ಮಡಿಕೇರಿ, ಜೂ. 17: ಅಕ್ರಮ ಮರ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಕಾರ್ಯಾಚರಣೆ ನಡೆಸುವದರೊಂದಿಗೆ; ನಿನ್ನೆ ಪೊಲೀಸರು ಬಂಧಿಸಿರುವ ಪ್ರಮುಖ ಆರೋಪಿ ಕಳ್ಳಿಚಂಡ ನೋಬನ್‍ನನ್ನು ಇಂದು ಪೊನ್ನಂಪೇಟೆ ನ್ಯಾಯಾಲಯವು ಮೂರು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇತರ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಪೊಲೀಸರು ವೀರಾಜಪೇಟೆ ಉಪ ವಿಭಾಗದ ಅರಣ್ಯಾಧಿಕಾರಿ ಕ್ರಿಸ್ತರಾಜ್ ಸಮ್ಮುಖ ನೋಬನ್ ನಿವಾಸಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ನೇತೃತ್ವದಲ್ಲಿ ದಾಳಿ ನಡೆಸಿ ಮಾಲುಗಳನ್ನು ವಶಕ್ಕೆ ಪಡೆದಿದ್ದರು. ಆರೋಪಿ ಮೇಲೆ ಬಹಳಷ್ಟು ಆರೋಪಗಳಿರುವ ಕಾರಣ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಎಸ್‍ಪಿ ಸೂಚ್ಯವಾಗಿ ತಿಳಿಸಿದ್ದಾರೆ. ಆರೋಪಿಗಳನ್ನು ಪೊನ್ನಂಪೇಟೆಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯದ ನಿರ್ದೇಶನ ಮೇರೆಗೆ ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ. ನಿನ್ನೆ ಎಸ್‍ಪಿ ನೇತೃತ್ವದಲ್ಲಿ ಚನ್ನಂಗೊಲ್ಲಿಯ ದಾವೂದ್, ನಾಲ್ಕೇರಿಯ ರಾಜೇಂದ್ರ, ಕೆ. ಬಾಡಗ ನಿವಾಸಿ ಅಯ್ಯಪ್ಪ ಎಂಬವರ ಸಹಿತ ಪ್ರಮುಖ ಆರೋಪಿಯು ಭಾರೀ ಬೆಲೆಬಾಳುವ ಮರಗಳ ಸಹಿತ ಲಾರಿ ಮತ್ತಿತರ ವಾಹನಗಳೊಂದಿಗೆ ಸೆರೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಸಂಬಂಧ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.