ಭಾಗಮಂಡಲ, ಜೂ. 17: ಇಂದು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಜನರಿಗೆ ಬಹಳಷ್ಟು ಕಿರುಕುಳವನ್ನು ಅರಣ್ಯ ಇಲಾಖೆ ನೀಡುತ್ತಿದೆ. ಅಲ್ಲದೆ ಕಳೆದ ಬಾರಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯದಂಚಿನ ನಿವಾಸಿಗಳಿಗೆ ಪರಿಹಾರವೂ ದೊರಕದೇ ಇರುವದರಿಂದ ಆಗಸ್ಟ್ 15 ರಂದು ಮಡಿಕೇರಿಯ ಗಾಂಧಿ ಮೈದಾನದ ಗಾಂಧಿ ಪ್ರತಿಮೆ ಎದುರು ಬೆತ್ತಲೆ ಪ್ರತಿಭಟನೆ ಮಾಡಲಾಗುವದು ಎಂದು ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಹೇಳಿದರು.

ಇಂದು ಭಾಗಮಂಡಲದ ಗೌಡಸಮಾಜದ ಸಭಾಂಗಣದಲ್ಲಿ ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಮಂದಿಯ ಹಾಗೂ ಸಾರ್ವಜನಿಕರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಮಾತನಾಡಿದ ಕುಡಿಯರ ಮುತ್ತಪ್ಪ ಪ್ರಕೃತಿ ವಿಕೋಪದಿಂದ ನೊಂದವರಿಗೆ ಸಮರ್ಪಕ ಯೋಜನೆಗಳು ಹಾಗೂ ಸೂಕ್ತ ಪರಿಹಾರ ಲಭಿಸಿಲ್ಲ ಎಂದು ಆರೋಪಿಸಿದರು. ಅರಣ್ಯವನ್ನು ನಂಬಿ ಬದುಕುವ ಜನರಿಗೆ ಕಾನೂನುಗಳು ಇದ್ದರೂ ಜನರಿಗೆ ತಲಪಿಲ್ಲ. ಭಾಗಮಂಡಲ ಕ್ಷೇತ್ರದಲ್ಲಿ 11 ಕುಟುಂಬಗಳಿಗೆ ಅರಣ್ಯ ಇಲಾಖೆ ನೋಟೀಸು ಜಾರಿ ಮಾಡಿದ್ದು ಖಂಡನೀಯ. ಜನಸಾಮಾನ್ಯರ ಬದುಕನ್ನು ಅರಣ್ಯ ಇಲಾಖೆ ಕಸಿದುಕೊಳ್ಳುತ್ತಿದೆ ಎಂದು ದೂರಿದರು.

ಕಳೆದ ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆ ವತಿಯಿಂದ ಅರಣ್ಯದಂಚಿನ ಜನನಿಬಿಡ ಪ್ರದೇಶಗಳ ಡಿಜಿಟಲ್ ಸರ್ವೆ ಕಾರ್ಯ ನಡೆದಿದ್ದು ಅದನ್ನು ವಿರೋಧಿಸಿದ ಗ್ರಾಮಸ್ಥರು,ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಮಂದಿ ಹಾಗೂ ಸಾರ್ವಜನಿಕರು ಮುಂದಿನ ಹೋರಾಟಗಳ ರೂಪುರೇಷೆ ರಚಿಸಲು ಇಂದು ಭಾಗಮಂಡಲದಲ್ಲಿ ಮಿಟ್ಟು ರಂಜಿತ್ ಅಧ್ಯಕ್ಷತೆಯಲ್ಲಿ ಸಭೆ ಕರೆದಿದ್ದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಮಿಟ್ಟು ರಂಜಿತ್ ಮಾತನಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದಾಗಿ ನಾವು ಕಿರುಕುಳ ಅನುಭವಿಸುತ್ತಿದ್ದು, ಇಲ್ಲಿಂದ ಹೋರಾಟ ಆರಂಭವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವಿ ಕುಶಾಲಪ್ಪ ಮಾತನಾಡಿ ಕೊಡಗು ಜಿಲ್ಲೆ ಉಳಿಯಬೇಕಾದರೆ ನಮ್ಮಲ್ಲಿ ಹೋರಾಟದ ಸ್ವರೂಪವನ್ನು ಬದಲಾವಣೆ ಮಾಡಿಕೊಳ್ಳಬೇಕಿದೆ. ನಾವು ಹೋರಾಟ ಮಾಡದೇ ಇದ್ದರೆ ಕೊಡಗಿನಲ್ಲಿ ಕೈಗೊಳ್ಳಲಿರುವ ಮಾರಕ ಯೋಜನೆಗಳನ್ನು ಒಪ್ಪಿಕೊಂಡಂತೆ. ಏಳು ಮಂದಿ ಪರಿಸರವಾದಿಗಳ ವಿರುದ್ಧ ಜಿಲ್ಲೆಯ ಗ್ರಾಮೀಣ ಜನತೆ ಬುದ್ಧಿ ಕಲಿಸಲು ಸಾಧ್ಯವಿಲ್ಲವೇ ಎಂದರು. ಗ್ರಾಮ ಮಟ್ಟದಿಂದಲೇ ಹೋರಾಟ ಸಮಿತಿ ರಚಿಸಿ ಜಿಲ್ಲಾ ಮಟ್ಟದವರೆಗೆ ಬೆಳೆದು ಸಮಸ್ಯೆ ಪರಿಹರಿಸಿಕೊಳ್ಳುವದಾಗಿ ಹೇಳಿದರು.

