ಮಡಿಕೇರಿ, ಜೂ. 19: ಕರ್ತವ್ಯ ನಿರ್ವಹಣೆ ಸಂದರ್ಭ ಕಾನೂನು ಪಾಲನೆ ಅಗತ್ಯವಾದರೂ; ಕಾನೂನಿಗೆ ಮಾತ್ರ ಒತ್ತು ನೀಡದೆ ಮಾನವೀ ಯತೆಗೂ ಆದ್ಯತೆ ನೀಡಿ ಜನಪರ ವಾಗಿಯೂ ಕಾರ್ಯನಿರ್ವಹಿಸಿ ಎಂದು ಕಂದಾಯ ಇಲಾಖಾ ಸಚಿವ ಆರ್.ವಿ. ದೇಶಪಾಂಡೆ ಅಧಿಕಾರಿ ವರ್ಗಕ್ಕೆ ಕಿವಿಮಾತು ಹೇಳಿದರು.ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿಂದು ನಡೆದ ಪ್ರಕೃತಿ ವಿಕೋಪ ಪರಿಹಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಬಂದಾಗ ಕುರ್ಚಿ ನೀಡಿ ಅವರುಗಳನ್ನು ಕುಳ್ಳರಿಸಿ ಸೌಜನ್ಯದಿಂದ ಅವರ ಸಮಸ್ಯೆಗಳನ್ನು ಆಲಿಸುವ ಮೂಲಕ ಅವುಗಳ ಪರಿಹಾರಕ್ಕೆ ಕ್ರಮಕೈಗೊಳ್ಳಿ. ಸಮಸ್ಯೆಗಳಿರುವಲ್ಲಿಗೆ ಖುದ್ದು ತೆರಳಿ ಪರಿಶೀಲಿಸಿ ಜನರ ನೋವುಗಳಿಗೆ ಸ್ಪಂದಿಸುವ ಕೆಲಸ ಮಾಡಿ ಎಂದು ಕಂದಾಯ ಸಚಿವರು ಸಲಹೆಯಿತ್ತರು.ಗಾಳಿಬೀಡುವಿನ ಆರ್‍ಟಿಓ ಕಚೇರಿ ಬಳಿ ಸರ್ಕಾರ ಮಾದರಿ ಮನೆಗಳನ್ನು ನಿರ್ಮಿಸಿದ್ದು, ಅಲ್ಲಿ ಹೆಲಿಪ್ಯಾಡ್ ಮಾಡುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ ಎಂದು ಶಾಸಕ ಬೋಪಯ್ಯ ಸಭೆಯಲ್ಲಿ ಪ್ರಸ್ತಾಪಿಸಿದರು. ಪಕ್ಕದಲ್ಲೇ ಗಾಲ್ಫ್ ಮೈದಾನ ಇರುವ ಹಿನ್ನೆಲೆ ಇವೆಲ್ಲಾ ಯೋಜನೆ ರೂಪಿಸುತ್ತಿದೆ. ಪ್ರಸ್ತುತ ಹಾರಂಗಿಯಲ್ಲಿರುವ ಹೆಲಿಪ್ಯಾಡ್ ಏನಾಗಿದೆ? ಗಾಳಿಬೀಡುವಿನ ಜಾಗವನ್ನು ನಿರಾಶ್ರಿತರಿಗೆ ನೀಡಿ ಎಂದರು. ಕಂದಾಯ ಸಚಿವರು ಈ ಬಗ್ಗೆ ಪರಿಶೀಲಿಸಿ, ಹೆಲಿಪ್ಯಾಡ್ ನಿರ್ಮಾಣ ಮಾಡಬೇಡಿ ಅದರ ಬದಲು ನಿರಾಶ್ರಿತರಿಗೆ ಜಾಗ ಕಲ್ಪಿಸಿ ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.
ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಧಾರವನ್ನು ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ ಎಂದು ಎಂಎಲ್‍ಸಿ ಸುನಿಲ್ ಸುಬ್ರಮಣಿ ಆಕ್ಷೇಪಿಸಿದರು. ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಕೂಡ ಅಧಿಕಾರಿಗಳ ನಡೆಗೆ ಗರಂ ಆದರು. ಕಳೆದ ಸಭೆಗೆ ಅರಣ್ಯಾಧಿಕಾರಿ ಗೈರನ್ನು ಪ್ರಶ್ನಿಸಿದರು. ನೆಮ್ಮದಿಯಾಗಿ ನಿವೃತ್ತಿ ಆಗೋದು ಬೇಡ್ವಾ ಎಂದು ಹರಿಹಾಯ್ದರು. ಅಭಿವೃದ್ಧಿ ಅಡ್ಡಗಾಲು ಹಾಕುತ್ತಿರುವ ಅರಣ್ಯ ಇಲಾಖಾಧಿ ಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
‘ಕೋರಂ ಇಲ್ಲದೆ ಸಭೆ
ಹೇಗೆ ಮಾಡಿದ್ರಿ?’
