ಆಲೂರು-ಸಿದ್ದಾಪುರ, ಜೂ. 16: ಶನಿವಾರಸಂತೆ ಹೋಬಳಿಯಲ್ಲಿ ಈ ವರ್ಷ ಮುಂಗಾರು ಮಳೆ ವಾಡಿಕೆಯಂತೆ ಆಗದ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಕೃಷಿಕ ರೈತರ ಕೃಷಿ ಚಟುವಟಿಕೆಗೆ ಅಡಚಣೆಯಾಗಿದೆ. ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆಯಂತೆ ಮಾರ್ಚ್ ತಿಂಗಳ ಕೊನೆ ವಾರದಲ್ಲಿ ಮುಂಗಾರು ಪ್ರವೇಶವಾಗುತಿತ್ತು, ಜೂನ್ ಒಂದನೆ ವಾರದಲ್ಲಿ ಸಾಕಷ್ಟು ಮುಂಗಾರು ಮಳೆ ಆಗುತ್ತಿದ್ದ ಹಿನ್ನಲೆಯಲ್ಲಿ ರೈತರು ಹೊಲ-ಗದ್ದೆಗಳನ್ನು ಉಳುಮೆ ಮಾಡಿ ಬೀಜ ಬಿತ್ತನೆ ಕಾರ್ಯಚಟುವಟಿಕೆಯನ್ನು ಮುಗಿಸುತ್ತಿದ್ದರು. ಶನಿವಾರಸಂತೆ ಹೋಬಳಿಯ ದುಂಡಳ್ಳಿ, ಹಂಡ್ಲಿ, ನಿಡ್ತ, ಗೌಡಳ್ಳಿ, ನಿಡ್ತ ಮತ್ತು ಆಲೂರುಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳಲ್ಲಿ ಹೆಚ್ಚಾಗಿ ಕೃಷಿ ಗದ್ದೆ, ಹೊಲ ಮತ್ತು ಕಾಫಿ ತೋಟಗಳನ್ನು ಹೊಂದಿದೆ. ಗದ್ದೆಗಳಲ್ಲಿ ಭತ್ತ, ಶುಂಠಿ, ಹೊಲಗಳಲ್ಲಿ ಶುಂಠಿ, ಜೋಳ ಮುಂತಾದ ಅಲ್ಪಾವಧಿಯ ಬೆಳೆಗಳನ್ನು ಬೆಳೆಯುತ್ತಾರೆ. ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟಾರೆ ಕೃಷಿ ಭೂಮಿಗಳ ಪೈಕಿ ಶೇ. 60 ರಷ್ಟು ಕಾಫಿ ತೋಟಗಳಿದ್ದು ಉಳಿದ ಶೇ. 40 ರಷ್ಟು ಗದ್ದೆ, ಹೊಲಗಳಿದ್ದು, ಈ ನಿಟ್ಟಿನಲ್ಲಿ ಈ ಭಾಗದ ರೈತರು ಮಳೆಯನ್ನು ನಂಬಿ ಕೃಷಿ ಮಾಡುವದ್ದರಿಂದ ಮಾರ್ಚ್ ತಿಂಗಳಲ್ಲೆ ಗದ್ದೆ, ಹೊಲಗಳನ್ನು ಉಳುಮೆ ಮಾಡಿ ಬಿತ್ತನೆ ಚಟುವಟಿಕೆಗಾಗಿ ಸಿದ್ದತೆ ಮಾಡಿಕೊಂಡಿರುವದು ವಾಡಿಕೆ.

