ಮಡಿಕೇರಿ, ಜೂ. 17: ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನ ಅಭಿವೃದ್ಧಿ ಹೆಸರಲ್ಲಿ 800ಕ್ಕೂ ಅಧಿಕ ಮರಗಳ ಮಾರಣಹೋಮ ಪ್ರಕರಣ ಸಂಬಂಧ; ಇದೀಗ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಖಾಸಗಿ ಸಂಸ್ಥೆಯ ವ್ಯಕ್ತಿ ವಿರುದ್ಧ ಎರಡು ಪ್ರತ್ಯೇಕ ಮೊಕದ್ದಮೆಗಳನ್ನು ಅರಣ್ಯ ಇಲಾಖಾಧಿಕಾರಿಗಳು ದಾಖಲಿಸಿ ದ್ದಾರೆ. ತಾ. 26.4.2016 ರಂದು ಕರ್ನಾಟಕ ಗೃಹ ನಿರ್ಮಾಣ ಮಂಡಳಿಯು; ಬೆಂಗಳೂರಿನ ಖಾಸಗಿ ಅಭಿವೃದ್ಧಿ ಸಂಸ್ಥೆ ‘ ಮೆ|| ಪ್ರತಿಪಾಟಿ ಪ್ರೊಜೆಕ್ಟ್ ಲಿ’ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ 101 ಎಕರೆ 71.5 ಸೆಂಟ್ ಜಾಗವನ್ನು ಅಂದಿನ ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ ಗೊಳಿಸಿ ಆದೇಶ ಹೊರಡಿಸಿದ್ದಾಗಿದೆ.ಬೇರೆ ಬೇರೆ ಸರ್ವೆ ನಂಬರ್ ಗಳಿಂದ ಕೂಡಿರುವ ಸಾಗುಬಾಣೆಯ ಈ ಜಾಗದಲ್ಲಿ ವಿಶ್ವ ಪರಿಸರ ದಿನದಂದು ಅರಣ್ಯ ಉಪಸಂರಕ್ಷಣಾ ಧಿಕಾರಿಯ ಅನುಮತಿಯೊಂದಿಗೆ 800ಕ್ಕೂ ಅಧಿಕ ಮರಗಳನ್ನು ಕಡಿದಿರುವ ಪ್ರಕರಣ ಸಂಬಂಧ ‘ಶಕ್ತಿ’ ಬೆಳಕು ಚೆಲ್ಲಿತ್ತು. ಅಲ್ಲದೆ ಇನ್ನೆರಡು ಪ್ರತ್ಯೇಕ ಸರ್ವೆ ಸಂಖ್ಯೆ 31/3 ಹಾಗೂ 33/1ರಲ್ಲಿ 73 ಮರಗಳನ್ನು ಅಕ್ರಮವಾಗಿ ಕಡಿದಿರುವದು ತನಿಖೆ ಸಂದರ್ಭ ಬಹಿರಂಗಗೊಂಡಿದೆ. ಆ ಮೇರೆಗೆ ಅರಣ್ಯಾಧಿಕಾರಿಗಳು ಇದೀಗ ಸರಕಾರದ ನಿರ್ದೇಶನದಂತೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಸಹಾಯಕ ಇಂಜಿನಿಯರ್ ಮತ್ತು ಖಾಸಗಿ ಸಂಸ್ಥೆಯ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿ ಮತ್ತು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಅಲ್ಲದೆ ಸರ್ವೆ ಸಂಖ್ಯೆ 31/3ರಲ್ಲಿ 39 ಮರಗಳು ಹಾಗೂ ಸ. ಸಂಖ್ಯೆ 33/1ರಲ್ಲಿ 34 ಮರಗಳನ್ನು ಕಡಿದಿದ್ದು, ಇಲ್ಲಿ ಒಂದು
(ಮೊದಲ ಪುಟದಿಂದ) ಬೀಟಿ ಮರ ಸೇರಿದಂತೆ ಹಲಸು ಇನ್ನಿತರ ಮರಗಳನ್ನು ಅಕ್ರಮವಾಗಿ ಕಡಿದಿರುವದು ಕಂಡು ಬಂದಿದೆ. ಈ ಎಲ್ಲಾ ಮರಗಳನ್ನು ಅರಣ್ಯ ಇಲಾಖೆ ಮುಟ್ಟುಗೋಲು ಹಾಕಿಕೊಂಡು ಸಂಬಂಧಿಸಿದ ಜಾಗದಿಂದ ಇಲಾಖೆಯ ನಾಟಾ ಸಂಗ್ರಹಾಲಯಕ್ಕೆ ಸ್ಥಳಾಂತರಗೊಳಿಸಿದೆ. ಕೊಡಗಿನಲ್ಲಿ ಖಾಸಗಿ ಜಮೀನುಗಳಲ್ಲಿ ಸ್ವಂತ ಉಪಯೋಗಕ್ಕೆ ಮಾಲೀಕರು ಅಥವಾ ಬೆಳೆಗಾರರು ಮರ ಕಡಿಯಲು ಆಕ್ಷೇಪಿಸುವ ಮಂದಿ ಇದೀಗ ಕೆ. ನಿಡುಗಣೆ ಪ್ರಕರಣದಿಂದ ತೀವ್ರ ಮುಜುಗರಕ್ಕೆ ಸಿಲುಕಿಕೊಂಡಿದೆ. ಇನ್ನೊಂದೆಡೆ ನಿನ್ನೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಕುಟ್ಟ ವ್ಯಾಪ್ತಿಯಲ್ಲಿ ಅಕ್ರಮ ಮರ ದಂಧೆ ಪ್ರಕರಣ ಬಯಲಿಗೆಳೆದಿರುವದು ಕೂಡ ಸಂಬಂಧಿಸಿದ ಇಲಾಖಾಧಿಕಾರಿಗಳಲ್ಲಿ ಇರಿಸು ಮುರುಸು ಉಂಟು ಮಾಡಿದಂತಿದೆ.