಾಖಲೆಗಳೆಲ್ಲ ಮದ್ರಾಸ್, ಕೊಲ್ಕೋತ್ತ ಹಾಗೂ ಲಂಡನ್‍ನ ಲೈಬ್ರರಿಗಳಲ್ಲಿ ಭದ್ರವಾಗಿದ್ದು ಇವೆಲ್ಲವೂ ಪರ್ಶಿಯನ್ ಮತ್ತು ಕನ್ನಡ ಭಾಷೆಯಲ್ಲಿರುವದು ವಿಶೇಷ. ಆದರೆ, ಎಲ್ಲವನ್ನು ಇಂಗ್ಲೀಷ್ ಭಾಷಾಂತರ ಗೊಳಿಸಿ ಇಡಲಾಗಿದೆ ಎಂದು ವಿದ್ಯಾಧರ್ ಮಾಹಿತಿ ನೀಡಿದರು.

ಟಿಪ್ಪುವಿನ ಮರಣದ ನಂತರ ಕರ್ನಾಟಕ ಮತ್ತು ಕೊಡಗಿನಲ್ಲಿ ನಡೆದ ಅನೇಕ ಬಂಡಾಯಗಳನ್ನು ಬ್ರಿಟಿಷರು ತಮ್ಮ ಸೈನ್ಯಬಲ ಹಾಗೂ ಒಡೆದು ಆಳುವ ರೀತಿಯಿಂದ ಯಶಸ್ವಿಯಾಗಿ ಹತ್ತಿಕ್ಕಿದರು. ಅಂತಹ ಸಂದರ್ಭದಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡ ಪುಟ್ಟಬಸಪ್ಪ ಹಾಗೂ ಸ್ವಾಮಿ ಅಪರಂಪಾರ ಅವರುಗಳು ಸಿಕ್ಕಿಹಾಕಿಕೊಂಡು ಗುಡ್ಡೆಮನೆ ಅಪ್ಪಯ್ಯ ಗೌಡ ಮತ್ತು ಪುಟ್ಟಬಸಪ್ಪ ನೇಣುಗಂಬ ಏರಿದರೆ, ಸ್ವಾಮಿ ಅಪರಂಪಾರ 26 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಯಿತು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಚಾರವಾದಿ ವಿ.ಪಿ ಶಶಿಧರ್ ಅವರು, ಹೆಮ್ಮನೆ ಪುಟ್ಟಬಸಪ್ಪ ಅವರ ಬಲಿದಾನಕ್ಕೆ ಇಂದಿಗೆ 182 ವರ್ಷಗಳು ತುಂಬಿದೆ. ಬ್ರಿಟಿಷರ ವಿರುದ್ಧ ಹೋರಾಟವೆಂದರೆ ಸೋಲು ಮತ್ತು ಸಾವು ಎಂಬ ನಂಬಿಕೆ ಇದ್ದ ಕಾಲದಲ್ಲಿ ದೇಶಕ್ಕಾಗಿ ತಮ್ಮ ಜನರ ದಾಸ್ಯ ವಿಮೋಚನೆಗಾಗಿ ಎಲ್ಲವನ್ನು ತ್ಯಾಗ ಮಾಡಿ ದೈಹಿಕ ಮತ್ತು ಮಾನಸಿಕವಾಗಿ ಸಾವಿಗೆ ತಯಾರಿ ಮಾಡಿಕೊಂಡು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದು ಚರಿತ್ರಾರ್ಹ ಸಂಗತಿ ಮತ್ತು ಕೊಡಗಿನ ಇಂತಹ ಅನೇಕ ಮರೆತುಹೋದ ನಾಯಕರ ಬಗ್ಗೆ ಬೆಳಕು ಚೆಲ್ಲಬೇಕಾದ ಕೆಲಸ ಈ ರೀತಿಯ ಕಾರ್ಯಕ್ರಮಗಳಿಂದ ಹೆಚ್ಚೆಚ್ಚೂ ಆಗಬೇಕಾಗಿದೆ ಎಂದು ಅಭಿಪ್ರಾಯಿಸಿದರು.

ವಕೀಲ ಹಾಗೂ ಮಡಿಕೇರಿಯ ಬಸವೇಶ್ವರ ದೇವಾಲಯದ ಅಧ್ಯಕ್ಷ ಬಿ.ಎಸ್ ರುದ್ರಪ್ರಸನ್ನ ಮಾತನಾಡಿ, ಕೊಡಗಿನಲ್ಲೇ ಕೊಡಗಿನವರಾದ ಒಬ್ಬ ಸ್ವಾತಂತ್ರ್ಯ ಹೋರಾಟಗಾರನನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮ ಶ್ಲಾಘನೀಯವಾಗಿದ್ದು. ಇಂತಹ ಹುತಾತ್ಮರ ಜೀವನ ಚರಿತ್ರೆಗಳು ಶಾಲಾ ಪಠ್ಯದಲ್ಲಿ ಅಳವಡಿಕೆಯಾಗಬೇಕೆಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ಚಿಂತಕ ಡಾ.ಐ.ಆರ್ ದುರ್ಗಾ ಪ್ರಸಾದ್ ಮಾತನಾಡಿ, 1757ರ ಪ್ಲಾಸಿ ಕದನ, ಭಾರತವನ್ನು ಬ್ರಿಟಿಷರು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಮೊದಲ ಮೆಟ್ಟಿಲಾಯಿತು. 1857 ಸಿಪಾಯಿ ದಂಗೆ ಮೂಲಕ ಮೊದಲ ಸ್ವಾತಂತ್ರ್ಯ ಸಂಗ್ರಾಮ ದಾಖಲಾಯಿತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂತು. ಇದರ ನಡುವೆ 1834 ಮತ್ತು 1837ರ ನಡುವೆ ಕೊಡಗಿನಲ್ಲಿ ನಡೆದ ಬ್ರಿಟಿಷರ ವಿರುದ್ಧದ ಹೋರಾಟಗಳು ಚಾರಿತ್ರಿಕ ಮಹತ್ವ ಹೊಂದಿದ್ದು ಹೆಮ್ಮನೆ ಪುಟ್ಟಬಸಪ್ಪ ಸಂಸ್ಮರಣಾ ಸಮಿತಿಯು ಒಂದು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದೆÉ ಎಂದರು. ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೆಜಿಂಗ್ ಟ್ರಸ್ಟಿ ಬಿ.ಎನ್ ಮನುಶೆಣೈ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.