ಮಡಿಕೇರಿ, ಜೂ. 17: ಇಂದಿನಿಂದ ಆರಂಭಗೊಂಡಿರುವ ಲೋಕಸಭಾ ಮುಂಗಾರು ಅಧಿವೇಶನಕ್ಕೆ ಕೊಡಗು - ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರು ಕೊಡವರ ಪೋಷಾಕು ಧರಿಸಿ ಪ್ರವೇಶ ಮಾಡಿದರು.ಕೊಡವರ ಸಾಂಪ್ರದಾಯಿಕ ಕುಪ್ಪಸ ದಟ್ಟಿ ಧರಿಸಿ ಸಂಸತ್ ಪ್ರವೇಶಿಸಿದ ಪ್ರತಾಪ್ ಸಿಂಹ ಎಲ್ಲರ ಗಮನ ಸೆಳೆದರು. ಇಂತಹ ವಿಶೇಷ ಪೋಷಾಕು ದೇಶದಲ್ಲಿ ಇದೆಯಾ ಎಂದು ಹಲವಾರು ಸಂಸದರು ಸಿಂಹ ಅವರಲ್ಲಿ ಕೇಳುತ್ತಾ ಪ್ರಶಂಸೆ ವ್ಯಕ್ತಪಡಿಸಿದರಲ್ಲದೆ, ಕೆಲವರು ಸಿಂಹ ಅವರೊಂದಿಗೆ ಫೋಟೋ ತೆಗೆಸಿಕೊಂಡರೆಂದು ಸಿಂಹ ‘ಶಕ್ತಿ’ಗೆ ತಿಳಿಸಿದರು. ನಂತರ ಪ್ರಮಾಣ ವಚನ ಸ್ವೀಕಾರ ಸಂದರ್ಭ ಕನ್ನಡ ಭಾಷೆಯಲ್ಲೇ ಸ್ವೀಕರಿಸಿದರು.‘ಕಾನೂನು ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನಕ್ಕೆ ಸತ್ಯ, ಶ್ರದ್ಧೆಯನ್ನು ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು ಮತ್ತು ನಾನು ಈಗ ಕೈಗೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಎಂದು ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ಎದುರಾಯಿತು ಇಕ್ಕಟ್ಟು! ಕೊಡವರ ಸಾಂಪ್ರದಾಯಿಕ ಉಡುಗೆ ‘ಕುಪ್ಯಚ್ಯಾಲೆ’ ಧರಿಸೋ ವೇಳೆ, ‘ಪೀಚೆಕತ್ತಿ’ ಅನ್ನೋ ಕೊಡವ ಪಾರಂಪರಿಕ ಆಯುಧವನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುವದು ವಾಡಿಕೆ. ಅದೇ ಮೇರೆಗೆ (ಮೊದಲ ಪುಟದಿಂದ) ಪ್ರತಾಪ್ ಸಿಂಹ ಕೂಡಾ ಪೀಚೆ ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದರು. ‘ಪೀಚೆಕತ್ತಿ’ ಅನ್ನೋದು ಚೂರಿಯ ರೀತಿಯಲ್ಲಿರುವ ಕತ್ತಿ, ಬೆಳ್ಳಿಯ ಕವಚದೊಳಗೆ ಹುದುಗಿಸಿ ಅದನ್ನು ಸೊಂಟಕ್ಕೆ ಸಿಕ್ಕಿಸಕೊಳ್ಳಲಾಗುತ್ತದೆ. ಪ್ರತಾಪ್ ಸಿಂಹರಿಗೆ ಇಕ್ಕಟ್ಟು ಎದುರಾಗಿದ್ದೇ ಇಲ್ಲಿ, ಸಂಸತ್ ಸಭಾಂಗಣದ ಒಳಗೆ ಯಾವದೇ ರೀತಿಯ ಆಯುಧವನ್ನು ಕೊಂಡೊಯ್ಯು ವಂತಿಲ್ಲ. ಹಾಗೇನೇ ಪೀಚೆಕತ್ತಿಯ ಚೂರಿಯನ್ನು ಸೊಂಟದಲ್ಲಿ ಇರಿಸಿಕೊಂಡು ಒಳ ಹೋಗೋದು ಸಾಧ್ಯವಿರಲಿಲ್ಲ. ಹೀಗಾಗಿ ಅದನ್ನು ಸೊಂಟದಿಂದ ಅನಿವಾರ್ಯ ವಾಗಿ ತೆಗೆದಿರಿಸಿ, ಹಾಗೆ ಹಿಡಿದುಕೊಂಡು ಸಂಸತ್‍ನ ಒಳ ಪ್ರವೇಶಿಸಬೇಕಾಯಿತು.