*ಸಿದ್ದಾಪುರ, ಜೂ. 17: ಒಂಟಿ ಸಲಗವೊಂದು ಬೆಳೆಗಾರನ ಮೇಲೆ ಧಾಳಿ ಮಾಡಿದ್ದು, ಅದೃಷ್ಟವಶಾತ್ ಬೆಳೆಗಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು ಹಾಡಹಾಗಲೇ ನಡೆದಿದೆ.

ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲದಲ್ಲಿರುವ ಗ್ರೀನ್ ಫೀಲ್ಡ್ ತೋಟದಲ್ಲಿ ಕಾರ್ಮಿಕ ಸುಬ್ರಮಣಿ ಎಂಬಾತ ಕೆಲಸ ಮಾಡಿಕೊಂಡಿದ್ದ ಸಂದರ್ಭ ಒಂಟಿ ಸಲಗ ಎದುರಾಗಿದೆ. ಗಾಬರಿಯಿಂದ ಸುಬ್ರಮಣಿ ಬಿದ್ದು, ಎದ್ದು ಓಡಿ ಪಾರಾಗಿದ್ದಾರೆ. ಆನೆ ಇರುವಿಕೆಯನ್ನು ಗಮನಿಸಿದ ಇತರ ಕಾರ್ಮಿಕರು ಪಟಾಕಿ ಸಿಡಿಸಿದ್ದಾರೆ. ಪಟಾಕಿ ಸದ್ದಿಗೆ ಗಾಬರಿಗೊಂಡ ಸಲಗ ಅಲ್ಲಿಂದ ಕಾಲ್ಕಿತ್ತಿದೆ.

ಪಕ್ಕದಲ್ಲೇ ಅಂಚೆಮನೆ ಕುಟ್ಟಪ್ಪ (68) ಅವರ ತೋಟದಲ್ಲಿ ಕಾರ್ಮಿಕರು ಮರಕಸಿ ಮಾಡುತ್ತಿದ್ದು, ಕುಟ್ಟಪ್ಪ ಕೆಳಗಡೆ ಕೆಲಸ ನೋಡಿಕೊಂಡಿದ್ದರು. ದಿಢೀರನೆ ಓಡಿ ಬಂದ ಸಲಗ ಕುಟ್ಟಪ್ಪ ಅವರನ್ನು ಗುದ್ದಿ ಬೀಳಿಸಿ, ದೂರಕ್ಕೆ ಎಸೆದಿದೆ. ಈ ಸಂದರ್ಭದಲ್ಲಿ ಮರದ ಮೇಲಿದ್ದ ಕಾರ್ಮಿಕರು ಬೊಬ್ಬೆ ಹೊಡೆದು ಕೆಳಗಿಳಿದು ಬಂದಿದ್ದರಿಂದ ಸಲಗ ಅಲ್ಲಿಂದ ಕಾಲ್ಕಿತ್ತಿದೆ. ತಲೆ, ಕೈ, ಕಾಲುಗಳಿಗೆ ಗಾಯಾಗಳಾಗಿರುವ ಕುಟ್ಟಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅರಣ್ಯ ಇಲಾಖೆ ಪುಂಡಾನೆಗಳನ್ನು ಸೆರೆ ಹಿಡಿಯುವ ಬದಲಿಗೆ ಸಿಕ್ಕಿದ ಆನೆಯನ್ನು ಸೆರೆ ಹಿಡಿಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತೋಟದಲ್ಲಿ ಕೆಲಸದ ಸಮಯವಾಗಿದ್ದು, ಕಾಡಾನೆಗಳಿಂದಾಗಿ ಇದೀಗ ಕಾರ್ಮಿಕರು ಕೆಲಸಕ್ಕೆ ಬರಲು ಭಯ ಪಡುತ್ತಿರುವದರಿಂದ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ.

- ಸುಧಿ