ನಿನ್ನೆ ದಿನ ಜಿಲ್ಲಾಧಿಕಾರಿ ಹಾಗೂ ಇಬ್ಬರು ಅರಣ್ಯಾಧಿಕಾರಿಗಳನ್ನು ಮಾತ್ರ ಒಳಗೊಂಡು ವೃಕ್ಷಪ್ರಾಧಿಕಾರದ ಸಭೆ ನಡೆಸಲಾಗಿದೆ. ಇದೆಷ್ಟು ಸರಿ? ಸೂಕ್ತ ಕೋರಂ ಇಲ್ಲದೆ ಹೇಗೆ ಸಭೆ ನಡೆಸಲಾಗಿದೆ? ಜಿಲ್ಲೆಯಲ್ಲಿ ಕೃಷಿಕರು ಹಾಗೂ ಬೆಳೆಗಾರರು ಸ್ವಂತ ಉಪಯೋಗಕ್ಕೆ ಒಂದು ಕೃಷಿಕ ಕುಟುಂಬಕ್ಕೆ 15 ವರ್ಷದವರೆಗೆ 300 ಸಿಎಫ್‍ಟಿ ಮರ ಬಳಕೆಗೆ ಮಾತ್ರ ಅವಕಾಶ
(ಮೊದಲ ಪುಟದಿಂದ) ಎಂದು ಯಾವ ಮಾನದಂಡದಲ್ಲಿ ನಿರ್ಣಯ ಕೈಗೊಂಡಿದ್ದೀರಿ ಎಂದು ಶಾಸಕ ಕೆ.ಜಿ. ಬೋಪಯ್ಯ ಕಿಡಿಕಾರಿದರು. ನಿನ್ನೆ ನಡೆಸಲಾಗಿರುವ ಸಭೆಯಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದರು. ಅರಣ್ಯಾಧಿಕಾರಿ ಸಂತೋಷ್ ಕುಮಾರ್ ಪ್ರತಿಕ್ರಿಯಿಸಿ ನಿನ್ನೆಯದ್ದು ಪ್ರಾಥಮಿಕ ಸಭೆಯಾಗಿತ್ತು. ಜಿಲ್ಲಾಧಿಕಾರಿ ಜೊತೆ ಚರ್ಚೆ ಮಾಡಿದ್ದೇವೆ. ನೀಡಿರುವ ಆದೇಶವನ್ನು ಹಿಂಪಡೆಯುತ್ತೇವೆ ಎಂದು ಹೇಳಿದರು.
ಸಂತ್ರಸ್ತರಿಗೆ ಗಾಳಿಬೀಡಿನಲ್ಲಿ ನಿರ್ಮಾಣವಾಗದ ಮನೆಗಳು
ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಮನೆಗಳನ್ನು ನಿರ್ಮಿಸಿಕೊಡುವ ನಿಟ್ಟಿನಲ್ಲಿ ಗಾಳಿಬೀಡಿನಲ್ಲಿ ಕೂಡ ಜಾಗವನ್ನು ಗುರುತಿಸಲಾಗಿತ್ತು. ಆದರೆ ಗುರುತಿಸಲಾದ ಜಾಗಕ್ಕೆ ತೆರಳಲು ಒಂದು ಕಿ.ಮೀ. ರಸ್ತೆ ಇಲ್ಲವೆಂಬ ಕಾರಣಕ್ಕೆ ಅಲ್ಲಿ ಮನೆಗಳ ನಿರ್ಮಾಣ ಕಾರ್ಯ ಇನ್ನೂ ಕೂಡ ಆರಂಭವಾಗಿಲ್ಲ ಎಂಬ ವಿಚಾರ ಸಭೆಯಲ್ಲಿ ಪ್ರಸ್ತಾಪಗೊಂಡು ತೀವ್ರ ಚರ್ಚೆಗೆ ಗ್ರಾಸವಾಯಿತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ದೇಶಪಾಂಡೆಯವರು, ರಸ್ತೆ ಕಾಮಗಾರಿಗೆ ಅಗತ್ಯವಾದ ಹಣವನ್ನು ಒದಗಿಸಲಾಗುವದು; ನಾಳೆಯಿಂದ ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿ ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಸೂಚಿಸಿದರು. ಪುನರ್ವಸತಿ ಕಾಮಗಾರಿಗಳು ನಿಧಾನವಾಗಿ ನಡೆಯುತ್ತಿದ್ದು, ಸಂತ್ರಸ್ತರಿಗೆ ತೊಂದರೆಯಾಗುತ್ತಿದೆ ಎಂದು ಶಾಸಕರುಗಳಾದ ಸುನಿಲ್ ಸುಬ್ರಮಣಿ, ಕೆ.ಜಿ. ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.
