ಗೋಣಿಕೊಪ್ಪಲು, ಜೂ.17: ಬಾಳೆಲೆಯಲ್ಲಿ ಶಿಕ್ಷಕಿ ಆಶಾ ಕಾವೇರಮ್ಮ ಅವರನ್ನು ಹತ್ಯೆಗೈದ ಸಂದರ್ಭ ರಕ್ಷಣೆಗೆ ಧಾವಿಸಿ ಕೈ, ಕಾಲುಗಳಿಗೆ ಗುಂಡೇಟು ತಗುಲಿ ಗಾಯಾಳು ಗಳಾಗಿದ್ದ ಬಾಳೆಲೆ ಪ.ಪೂ.ಕಾಲೇಜು ವಿದ್ಯಾರ್ಥಿ ದಿನೇಶ್ ಹಾಗೂ ಕಾರ್ಮಿಕ ಪೆಮ್ಮುವಿಗೆ ತಾ.24 ರಂದು ಶಸ್ತ್ರ ಚಿಕಿತ್ಸೆ ಮಾಡಿ ಕೆಲವು ಗುಂಡು (ಚಿಲ್ಲು) ಗಳನ್ನು ಹೊರತೆಗೆಯಲಾಗು ವದು ಎಂದು ಜಿಲ್ಲಾ ಆರೋಗ್ಯಾಧಿ ಕಾರಿ ಡಾ.ಮೋಹನ್ ತಿಳಿಸಿದ್ದಾರೆ.
ಗೋಣಿಕೊಪ್ಪಲು ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ ಗಾಯಾಳುಗಳನ್ನು ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ.ಯತಿರಾಜ್ ಅವರು ಇಂದು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು.
ಮಡಿಕೇರಿ ಸರ್ಕಾರಿ ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ.ಕಾರ್ಯಪ್ಪ ಅವರು ಪರಿಶೀಲಿಸಿ ನೋವು ನಿವಾರಕ ಔಷಧಿ ಹಾಗೂ ಗಾಯ ವಾಸಿಯಾಗಲು ಕೆಲವು ಮಾತ್ರೆಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.
ಕೆಲವು ಗುಂಡುಗಳು ಮಾಂಸ ಖಂಡಗಳ ಒಳಹೊಕ್ಕಿರುವದನ್ನು ಹಾಗೇ ಬಿಡಲಾಗುವದು ಮತ್ತು ಊತ ವಾಸಿಯಾದ ನಂತರವೇ ಶಸ್ತ್ರ ಚಿಕಿತ್ಸೆ ಸಾಧ್ಯ ಎಂದು ವೈದ್ಯರು ಗಾಯಾಳು ಗಳಿಗೆ ಮನವರಿಕೆ ಮಾಡಿದ್ದಾರೆ.
ಈ ನಡುವೆ ತಾಲೂಕು ವೈದ್ಯಾಧಿಕಾರಿ ಡಾ.ಯತಿರಾಜ್ ಅವರು ಗಾಯಾಳುಗಳನ್ನು ಮತ್ತೊಮ್ಮೆ ತಾ.18 ರಂದು (ಇಂದು) ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆ ಯಲ್ಲಿ ಪರಿಶೀಲನೆ ಮಾಡುವದಾಗಿ ತಿಳಿಸಿದ್ದಾರೆ.
ದಿನೇಶ್ ಹಾಗೂ ಪೆಮ್ಮು ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದು ಗಾಯಾಳುಗಳಿಗೆ ಆರ್ಥಿಕ ನೆರವು ಕಲ್ಪಿಸಲು ಬಾಳೆಲೆ ಗ್ರಾ.ಪಂ.ಮಾಜಿ ಅಧ್ಯಕ್ಷ ಅದೇಂಗಡ ವಿನು ಉತ್ತಪ್ಪ ಹಾಗೂ ಜಿ.ಪಂ.ಸದಸ್ಯ ಬಿ.ಎನ್.ಪ್ರಥ್ಯು ಪ್ರಯತ್ನಿಸುವದಾಗಿ ತಿಳಿಸಿದ್ದಾರೆ.