ಮಡಿಕೇರಿ, ಜೂ. 17: ಐದನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ವ್ಯವಸ್ಥಿತವಾಗಿ ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ವರ್ಷ ನಡೆಸಿದ ರೀತಿಯಲ್ಲಿ ಯಾವದಾದರೂ ಮಾರ್ಪಾಡು, ಬದಲಾವಣೆಗಳು ಇದ್ದಲ್ಲಿ ಸರಿಪಡಿಸಿಕೊಂಡು ಅಂತರರಾಷ್ಟ್ರೀಯ ಯೋಗ ದಿನವನ್ನು ಯಶಸ್ವಿಗೊಳಿಸಲು ತಿಳಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಹೆಚ್. ರಾಮಚಂದ್ರ ಮಾಹಿತಿ ನೀಡಿ, ನಗರದ ಮೈತ್ರಿ ಹಾಲ್‍ನಲ್ಲಿ ಯೋಗ ದಿನಾಚರಣೆ ಆಚರಿಸಲು ಉದ್ದೇಶಿಸಿದ್ದು, ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಾ. 18 ರಂದು ಸಂಜೆ 6 ರಿಂದ 7 ಗಂಟೆಯವರೆಗೆ ಯೋಗ ಜಾಥಾ ಹಮ್ಮಿಕೊಂಡಿದ್ದು, ಜಾಥಾವು ಕೋಟೆ ಆವರಣದಿಂದ ಪ್ರಾರಂಭಗೊಂಡು ನಗರದ ಬಸ್ ನಿಲ್ದಾಣದವರೆಗೆ ನಡೆಯಲಿದೆ. ಈ ಬಾರಿಯ ಯೋಗ ದಿನಾಚರಣೆಯ ಘೋಷ ವಾಕ್ಯ ಹೃದಯಕ್ಕಾಗಿ ಯೋಗ ಎಂದು ಮಾಹಿತಿ ನೀಡಿದರು.

ತಾ. 21 ರಂದು ಬೆಳಿಗ್ಗೆ 6.30 ಕ್ಕೆ ಮೈತ್ರಿ ಹಾಲ್‍ನಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸರ್ಕಾರ ನಿಗದಿಪಡಿಸಿದ 22 ಯೋಗಾಸನಗಳು ಹಾಗೂ 4 ಪ್ರಾಣಾಯಾಮ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಂಬಂಧ ಹಲವು ಸಲಹೆ ನೀಡಿದರು. ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಡಿಹೆಚ್‍ಒ ಡಾ. ಕೆ. ಮೋಹನ್, ಆಯುಷ್ ವೈದ್ಯೆ ಡಾ. ಶುಭ, ಅಶ್ವಿನಿ ಆಸ್ಪತ್ರೆಯ ವೈದ್ಯಾಧಿಕಾರಿ ಕುಲಕರ್ಣಿ, ಭಾರತೀಯ ವಿದ್ಯಾಭವನದ ಮಹೇಶ್‍ಕುಮಾರ್, ಎನ್‍ಸಿಸಿ ಕಮಾಂಡೆಂಟ್ ಅಧಿಕಾರಿ ಇತರರು ಇದ್ದರು.