ಮಡಿಕೇರಿ, ಜೂ. 17: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಾಗುತ್ತಿರುವ ಹಲ್ಲೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿಯೂ ಬೆಂಬಲ ವ್ಯಕ್ತಗೊಂಡಿದೆ. ತುರ್ತು ಚಿಕಿತ್ಸೆಯನ್ನು ಹೊರತು ಪಡಿಸಿ ಜಿಲ್ಲೆಯ ಖಾಸಗಿ ವೈದ್ಯರುಗಳು ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟಿಸಿದರು. ಇದರಿಂದಾಗಿ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಿದ್ದ ರೋಗಿಗಳು ಸಂಕಷ್ಟ ಅನುಭವಿಸು ವಂತಾಯಿತು.ಜಿಲ್ಲಾ ಕೇಂದ್ರ ಮಡಿಕೇರಿ ಯಲ್ಲಿರುವ ಖಾಸಗಿ ಆಸ್ಪತ್ರೆಗಳು ತೆರೆದಿದ್ದವಾದರೂ ವೈದ್ಯರುಗಳು ಕಾರ್ಯನಿರ್ವಹಿಸಲಿಲ್ಲ. ಕೇವಲ ತುರ್ತು ಚಿಕಿತ್ಸೆ ಮಾತ್ರ ನೀಡಲಾಗುತ್ತಿತ್ತು. ಇಲ್ಲಿನ ದಾಸವಾಳ ರಸ್ತೆಯಲ್ಲಿರುವ ವೈವಸ್ ಆಸ್ಪತ್ರೆಯ ಬಾಗಿಲಿನಲ್ಲೇ ಪ್ರತಿಭಟನೆ ಹಿನ್ನೆಲೆ ರಜೆ ಇರುವ ಬಗ್ಗೆ ಮಾಹಿತಿ ಫಲಕ ಅಳವಡಿಸಲಾಗಿತ್ತು. ಸಿಬ್ಬಂದಿಗಳು ಕರ್ತವ್ಯದಲ್ಲಿದ್ದರು. ಒಳರೋಗಿ ಗಳಾಗಿ ದಾಖಲಾಗಿರು ವವರನ್ನು ಪರೀಕ್ಷಿಸಿ, ಔಷಧಿ ನೀಡುವ ಬಗ್ಗೆ ವೈದ್ಯರ ಸಲಹೆಯಂತೆ ದಾದಿಯರು ಔಷಧಿ ಹಾಗೂ ಸುಶ್ರೂಶೆ ನೀಡುತ್ತಿದ್ದುದು ಕಂಡು ಬಂದಿತು. ಆರ್. ಆರ್. ಆಸ್ಪತ್ರೆಯಲ್ಲಿಯೂ ಒಳರೋಗಿಗಳ ಪರೀಕ್ಷೆ, ಚಿಕಿತ್ಸೆ ನೀಡಲಾಗುತ್ತಿತ್ತು. ಹೊರ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲಾಗುತಿತ್ತು. ರವಿ ಅರ್ಥೊಪೇಡಿಕ್ ಸೆಂಟರ್‍ನ ಬಾಗಿಲಲ್ಲೂ ಕೂಡ ‘ಎಮರ್‍ಜೆನ್ಸಿ’ ಎಂಬ ಫಲಕ ಅಳವಡಿಸಿ ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬಹುತೇಕ ಖಾಸಗಿ ಕ್ಲಿನಿಕ್‍ಗಳು ತೆರೆಯಲೇ ಇಲ್ಲ; ಕೆಲವೊಂದು ಕ್ಲಿನಿಕ್‍ಗಳ ರೋಗಿಗಳ ಕೋರಿಕೆ ಮೇರೆಗೆ ತುರ್ತು ಚಿಕಿತ್ಸೆ ಮಾತ್ರ ನೀಡಲಾಯಿತು.ಸರಕಾರಿ ಆಸ್ಪತ್ರೆ ಫುಲ್ ಇತ್ತ ಖಾಸಗಿ ವೈದ್ಯರ ಪ್ರತಿಭಟನೆಯಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಾಗದ ಹಿನ್ನೆಲೆಯಲ್ಲಿ ಎಲ್ಲರೂ ಸರಕಾರಿ ಆಸ್ಪತ್ರೆಗಳನ್ನೇ ಅವಲಂಬಿಸ ಬೇಕಾಯಿತು. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಕಂಡು ಬಂದರು. ಎಲ್ಲ ವಿಭಾಗಗಳ ವೈದ್ಯರುಗಳು ಇಂದು ಹಾಜರಿದ್ದು, ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದುದು ಕಂಡು ಬಂದಿತು.

ಸೋಮವಾರಪೇಟೆ: ಪಶ್ಚಿಮ ಬಂಗಾಳದಲ್ಲಿ ನಡೆದ ವೈದ್ಯರ ಮೇಲಿನ

(ಮೊದಲ ಪುಟದಿಂದ) ಹಲ್ಲೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಕರೆಗೆ ಸೋಮವಾರ ಪೇಟೆಯ ಖಾಸಗಿ ವೈದ್ಯರು ಬೆಂಬಲ ಸೂಚಿಸಿದ್ದು, ಕಪ್ಪು ಪಟ್ಟಿ ಧರಿಸಿ ತುರ್ತು ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಖಾಸಗಿ ಕ್ಲಿನಿಕ್‍ಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಲು ಮುಂದಾಗಿದ್ದರೂ ಸಹ ಸಂತೆ ದಿನವಾದ ಸೋಮವಾರದಂದು ಗ್ರಾಮೀಣ ಭಾಗದಿಂದ ಹೆಚ್ಚು ಮಂದಿ ಅನಾರೋಗ್ಯ ಪೀಡಿತರು ಆಸ್ಪತ್ರೆ, ಕ್ಲಿನಿಕ್‍ಗಳಿಗೆ ಆಗಮಿಸುವ ಹಿನ್ನೆಲೆ ಕಪ್ಪು ಪಟ್ಟಿ ಧರಿಸಿ ಸೇವೆ ಒದಗಿಸುತ್ತಿದ್ದೇವೆ ಎಂದು ಹಿರಿಯ ವೈದ್ಯ ಡಾ. ಪುಟ್ಟಣ್ಣ ಹೇಳಿದರು.

