ಮಡಿಕೇರಿ, ಜೂ. 19: ಕಳೆದ ಸುಮಾರು ಮೂರು ದಶಕದಿಂದ ಕೊಡಗಿನಲ್ಲಿ ಅವ್ಯಾಹತವಾಗಿ ಮರಗಳ್ಳನದೊಂದಿಗೆ ಐಸಾರಾಮಿ ಬದುಕು ಕಂಡುಕೊಂಡಿದ್ದ; ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೇರಿ ಬಳಿಯ ಪಲ್ಲೇರಿ ನಿವಾಸಿ ನೋಬನ್‍ನನ್ನು ತಾ. 16ರಂದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮಾಲು ಸಹಿತ ಬಂಧಿಸಲಾಯಿತು. ಇದೀಗ ಮೂರು ದಿನಗಳ ಪೊಲೀಸ್ ಕಸ್ಟಡಿ ಬಳಿಕ ನ್ಯಾಯಾಲಯದ ಆದೇಶ ಮೇರೆಗೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಹಲವು ಬಾರಿ ಈತರ ಬಂಧನಕ್ಕೆ ಬಲೆ ಬೀಸಿದ್ದರೂ, ಅದು ಸಾಧ್ಯವಾಗದೆ ತಪ್ಪಿಸಿಕೊಳ್ಳುತ್ತಿದ್ದ ಮಾತ್ರವಲ್ಲದೆ ದಶಕದ ಹಿಂದೆಯೇ ಪೊಲೀಸ್ ಇನ್ಸ್‍ಪೆಕ್ಟರ್ ರಾಘವೇಂದ್ರ ಎಂಬವರು ಸಿಬ್ಬಂದಿ ಸಹಿತ ಈತನ ಬಂಧನಕ್ಕೆ ಬಲೆ ಬೀಸಿದ ವೇಳೆ ಅಧಿಕಾರಿ ಮೇಲೆಯೇ ಗುಂಡು ಹಾರಿಸಿ ತಪ್ಪಿಸಿಕೊಂಡಿದ್ದ. ಈ ಸಂದರ್ಭ ರಮೇಶ್ ಎಂಬ ಠಾಣಾ ಉಪನಿರೀಕ್ಷಕರೊಬ್ಬರು ಕ್ಷಣಮಾತ್ರದಿಂದ ಮೇಲಧಿಕಾರಿಯನ್ನು ರಕ್ಷಿಸಿದರು.

ನಾಲ್ಕೇರಿ ಬಳಿಯ ಪಲ್ಲೇರಿಯ ಕಾಫಿ ಬೆಳೆಗಾರ ಕೂಡ ಆಗಿರುವ ನೋಬನ್ ಈ ಅಕ್ರಮ ಮರದಂಧೆಯೊಂದಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ನೆರಳಿನಿಂದ ಇಂದು ಕೋಟ್ಯಾಧಿಪತಿ ಆಗಿದ್ದಾಗಿ ಸಾರ್ವಜನಿಕ ವಲಯದಲ್ಲಿ ಕೇಳಿಬರುವ ಮಾತಾಗಿದೆ. ಅಲ್ಲದೆ ಪೊಲೀಸರ ವಿಚಾರಣೆ ಸಂzರ್ಭ ಬೆಂಗಳೂರಿನ ಡಾಲರ್ಸ್ ಕಾಲೋನಿ, ಮಲ್ಲೇಶ್ವರಂ ಹಾಗೂ ಕೋರಮಂಗಲದಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಬಂಗಲೆಗಳನ್ನು ಹೊಂದಿರುವ ಸುಳಿವು ಲಭಿಸಿದೆ.