ಕಾರುಗುಂದದ ಯುವ ಹೋರಾಟಗಾರ ಕೀಪಾಡಂಡ ಮಧು ಬೊಪಣ್ಣ ಪರಿಸರವಾದಿಗಳು ಕೊಡಗಿನ ಪರಿಸರ ಉಳಿಸುವ ಹೆಸರಿನಲ್ಲಿ ಬಹಳಷ್ಟು ದಂಧೆ ಮಾಡುತ್ತಾ ಅಭಿವೃದ್ಧಿಗೆ ತೊಡರುಗಾಲು ಹಾಕುತ್ತಿದ್ದಾರೆ. ಜನಪ್ರತಿನಿಧಿಗಳು ನಮ್ಮೊಂದಿಗೆ ಮುಖ್ಯವಾಗಿ ಸಹಕರಿಸಬೇಕಾಗಿದೆ. ಮರ ಬೇಕು, ಅರಣ್ಯ ಬೇಕು, ಜೊತೆಗೆ ನಮ್ಮ ಬದುಕೂ ಬೇಕು. ಸುಳ್ಳು ಸೃಷ್ಟಿಸಿ ಅಭಿವೃದ್ಧಿಗೆ ತಡೆಹಿಡಿಯುವವರ ಮೇಲೆ ಹೋರಾಟದ ಅನಿವಾರ್ಯತೆ ಇಂದು ನಮಗೆ ಬಂದಿದೆ.ಇಂದು ಅಧಿಕಾರಿಗಳ ಕಿರುಕುಳದಿಂದಾಗಿ ಜಿಲ್ಲೆಯ ಯುವಕರು ಪಟ್ಟಣ ಸೇರುವ ಪರಿಸ್ಥಿತಿ ಬಂದೊದಗಿದೆ. ಇದು ತಣ್ಣಿಮಾನಿ ಗ್ರಾಮದ ಜನರ ಸಮಸ್ಯೆ ಅಲ್ಲ.ಇಡೀ ಜಿಲ್ಲೆಯ ಸಮಸ್ಯೆ ಎಂದರು.

ಸೇವ್ ಕೊಡಗು ವೇದಿಕೆಯ ಸಂಚಾಲಕ ಬಿದ್ದಾಟಂಡ ದಿನೇಶ್ ಮಾತನಾಡಿ ಪರಿಸರವಾದಿಗಳ ಕುತಂತ್ರಕ್ಕೆ ಬಗ್ಗದೇ ತಮ್ಮ ಹೋರಾಟವನ್ನು ಒಗ್ಗಟ್ಟಿನಿಂದ ಮಾಡಬೇಕಿದೆ. ಈ ಹಿಂದೆ ಅನೇಕ ಹೋರಾಟ ಮಾಡಲಾಗಿದ್ದು ಜನಪ್ರತಿನಿಧಿಗಳು ಜಿಲ್ಲೆಯ ಜನರ ಸಭೆ ಕರೆದು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಾಗಿದೆ ಎಂದರು. ವಕೀಲ ಸುನಿಲ್ ಪತ್ರಾವೋ ಮಾತನಾಡಿ ಇಂದು ಜಿಲ್ಲೆಯಲ್ಲಿ ಒಂದೆಡೆ ಪರಿಸರ ಉಳಿಸುವ ವ್ಯವಸ್ಥೆಯಾದರೆ ಇನ್ನೊಂದೆಡೆ ಜಿಲ್ಲೆ ಜನತೆಯ ಬದುಕಿನೊಂದಿಗೆ ಮಾರಕ ಯೋಜನೆಗಳು ಬರಿತ್ತಿದ್ದು ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ನಮ್ಮನ್ನು ಆಳುವವರು ನಮ್ಮ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದರು.

ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ, ಉಪಾಧ್ಯಕೆ ಭವಾನಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್, ಗೌಡ ಸಮಾಜದ ಅಧ್ಯಕ್ಷ ಪಳಂಗಪ್ಪ, ಪ್ರಮುಖರಾದ ಕೋಡಿ ಪೊನ್ನಪ್ಪ, ನಾರಾಯಣಾಚಾರ್, ನಂಜುಂಡಪ್ಪ, ಕುದುಕುಳಿ ಭರತ್, ಅಮೆ ಬಾಲಕೃಷ್ಣ, ಪಿ.ಎಂ. ರಾಜೀವ್, ಕಾಳನ ರವಿ, ಗ್ರಾ.ಪಂ. ಸದಸ್ಯರಾದ ರಾಜುರೈ, ಪುರುಷೋತ್ತಮ, ಭಾಸ್ಕರ ಮತ್ತಿತರರು ಉಪಸ್ಥಿತರಿದ್ದರು.