ಖಾಸಗಿ ವೈದ್ಯರುಗಳಿಗೆ ಭದ್ರತೆ ಇಲ್ಲದಂತಾಗಿದೆ. ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಅಕ್ಷಮ್ಯ ಅಪರಾಧ. ಇಂತಹ ಕೃತ್ಯಗಳಿಂದ ವೈದ್ಯರು ಭಯದಲ್ಲಿಯೇ ಸೇವೆ ನೀಡುವಂತಾಗಿದೆ. ಆಗಾಗ್ಗೆ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಪಶ್ಚಿಮ ಬಂಗಾಳ ದಲ್ಲಂತೂ ಪೊಲೀಸರ ಎದುರಲ್ಲೇ ವೈದ್ಯರ ಮೇಲೆ ಹಲ್ಲೆ ನಡೆದಿರುವದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ನಡೆಯದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹಲ್ಲೆ ಮಾಡಿದವರನ್ನು ಜಾಮೀನು ರಹಿತವಾಗಿ ಬಂಧಿಸಿ ಕನಿಷ್ಟ 7 ವರ್ಷ ಶಿಕ್ಷೆಗೆ ಒಳಪಡಿಸಬೇಕು. ಹಲ್ಲೆಕೋರರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾನಿರತ ವೈದ್ಯರುಗಳು ಆಗ್ರಹಿಸಿದರು. ಈ ಸಂದರ್ಭ ವೈದ್ಯರುಗಳಾದ ಮನೋರಮ, ಶರ್ಮಿಳಾ ಫೆರ್ನಾಂಡೀಸ್, ವಸಂತ್, ವೆಂಕಟೇಶ್, ಜಯರಾಜ್, ಬಿ.ಪಿ. ಶೆಟ್ಟಿ ಅವರುಗಳು ಉಪಸ್ಥಿತರಿದ್ದರು.

ವೀರಾಜಪೇಟೆ : ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೇಶ ವ್ಯಾಪಿ ನಡೆಯುತ್ತಿರುವ ವೈದ್ಯರ ಮುಷ್ಕರದ ಕಾರಣ ವೀರಾಜಪೇಟೆಯಲ್ಲಿಯೂ ಖಾಸಗಿ ಆಸ್ವತ್ರೆಗಳು ಬಂದ್ ಆಗಿದ್ದವು. ಚಿಕಿತ್ಸೆಗೆಂದು ಬಂದ ರೋಗಿಗಳಿಗೆ ಸೇವೆ ಇಲ್ಲದ ಕಾರಣ ಹಿಂತಿರುಗಿದರು. ವೀರಾಜಪೇಟೆಯಲ್ಲಿ 6 ಖಾಸಗಿ ಆಸ್ವತ್ರೆಗಳಿದ್ದು ಅಲ್ಲಿ ಇಂದು ಮುಷ್ಕರಕ್ಕೆ ಬೆಂಬಲ ನೀಡಿದ ವೈದ್ಯರು ರೋಗಿಗಳ ಭೇಟಿಗೆ ಲಭ್ಯವಾಗಲಿಲ್ಲ.

ಆದರೆ ಸರಕಾರಿ ಆಸ್ವತ್ರೆಯಲ್ಲಿ ರೋಗಿಗಳಿಗೆ ಸೇವೆ ಎಂದಿನಂತೆ ಇದ್ದು ಅಗತ್ಯ ಉಳ್ಳ ರೋಗಿಗಳು ಅಲ್ಲಿ ಚಿಕಿತ್ಸೆ ಪಡೆದರು. ಖಾಸಗಿ ಆಸ್ವತ್ರೆ ಇಲ್ಲದ ಕಾರಣ ಸರಕಾರಿ ಆಸ್ವತ್ರೆಯಲ್ಲಿ ಸ್ವಲ್ಪ ಮಟ್ಟಿಗೆ ರೋಗಿಗಳ ಸಂಖ್ಯೆ ಹೆಚ್ಚಿತ್ತು. ಈ ಕುರಿತು ಮಾತನಾಡಿದ ಸರಕಾರಿ ಆಸ್ವತ್ರೆಯ ವೈದ್ಯಾಧಿಕಾರಿ ಡಾ ವಿಶ್ವನಾಥ್ ಸಿಂಪಿ ನಾವು ಮುಷ್ಕರದಲ್ಲಿ ಭಾಗವಹಿಸುತ್ತಿಲ್ಲ, ಆದರೆ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಕಪ್ಪು ಪಟ್ಟಿ ಧರಿಸಿ ಎಂದಿನಂತೆ ಕಾರ್ಯನಿರ್ವಹಿಸುತ್ತಿರುವದಾಗಿ ತಿಳಿಸಿದರು.

*ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರು ಪಶ್ಚಿಮ ಬಂಗಾಳದಲ್ಲಿ ನಡೆದ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿದರು. ತುರ್ತು ಚಿಕಿತ್ಸಾ ವಿಭಾಗದಲ್ಲಿ ಮಾತ್ರ ಕಾರ್ಯ ನಿರ್ವಹಿಸಿದರು.