ಶನಿವಾರಸಂತೆ, ಜೂ. 20: ಅಖಿಲ ಭಾರತ ವೀರಶೈವ ಮಹಾಸಭಾ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಬಸವ ಜಯಂತಿ ಹಾಗೂ ಕೊಡಗನ್ನಾಳಿದ ವೀರಶೈವ ಲಿಂಗಾಯಿತ ಅರಸ ಚಿಕ್ಕವೀರರಾಜೇಂದ್ರ ಪರ ಬ್ರಿಟೀಷರ ವಿರುದ್ಧ ಹೋರಾಡಿ 1837 ರ ಜೂನ್ 19 ರಂದು ನೇಣುಗಂಬಕ್ಕೇರಿ ಹುತಾತ್ಮರಾದ ವೀರಸೇನಾನಿ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಹೆಮ್ಮನೆ ಗ್ರಾಮದ ಜಂಗಮರ ಪುಟ್ಟಬಸಪ್ಪ (ಕಲ್ಯಾಣಸ್ವಾಮಿ) ಸಂಸ್ಮರಣಾ ಕಾರ್ಯಕ್ರಮವನ್ನು ತಾ. 22 ರಂದು ಬೆಳಿಗ್ಗೆ 10.30 ಕ್ಕೆ ಆಯೋಜಿಸಲಾಗಿದೆ.
ಗುಡುಗಳಲೆ ಜಾತ್ರಾ ಮೈದಾನದ ಶ್ರೀ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಕೆ.ಬಿ. ಹಾಲಪ್ಪ ವಹಿಸಲಿದ್ದಾರೆ.
ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಮಹಾಸ್ವಾಮೀಜಿ ಹಾಗೂ ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಮಹಾ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮಡಿಕೇರಿಯ ನ್ಯಾಯವಾದಿ ಕೆ.ಆರ್. ವಿದ್ಯಾಧರ್, ಮುಖ್ಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್, ಕೊಡಗು ಸಮಾಚಾರ ಪತ್ರಿಕೆ ಸಂಪಾದಕ ಮನುಶೆಣೈ, ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಬಿ. ಧರ್ಮಪ್ಪ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಮಹೇಶ್ ಪಾಲ್ಗೊಳ್ಳಲಿದ್ದಾರೆ.