ಕುಶಾಲನಗರ, ಜೂ. 17: ತೆಲುಗು ಜಂಗಮ ಸಮಾಜಕ್ಕೆ ಸರ್ಕಾರ ಸೂಕ್ತ ರಾಜಕೀಯ ಸ್ಥಾನ ಮಾನ ನೀಡುವಂತಾಗಬೇಕೆಂದು ಕರ್ನಾಟಕ ರಾಜ್ಯ ತೆಲುಗು ಜಂಗಮ ಸಮಾಜದ ಅಧ್ಯಕ್ಷ ನಾಗರಾಜಪ್ಪ ಸಾರಕ್ಕಿ ಒತ್ತಾಯಿಸಿದರು.
ಕುಶಾಲನಗರದಲ್ಲಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಸಮಾಜದ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ತೆಲುಗು ಜಂಗಮ ಜಾತಿಯ ಜನರು ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಸಂಖ್ಯೆ ಯಲ್ಲಿದ್ದು, ತಹಶೀಲ್ದಾರರ ಕಚೇರಿ ಗಳಲ್ಲಿ ಜಾತಿ ದೃಢೀಕರಣ ಪತ್ರಗಳನ್ನು ಪಡೆಯಲು ಅಧಿಕಾರಿಗಳು ಸತಾಯಿಸುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಇದೇ ಪರಿಸ್ಥಿತಿ ಮುಂದುವರಿದರೆ ಸರ್ಕಾರದ ವಿರುದ್ಧ ಸಮಾಜದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಸಮಾಜದ ಉಪಾಧ್ಯಕ್ಷ ಚಂದ್ರಬಾಬು ಮಾತನಾಡಿ ತೆಲುಗು ಜಂಗಮ ಜಾತಿಯ ಜನರು ಒಗ್ಗಟ್ಟು ಬೆಳೆಸಿಕೊಳ್ಳಬೇಕು ಎಂದರು.
ಸಮಾಜದ ಕಾರ್ಯದರ್ಶಿ ಶಿವರಾಮು, ಖಜಾಂಚಿ ಪ್ರಕಾಶ್, ನಿರ್ದೇಶಕರುಗಳು ಇದ್ದರು.