ಈತ ಪಲ್ಲೇರಿಯ ತನ್ನ ಬಂಗಲೆಗೆ ಕೂಡ ಪರಿಚಿತರಿಗಷ್ಟೇ ಪ್ರವೇಶ ನೀಡುತ್ತಿದ್ದುದ್ದಾಗಿ ಮಾಹಿತಿ ಲಭಿಸಿದೆ. ಮೊನ್ನೆ ನಡೆದ ಕಾರ್ಯಾಚರಣೆ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಸಹಿತ ಗೋಣಿಕೊಪ್ಪಲು ಮತ್ತು ಕುಟ್ಟ ಠಾಣೆಯ ಹೆಚ್ಚಿನ ಪೊಲೀಸರು ಶಸ್ತ್ರಸಜ್ಜಿತ ಕಾರ್ಯಾಚರಣೆ ಮೂಲಕ ಆರೋಪಿಯ ಕೋಟೆ ಭೇದಿಸಿದ್ದಾಗಿ ಹೇಳಲಾಗುತ್ತಿದೆ. ಮಾತ್ರವಲ್ಲದೆ; ಈತ ಹೊಂದಿರುವ ದಂಧೆಯ ಕುರಿತು ಹೆಚ್ಚಿನ ತನಿಖೆಗಾಗಿ ಮೂರು ದಿವಸ ನ್ಯಾಯಾಲಯದ ಮುಖಾಂತರ ಪೊಲೀಸರ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು.

ಈ ವೇಳೆ ಈತ ಬೇರೆ ಬೇರೆ ಕಡೆಗಳಲ್ಲಿ ಮರಗಳನ್ನು ಕಡಿದು ದಾಸ್ತಾನುಗೊಳಿಸಿರುವದು; ಮೈಸೂರು, ಕಣ್ಣೂರು, ಕೇರಳದ ಕುತ್ತಾಡಿ ಮುಂತಾದೆಡೆಗಳಲ್ಲಿ ಮಾರಾಟಗೊಳಿಸಿರುವ ಮಾಹಿತಿ ಕಲೆ ಹಾಕಲಾಗಿದೆ. ಅಲ್ಲದೆ ಈತ ತನ್ನನ ದಂಧೆಯ ಮಾರ್ಗವನ್ನು ಬದಲಾಯಿಸಿರುವದು ಕೂಡ ತನಿಖೆ ವೇಳೆ ಬೆಳಕಿಗೆ ಬಂದಿದೆ.

(ಮೊದಲ ಪುಟದಿಂದ)

ವ್ಯವಸ್ಥಿತ ದಂಧೆ : ಸಾರ್ವಜನಿಕ ವಲಯದ ಸುಳಿವಿನ ಪ್ರಕಾರ ನಿರಂತರವಾಗಿ ದಕ್ಷಿಣ ಕೊಡಗಿನ ಕುಟ್ಟ ಮಾರ್ಗವಾಗಿ ಕೇರಳಕ್ಕೆ ಮರಗಳ ಸಾಗಾಟ ಮಾಡುತ್ತಿದ್ದ ಈತ, ಆ ಭಾಗದಲ್ಲಿ ಪೊಲೀಸ್ ಇಲಾಖೆ ಸಿ.ಸಿ. ಕ್ಯಾಮರಾ ಅಳವಡಿಸಿದ್ದರಿಂದ ಕುಶಾಲನಗರ ಮುಖಾಂತರ ಮಾರ್ಗ ಬದಲಾಯಿಸಿಕೊಂಡಿದ್ದಾಗಿ ತಿಳಿದು ಬಂದಿದೆ.

