ಮಡಿಕೇರಿ, ಜೂ. 20: ಕೊಡಗಿನ 104 ಗ್ರಾಮ ಪಂಚಾಯಿತಿಗಳಲ್ಲಿ ಕೇವಲ 17 ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಕಸವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿರುವ 104 ಗ್ರಾಮ ಪಂಚಾಯಿತಿಗಳಿಗೆ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಜಾಗವನ್ನು ನಿಗದಿಪಡಿಸಿ ಜಾಗವನ್ನು ಗ್ರಾಮ ಪಂಚಾಯಿತಿಗೆ ಕಾಯ್ದಿರಿಸಲು ಕಂದಾಯ ಸಚಿವರಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮನವಿ ಮಾಡಿದ್ದಾರೆ.
ಕೊಡಗು ಜೀವನದಿ ಕಾವೇರಿಯ ಉಗಮ ಸ್ಥಾನವಾಗಿದ್ದು, ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಕಸ ವಿಲೇವಾರಿಗೆ ಸಂಬಂಧಪಟ್ಟಂತೆ ನಿರ್ದಿಷ್ಟವಾದ ಜಾಗ ಇಲ್ಲದೆ ಅಲ್ಲಲ್ಲಿ ಕಸದ ರಾಶಿಗಳು ಉದ್ಭವವಾಗುತ್ತಿದ್ದು, ಸುಂದರ ಪರಿಸರ ತಾಣಕ್ಕೆ ಧಕ್ಕೆ ಉಂಟಾಗುತ್ತಿದೆ. ಮಾರಕ ರೋಗಗಳ ಆತಂಕ ಕೂಡ ಎದುರಾಗುತ್ತಿದೆ ಎಂದು ಅವರು ಸಚಿವರ ಗಮನ ಸೆಳೆದಿದ್ದಾರೆ.
ಜೀವನದಿ ಕಾವೇರಿಗೆ ತ್ಯಾಜ್ಯ ವಸ್ತುಗಳು ಸೇರಿ ನೀರು ಕಲುಷಿತಗೊಳ್ಳುತ್ತಿದ್ದು, ಇತರ ಜಿಲ್ಲೆಗಳು ಸಹ ಕಾವೇರಿ ನೀರನ್ನೇ ಕುಡಿಯುವ ನೀರಿಗಾಗಿ ಅವಲಂಭಿಸಿದ್ದು, ನೀರು ಮಾಲಿನ್ಯವಾಗುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ಜಿಲ್ಲೆಯ ಇತರೆ ನದಿಗಳಲ್ಲೂ ಇದೇ ಸಮಸ್ಯೆಯಾಗುತ್ತಿದೆ. ಈ ಸಂಬಂಧ ಶಾಶ್ವತ ಪರಿಹಾರಕ್ಕೆ ಕ್ರಮವಹಿಸಬೇಕಾಗಿ ಸಚಿವರಲ್ಲಿ ಕೋರಿದ್ದಾರೆ.
ಸೋಮವಾರಪೇಟೆ ತಾಲೂಕಿನಲ್ಲಿ 132, ವೀರಾಜಪೇಟೆ ತಾಲೂಕಿನಲ್ಲಿ 128 ಮತ್ತು ಮಡಿಕೇರಿ ತಾಲೂಕಿನಲ್ಲಿ 122 ಟೆನ್ಯೂರ್‍ಗಳಿರುವ ಮಾಹಿತಿ ಇರುತ್ತದೆ. ಇವುಗಳಲ್ಲಿ ಇರುವ ಖಾತೆಗಳು ಜಂಟಿ ಖಾತೆಗಳಾಗಿರುವದರಿಂದ ಹಿಡುವಳಿದಾರರ ಹೆಸರು ಬದಲಾವಣೆಯಾಗುವ ಬಗ್ಗೆ ಕಂದಾಯ ಇಲಾಖೆಯಲ್ಲಿ ಸೂಕ್ತ ಮಾಹಿತಿ ಇಲ್ಲದೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ.
ಇಷ್ಟೊಂದು ಪ್ರಮಾಣದಲ್ಲಿ ಟೆನ್ಯೂರ್‍ಗಳು ಇರುವದರಿಂದ ಮತ್ತು ಇವುಗಳಲ್ಲಿ ಹಲವಾರು ಟೆನ್ಯೂರ್ ಕಂದಾಯಕ್ಕೆ ಬಾರದಿರುವದರಿಂದ ಸರ್ಕಾರಕ್ಕೆ ರಾಜಸ್ವವು ಕಡಿಮೆ ಯಾಗುತ್ತಿವೆ. ಈ ಬಗ್ಗೆ ಪರಿಶೀಲಿಸಿ ಈ ಲ್ಯಾಂಡ್ ಟೆನ್ಯೂರ್‍ನ್ನು 30ಕ್ಕೆ ಕಡಿತಗೊಳಿಸಿ ಈ ಭೂಮಿಗೆ ಕಂದಾಯ ನಿಗದಿಗೊಳಿಸಿ ಜನಸಾಮಾನ್ಯರ ಕಂದಾಯ ದಾಖಲಾತಿಗಳು ಸುಲಲಿತಗೊಳಿಸುವಂತೆ ಬಿ.ಎ. ಹರೀಶ್ ಕೋರಿದ್ದಾರೆ.
ಸರ್ಕಾರಿ ಉದ್ದೇಶಗಳಿಗೆ ಜಮೀನನ್ನು ಕಾಯ್ದಿರಿಸುವ ಸಂಬಂಧ ಹಲವಾರು ಕಡತಗಳು ಬಾಕಿ ಇದ್ದು, ಅಂಬೇಡ್ಕರ್ ವಸತಿ ಶಾಲೆ ಪ್ರಾರಂಭಿಸಲು ಜಾಗ ನಿಗದಿ ಮುಂತಾದ ಕಡತಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ, ತಹಶೀಲ್ದಾರರ ನ್ಯಾಯಾಲಯದಲ್ಲಿ ಕಂದಾಯ ಸಮಸ್ಯೆಗಳ ಪರಿಹಾರಕ್ಕೆ ಹಲವಾರು ವರ್ಷಗಳಿಂದ ಸಾರ್ವಜನಿಕರು ಪರಿತಪಿಸುತ್ತಿದ್ದಾರೆ. ಇಂತಹ ಕಡತಗಳನ್ನೆಲ್ಲ ಶೀಘ್ರ ವಿಲೇವಾರಿ ಮಾಡಬೇಕು ಎಂದು ಬಿ.ಎ. ಹರೀಶ್ ಕೋರಿದ್ದಾರೆ.