ಶ್ರೀಮಂಗಲ, ಜೂ. 17: ಶ್ರೀಮಂಗಲ ಮತ್ತು ಹುದಿಕೇರಿ ಹೋಬಳಿಯ ಗ್ರಾಮಗಳಿಗೆ ವಿದ್ಯುತ್ ಸಂಪರ್ಕದಲ್ಲಿ ನಿರಂತರ ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಪಿಸಿ ಶ್ರೀಮಂಗಲ ಉಪಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ರೈತ ಸಂಘ - ಹಸಿರು ಸೇನೆ ಮತ್ತು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿ ಕೇಂದ್ರಕ್ಕೆ ಬೀಗ ಜಡಿಯಲು ಮುಂದಾದರು. ಈ ಸಂದರ್ಭ ಶ್ರೀಮಂಗಲ ಠಾಣಾಧಿಕಾರಿ ಟಿ.ಎಂ. ಸಾಬು ಹಾಗೂ ಪೆÇನ್ನಂಪೇಟೆ ಠಾಣಾಧಿಕಾರಿ ಡಿ.ಜಿ. ಮಹೇಶ್ ಬೀಗ ಜಡಿಯಲು ಮುಂದಾದ ಪ್ರತಿಭಟನಾಕಾರರ ಮನವೊಲಿಸಿ ತಮ್ಮ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಅವಕಾಶ ಕಲ್ಪಿಸುವಂತೆ ತಿಳಿಸಿದರು.

ಇದಕ್ಕೆ ಸಮ್ಮತಿಸಿದ ಪ್ರತಿಭಟನಾಕಾರರು 15 ದಿನಗಳ ಗಡುವು ನೀಡಿ, ಟಿ. ಶೆಟ್ಟಿಗೇರಿ ಕೊಡವ ಸಮಾಜದ ಸಭಾಂಗಣದಲ್ಲಿ ಜಿಲ್ಲಾ ಮುಖ್ಯ ಕಾರ್ಯಪಾಲಕ ಇಂಜಿನಿಯರ್, ವೀರಾಜಪೇಟೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಶ್ರೀಮಂಗಲ ಕೇಂದ್ರದ ಶಾಖಾ ಅಭಿಯಂತರÀರ ಸಮ್ಮುಖದಲ್ಲಿ ಸಭೆ ಕರೆಯಲು ನಿರ್ಧರಿಸಿ, ಅದರೊಳಗೆ ಈ ಭಾಗದ ಸಮಸ್ಯೆ ಇತ್ಯರ್ಥಪಡಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಈ ಸಂದರ್ಭ ಪ್ರತಿಭಟನಾಕಾರರ ಮನವಿ ಆಲಿಸಿದ ಶ್ರೀಮಂಗಲ ಉಪಕೇಂದ್ರ ಶಾಖಾಧಿಕಾರಿ ವಿಜಯಕುಮಾರ್ ಮುಂದಿನ 15 ದಿನದೊಳಗೆ ತನ್ನ ವ್ಯಾಪ್ತಿಯಲ್ಲಿ ಆಗುವ ಕೆಲಸಗಳನ್ನು ಮಾಡಲಾಗುವದು. ಉಳಿದ ಕೆಲಸಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುವದಾಗಿ ಭರವಸೆ ನೀಡಿದರು.

ಈ ಸಂದರ್ಭ ಮಾತನಾಡಿದ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಶ್ರೀಮಂಗಲ ಮತ್ತು ಹುದಿಕೇರಿ ಹೋಬಳಿಯ ಗ್ರಾಮಗಳಿಗೆ ವಿದ್ಯುತ್ ಸಂಪರ್ಕದಲ್ಲಿ ನಿರಂತರ ವ್ಯತ್ಯಯ ಉಂಟಾಗುತ್ತಿದ್ದು, ಈ ವ್ಯಾಪ್ತಿಯಲ್ಲಿ ಲೈನ್ ಮ್ಯಾನ್‍ಗಳ ಕೊರತೆ ಇದೆ ಎಂದು ಪ್ರಮುಖ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ರಾಜ್ಯ ರೈತ ಸಂಘ - ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಮಾತನಾಡಿ ಶ್ರೀಮಂಗಲ ವಿದ್ಯುತ್ ಸರಬರಾಜು ಉಪಕೇಂದ್ರದ ಅಭಿಯಂತರರು ತಮ್ಮ ವ್ಯಾಪ್ತಿಯಲ್ಲಿ ಆಗುವ ಎಲ್ಲಾ ಕೆಲಸ ಹಾಗೂ ಮಾರ್ಗದ ಕುಂದುಕೊರತೆಯನ್ನು ಮುಂದಿನ 15 ದಿನದೊಳಗೆ ಮಾಡಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಕಾರ್ಯಧ್ಯಕ್ಷ ಬಾಚೀರ ಕಾರ್ಯಪ್ಪ, ರೈತ ಸಂಘ ಹಸಿರು ಸೇನೆಯ ಪ್ರಮುಖ ಚೆಟ್ಟಂಗಡ ಕಾರ್ಯಪ್ಪ, ಅಪ್ಪಚ್ಚಂಗಡ ಮೋಟಯ್ಯ, ಕಟ್ಟೇರ ಈಶ್ವರ, ಹರಿಹರ ಗ್ರಾಮದ ಕೈಬೀಲಿರ ಸುನೀಲ್, ಶಂಕರು, ತಾವಳಗೇರಿ ಗ್ರಾಮದ ತಡಿಯಂಗಡ ಸೋಮಣ್ಣ, ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ, ಬೊಟ್ಟಂಗಡ ತಿಲಕ್, ಬೊಜ್ಜಂಗಡ ಪ್ರತಾಪ್, ನೂರೇರ ಉತ್ತಯ್ಯ, ಕಳ್ಳೇಂಗಡ ನಿಖಿನ್, ಚೊಟ್ಟೆಯಂಡಮಾಡ ವಿಶು, ಬೋಸು, ಮಾಣೀರ ಸಂಜು, ಬಲ್ಲಿಮಾಡ ಸುಬ್ರಮಣಿ, ಅಮ್ಮತ್ತಿರ ರೇವತಿ, ಬಲ್ಯಮೀದೇರಿರ ಶರಣು ಚಂಗಪ್ಪ ಮತ್ತಿತರರು ಪಾಲ್ಗೊಂಡಿದ್ದರು.