ಮಡಿಕೇರಿ, ಜೂ. 19 : ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಕೊಡಗಿನ ಮಳೆಹಾನಿ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು. ಸಚಿವರ ಗಮನ ಸೆಳೆದ ಪಕ್ಷದ ಪ್ರಮುಖರು ಜಿಲ್ಲೆಯನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳು ಹಾಗೂ ಸಂತ್ರಸ್ತರ ಸಂಕಷ್ಟದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಕಳೆದ ಮಳೆಗಾಲದ ಸಂದರ್ಭ ಹಾರಂಗಿ ಜಲಾಶಯದಿಂದ ಯಾವದೇ ಮುನ್ಸೂಚನೆ ಇಲ್ಲದೆ ಏಕಾಏಕಿ ನೀರು ಬಿಟ್ಟ ಪರಿಣಾಮ ಕುಶಾಲನಗರ ಹಾಗೂ ಕೂಡಿಗೆ ವ್ಯಾಪ್ತಿಯಲ್ಲಿ ಆದ ಅನಾಹುತದ ಬಗ್ಗೆ ಮುಖಂಡರು ವಿವರಿಸಿದರು. ಅಲ್ಲದೆ ಕಾರಣಕರ್ತರಾದ ಅಭಿಯಂತರರು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವದಾಗಿ ಸಚಿವ ದೇಶಪಾಂಡೆ ಭರವಸೆ ನೀಡಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಸದಸ್ಯರಾದ ಕೆ.ಪಿ.ಚಂದ್ರಕಲಾ, ಟಿ.ಪಿ.ರಮೇಶ್, ಮಾಜಿ ಶಾಸಕ ವಾಸು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಧರ್ಮಜ ಉತ್ತಪ್ಪ, ಕೆ.ಎಂ.ಲೋಕೇಶ್, ವಿ.ಪಿ.ಶಶಿಧರ್, ಮಡಿಕೇರಿ ನಗರಾಧ್ಯಕ್ಷ ಅಬ್ದುಲ್ ರಜಾóಕ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೇ ಸಂದರ್ಭ ಪ್ರಕೃತಿ ವಿಕೋಪದ ಪರಿಸ್ಥಿತಿಯಲ್ಲಿ ಕೊಡಗಿನ ಜನತೆಗೆ ನೆರವಾಗುವ ಉದ್ದೇಶದಿಂದ ಸ್ಥಾಪನೆಗೊಂಡ “ಕೊಡಗು ಸೇವಾ ಹಸ್ತ” ಎಂಬ ಕೊಡಗು ಕಾಂಗ್ರೆಸ್ ಕಾರ್ಯಕರ್ತರ ಸ್ವಯಂಸೇವಾ ಸಂಘಟನೆಗೆ ಸಚಿವ ದೇಶಪಾಂಡೆ ಅವರು ಚಾಲನೆ ನೀಡಿದರು.