‘ಎಂಎಲ್‍ಎಗಳಿಗೆ ಮಾಹಿತಿ ಕೊಡೋಕೇನ್ ಕಷ್ಟ?’
ಹದಿನೈದು ದಿನಗಳ ಹಿಂದೆ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ನಡೆದಾಗ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳನ್ನು ಕೇಳಿದ್ದೆ. ಆದರೆ ಇದುವರೆಗೂ ಮಾಹಿತಿ ಸಿಕ್ಕಿಲ್ಲ ಎಂದು ಶಾಸಕ ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಸಚಿವ ದೇಶಪಾಂಡೆಯವರು ಜಿಲ್ಲಾಧಿಕಾರಿ ಯವರನ್ನು ಪ್ರಶ್ನಿಸಿದಾಗ, ‘ಎಲ್ಲಾ ಮಾಹಿತಿ ವೆಬ್‍ಸೈಟ್‍ನಲ್ಲಿ ಲಭ್ಯವಿದೆ’ ಎಂದು ಜಿಲ್ಲಾಧಿಕಾರಿಗಳು ಉತ್ತರಿಸಿದಾಗ ಪ್ರತಿಕ್ರಿಯಿಸಿದ ಬೋಪಯ್ಯ ವೆಬ್‍ಸೈಟ್‍ನಲ್ಲಿ ಮಾಹಿತಿ ಇದೆ ಆದರೆ, ನಮ್ಮ ಬಳಿ ಎಲ್ಲಿದೆ? ಎಂಎಲ್‍ಎಗಳಿಗೆ ಮಾಹಿತಿ ಕೊಡೋಕೇನ್ ಕಷ್ಟ ನಿಮ್ಗೆ? ಎಂದು ಖಾರವಾಗಿ ಪ್ರಶ್ನಿಸಿದರು. ಅತಿವೃಷ್ಟಿ ನಿರ್ವಹಣೆ ಸಂಬಂಧ ನೇಮಿಸಲಾಗಿರುವ ನೋಡೆಲ್ ಅಧಿಕಾರಿಗಳಿಗಂತೂ ಕನಿಷ್ಟ ಜ್ಞಾನವಿಲ್ಲ ಎಂದು ಟೀಕಿಸಿದರು.
4 ತಿಂಗಳೊಳಗೆ ಮನೆಗಳ ಕಾಮಗಾರಿ ಪೂರ್ಣ
ಪ್ರಾಕೃತಿಕ ವಿಕೋಪದಿಂದ ನಿರಾಶ್ರಿತರಾದವರಿಗಾಗಿ ಸರ್ಕಾರದಿಂದ 770 ಹಾಗೂ ಇನ್ಫೋಸಿಸ್ ಫೌಂಡೇಶನ್‍ನಿಂದ 200 ಸೇರಿದಂತೆ ಸುಮಾರು 1000 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಕರ್ಣಂಗೇರಿ ಯಲ್ಲಿ ನಿರ್ಮಿಸಲಾಗಿರುವ 35 ಮನೆಗಳನ್ನು ಸದ್ಯದಲ್ಲಿಯೇ ಹಸ್ತಾಂತರಿಸಲಾಗುತ್ತದೆ. ಉಳಿದ ಮನೆಗಳನ್ನು 4 ತಿಂಗಳೊಳಗಾಗಿ ಸಂಪೂರ್ಣ ಕೆಲಸ ಮುಗಿಸಿ ನಿರಾಶ್ರಿತರಿಗೆ ನೀಡಲಾಗುತ್ತದೆ ಎಂದು ಸಚಿವ ದೇಶಪಾಂಡೆ ಹೇಳಿದರು. ಕಳೆದ ಮಳೆಗೆ ಹಾನಿಗೊಳಗಾಗಿದ್ದ ಸೋಮವಾರಪೇಟೆ ರಸ್ತೆ ಕಾಮಗಾರಿ ಹಾಗೂ ಕರ್ಣಂಗೇರಿಯಲ್ಲಿ ನಿರಾಶ್ರಿತರಿಗೆ ನಿರ್ಮಾಣವಾಗುತ್ತಿರುವ ಮನೆಗಳ ಕಾಮಗಾರಿಯನ್ನು ಸಚಿವರು ವೀಕ್ಷಣೆ ಮಾಡಿದರು. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ, ಪ್ರಾದೇಶಿಕ ಆಯುಕ್ತ ಯಶ್ವಂತ್, ಉಪ ವಿಭಾಗ ಅಧಿಕಾರಿ ಜವರೇಗೌಡ, ಎಸ್‍ಪಿ ಡಾ. ಸುಮನ್ ಮತ್ತಿತರರು ಉಪಸ್ಥಿತರಿದ್ದರು.