ಇನ್ನು ಈ ದಂಧೆ ಬಳಸುತಿದ್ದು, ಪೊಲೀಸರು ವಶಕ್ಕೆ ಪಡೆದಿರುವ ಲಾರಿಯ ನೋಂದಣಿ ಸಂಖ್ಯೆ ಕೂಡ ನಕಲಿಯಾಗಿದೆ ಎಂದು ಗೊತ್ತಾಗಿದೆ. ಮಾತ್ರವಲ್ಲದೆ ಮರಗಳನ್ನು ಸಾಗಿಸುವ ವೇಳೆ ತಪಾಸಣಾ ಗೇಟ್‍ಗಳಲ್ಲಿ ಸುಳಿವು ಲಭಿಸದಂತೆ ಲಾರಿ ತುಂಬಾ ಕಾಫಿ ಸಿಪ್ಪೆ, ಜೋಳ ಇತ್ಯಾದಿಯಲ್ಲದೆ ಭತ್ತದ ಹೊಟ್ಟು ಇರಿಸುತ್ತಿದ್ದದ್ದು ಬಹಿರಂಗ ಗೊಂಡಿದೆ. ಇಂಥ ಕಣ್ಣು ಮುಚ್ಚಾಲೆ ದಂಧೆಗೆ ಇದೀಗ ಕೊಡಗು ಪೊಲೀಸರು ಪೂರ್ಣವಿರಾಮ ದೊಂದಿಗೆ ಆತನನ್ನು ಜೈಲಿಗೆ ಅಟ್ಟಿದ್ದು, ಜನವಲಯದಲ್ಲಿ ತೀವ್ರ ಪ್ರಶಂಸೆ ವ್ಯಕ್ತಗೊಳ್ಳುವಂತಾಗಿದೆ. ಪ್ರಮುಖ ಆರೋಪಿ ನೋಬನ್ ಹಾಗೂ ಇತರ ಆರೋಪಿಗಳಾದ ರಾಜೇಂದ್ರ, ದಾವೂದ್, ಅಯ್ಯಪ್ಪ ವಿರುದ್ಧ ಅರಣ್ಯ ಅಪರಾಧ ಕಾಯ್ದೆ 104ಎ, 80, 71ಎ ಹಾಗೂ ಅರಣ್ಯ ನಿಯಮ ಉಲ್ಲಂಘನೆ ಕಾನೂನು ಸೆ. 1`44, 127ಎ, 165 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮುಂದುವರಿದು ಐಪಿಸಿ 465, 468, 471, 420 ಹಾಗೂ 379 ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದ್ದು, ಹೆಚ್ಚಿನ ತನಿಖೆಯನ್ನು ಗೋಣಿಕೊಪ್ಪಲು ಪೊಲೀಸ್ ಠಾಣಾಧಿಕಾರಿ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ವಹಿಸಿದ್ದಾರೆ.

ಸಮಗ್ರ ತನಿಖೆಗೆ ಆಗ್ರಹ : ಕಳೆದ ಮೂರು ದಶಕಗಳಿಂದ ಅಕ್ರಮ ಮರ ಹನನದೊಂದಿಗೆ ಅಮಾಯಕರಿಗೆ ಬೆದರಿಸಿ ವಂಚಿಸಿರುವ ನೋಬನ್ ವಿರುದ್ಧದ ಎಲ್ಲ ಕೃತ್ಯಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕೊಡಗು ಏಕೀಕರಣ ರಂಗದ ಪ್ರಮುಖ ತಮ್ಮು ಪೂವಯ್ಯ ಆಗ್ರಹಿಸಿದ್ದಾರೆ. ಕೊಡಗಿನ ಅರಣ್ಯ ಲೂಟಿಯಿಂದ ನೂರಾರು ಕೋಟಿ ಗಳಿಸಿರುವ ಈತನ ಬಗ್ಗೆ ಆದಾಯ ತೆರಿಗೆ ಇಲಾಖೆ ಕೂಲಂಕಷ ತನಿಖೆ ನಡೆಸಬೇಕೆಂದು ಒತ್ತಾಯಿಸಿ ದ್ದಾರೆ. ಮಾತ್ರವಲ್ಲದೆ ಈತನ ಸಹಚರರ ಕುರಿತಾಗಿಯೂ ಸಮಗ್ರ ಮಾಹಿತಿ ಸಂಗ್ರಹಿಸಿ ವಿಚಾರಣೆಗೆ ಒಳಪಡಿಸು ವಂತೆ ಅವರು ಆಗ್ರಹಿಸಿದ್ದಾರೆ. ಹಿಂದೊಮ್ಮೆ ಈತ ನಡೆಸಿರುವ ಅಕ್ರಮ ಮರಗಳ ಹನನದ ಕುರಿತು ಏಕೀಕರಣ ರಂಗ ಮೊಕದ್ದಮೆ ದಾಖಲಿಸಿ ದ್ದಾಗಿಯೂ ತಮ್ಮು ಪೂವಯ್ಯ ನೆನಪಿಸಿದ್ದು, ಪ್ರಸಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಇಲಾಖೆಯ ಕಾರ್ಯಾಚರಣೆಯನ್ನು ಅವರು ಶ್ಲಾಘಿಸಿದ್ದಾರೆ.