ಮಡಿಕೇರಿ, ಜೂ. 19: ತಾ. 20 ರಿಂದ (ಇಂದಿನಿಂದ) ಜಿಲ್ಲೆಯಲ್ಲಿ ಎರಡು ವಾರಗಳ ತನಕ ಮುಂಗಾರು ಮಳೆಯು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಸುಳಿವು ನೀಡಿದೆ ಎಂದು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ದಿಸೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅವರು ಜನತೆಗೆ ಸಲಹೆ ನೀಡಿದ್ದಾರೆ. ಅಲ್ಲದೆ, ಜಿಲ್ಲಾಡಳಿತ ಸಿದ್ಧಪಡಿಸಿರುವ ಎರಡನೇ ಪಟ್ಟಿಯಲ್ಲಿ ಸೇರಿರುವ ಅಪಾಯದ ಅಂಚಿನಲ್ಲಿರುವ ಮತ್ತು ಅಪಾಯದ ಪ್ರದೇಶಗಳಲ್ಲಿರುವ ಮನೆಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ಮನೆ ತೆರವು ಗೊಳಿಸಲು ಸ್ಥಳೀಯ ಪ್ರಾಧಿಕಾರ ದಿಂದ ತಿಳುವಳಿಕೆ ನೀಡಲಾಗಿದೆ.
ಈ ಕುಟುಂಬಗಳು ಬೇರೆ ವಸತಿ ಪ್ರದೇಶಗಳಿಗೆ ತೆರಳಲು ಅನುಕೂಲವಾಗುವ ದೃಷ್ಟಿಯಿಂದ ಮಾಸಿಕ ತಲಾ ರೂ. 10 ಸಾವಿರದಂತೆ ಮೂರು ತಿಂಗಳವರೆಗೆ ಬಾಡಿಗೆ ಭತ್ಯೆಯನ್ನು ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವದು ಎಂದು ಅವರು ತಿಳಿಸಿದ್ದಾರೆ.ಪ್ರಸ್ತುತ ಜೂನ್ ಮಾಹೆಯ ಬಾಡಿಗೆ ಹಣವನ್ನು ಈಗಾಗಲೇ ಸಂಬಂಧಪಟ್ಟ ಸಂತ್ರಸ್ತರ ಬ್ಯಾಂಕ್ ಖಾತೆಗೆ ನೇರ (ಮೊದಲ ಪುಟದಿಂದ) ವರ್ಗಾವಣೆ ಮಾಡಲಾಗಿದೆ. ಸಂತ್ರಸ್ತರು ತಮಗೆ ಯಾವದೇ ನೆರವು ಅಗತ್ಯವಿದ್ದಲ್ಲಿ ಹಾಗೂ ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಲು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.
ಅಲ್ಲದೆ ಸಾರ್ವಜನಿಕರು ಪ್ರಕೃತಿ ವಿಕೋಪ ಸಂಬಂಧಿತ ಯಾವದೇ ಸಮಸ್ಯೆಗಳಿಗೆ ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ 08272-221077 ಹಾಗೂ ವಾಟ್ಸ್ ಆ್ಯಪ್ 8550001077ರಲ್ಲಿ ಸಂಪರ್ಕಿ ಸಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆ ವಿವರ
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 0.47 ಇಂಚು ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಈ ಅವಧಿಗೆ 43.27 ಇಂಚು ದಾಖಲಾಗಿದ್ದು, ಪ್ರಸಕ್ತ 11.73 ಇಂಚು ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಇದುವರೆಗೆ ಸರಾಸರಿ 14.73 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಸಮಯಕ್ಕೆ 57.11 ಇಂಚು ದಾಖಲಾಗಿತ್ತು. ವೀರಾಜಪೇಟೆ ತಾಲೂಕಿಗೆ ಈ ತನಕ 14.18 ಇಂಚು ಮಳೆಯಾಗಿದೆ. ಹಿಂದಿನ ಅವಧಿಗೆ 41.11 ಇಂಚು ದಾಖಲಾಗಿತ್ತು.
ಸೋಮವಾರಪೇಟೆ ತಾಲೂಕಿಗೆ ಈ ಸಾಲಿನಲ್ಲಿ 6.78 ಇಂಚು ಮಳೆಯಾದರೆ, ಕಳೆದ ವರ್ಷ ಈ ಅವಧಿಗೆ 34.58 ಇಂಚು ಮಳೆ ದಾಖಲಾಗಿತ್ತು.
ಹಾರಂಗಿ ಜಲಾಶಯ: ಹಾರಂಗಿ ಜಲಾಶಯದ ಗರಿಷ್ಠ 2859 ಅಡಿಗಳಲ್ಲಿ ಪ್ರಸಕ್ತ ಕೇವಲ 2805.86 ಅಡಿ ನೀರಿದೆ. ಕಳೆದ ವರ್ಷ ಈ ಅವಧಿಗೆ 2831.50 ಅಡಿ ನೀರು ಸಂಗ್ರಹಗೊಂಡಿತ್ತು. ಪ್ರಸಕ್ತ 25.92 ಅಡಿ ಕಡಿಮೆ ಗೋಚರಿಸಿದೆ. ಅಂತೆಯೇ ಈಗ ಜಲಾಶಯಕ್ಕೆ 160 ಕ್ಯೂಸೆಕ್ಸ್ ಒಳ ಹರಿವಿದ್ದು, ಕಳೆದ ವರ್ಷ ಈ ದಿನಕ್ಕೆ 968 ಕ್ಯೂಸೆಕ್ಸ್ ಬರುತ್ತಿತ್ತು.