ಪ್ರಸಕ್ತ್ತ ಸಾಲಿನಲ್ಲಿ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಮಳೆ ತಡವಾಗಿ ಅಂದರೆ ಏಪ್ರಿಲ್ ಕೊನೆಯ ವಾರದಲ್ಲಿ ಹೋಬಳಿಯ ಕೆಲವು ಕಡೆಗಳಲ್ಲಿ ಬಿದ್ದಿತ್ತು. ಹೋಬಳಿಯ ಆಲೂರುಸಿದ್ದಾಪುರ ಮತ್ತು ನಿಡ್ತ ಗ್ರಾ.ಪಂ.ವ್ಯಾಪ್ತಿಯಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಮಳೆಯಾಗಿದೆ. ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಇಲ್ಲಿಯ ತನಕ ತಾ. 12ಕ್ಕೆ ಸರಾಸರಿ 5.39 ಇಂಚು ಮಳೆಯಾಗಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ 20.02 ಇಂಚು ಮಳೆಯಾಗಿತ್ತು. ಇದರಿಂದ ಕಳೆದ ಸಾಲಿನಲ್ಲಿ ಜೂನ್ ಮೊದಲ ವಾರದಲ್ಲಿ ಬತ್ತದ ಬಿತ್ತನೆ ಚಟುವಟಿಕೆ ಪೂರ್ಣಗೊಂಡಿತ್ತು. ಜೋಳದ ಬಿತ್ತನೆ ಕಾರ್ಯ ಮುಗಿದು ಜೋಳದ ಸಸಿಗಳು ಹುಲುಸಾಗಿ ಬೆಳೆದಿತ್ತು. ಆದರೆ ಈ ವರ್ಷ ಜೂನ್ 2ನೇ ವಾರ ಕಳೆದು ಹೋದರೂ ಬೀಜ ಬಿತ್ತನೆ ಮಾಡುವಷ್ಟು ಮಳೆಯಾಗದ ಹಿನ್ನೆಲೆ ಬಿತ್ತನೆ ಕಾರ್ಯಕ್ಕೆ ಹಿನ್ನೆಡೆಯಾಗಿದೆ, ಆಲೂರು-ಸಿದ್ದಾಪುರ, ನಿಡ್ತ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿರುವ ಹಿನ್ನೆಲೆಯಲ್ಲಿ ಜೋಳ ಬಿತ್ತನೆ ಕಾರ್ಯವನ್ನು ಮುಗಿಸಿದ್ದಾರೆ, ಕಳೆದ 3 ದಿನಗಳಿಂದ ಈ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗುತ್ತಿರುವದ್ದರಿಂದ ಬೆರಳೆಣಿಕೆಯಷ್ಟು ರೈತರು ಭತ್ತದ ಬಿತ್ತನೆ ಮಾಡುತ್ತಿದ್ದಾರೆ. ಉಳಿದ ಗ್ರಾ.ಪಂ. ವ್ಯಾಪ್ತಿಯಲ್ಲಿ ತೀರಾ ಕಮ್ಮಿ ಮಳೆಯಾಗಿರುವ ಹಿನ್ನೆಲೆ ಭತ್ತದ ಬಿತ್ತನೆಗಾಗಿ ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಕಾಫಿ ತೋಟಗಳಲ್ಲಿ ಈಗ ರಸಗೊಬ್ಬರ ಹಾಕುವ ಸಮಯ ಆದರೆ ಮಳೆ ಕೊರತೆಯಿಂದ ಗೊಬ್ಬರ ಹಾಕಲು ನಿರೀಕ್ಷೆಯಲ್ಲಿದ್ದಾರೆ. ಶನಿವಾರಸಂತೆ ಕೃಷಿ ಸಂಪರ್ಕ ಕೇಂದ್ರಕ್ಕೆ ವಿವಿಧ ಭತ್ತ ತಳಿಯ ಬೀಜಗಳ ದಾಸ್ತಾನುಗಳಿದ್ದು, ಕೆಲವು ರೈತರು ಬಿತ್ತನೆ ಬೀಜವನ್ನು ಖರೀದಿಸಿದ್ದಾರೆ ಮತ್ತೆ ಹೆಚ್ಚಿನ ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಮಳೆಯಾಗಿರುವದರಿಂದ ಗದ್ದೆಯಲ್ಲಿ ಭತ್ತ ಬೆಳೆಯುವ ಸಲುವಾಗಿ ಬಿತ್ತನೆ ಮಾಡಲು ಉಳುಮೆ ಮಾಡಿ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ ಬಿತ್ತನೆ ಮಾಡಲು ಸಹ ಮಳೆ ಸಾಕಾಗುತ್ತಿಲ್ಲ ಬಿತ್ತನೆ ಮಾಡಲು ನಾವು ಮಳೆಯ ನಿರೀಕ್ಷೆಯಲ್ಲಿದ್ದೇವೆ ಎಂದು ಮುಳ್ಳೂರಿನ ರೈತ ಸೋಮೇಶ್ ಹೇಳುತ್ತಾರೆ.

ಶನಿವಾರಸಂತೆ ಹೋಬಳಿ ಕೃಷಿ ಸಂಪರ್ಕ ಕೇಂದ್ರದಲ್ಲಿ ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಹೆಚ್ಚಿಗೆ ವಿವಿಧ ಭತ್ತ ತಳಿಯ ಬಿತ್ತನೆ ಬೀಜ ದಾಸ್ತಾನು ಮಾಡಿಕೊಂಡಿದ್ದೇವೆ, ಮಳೆ ಕಳೆದ ಸಾಲಿಗಿಂತ ತುಂಬಾ ಕಡಿಮೆಯಾಗಿರುವದ್ದರಿಂದ ರೈತರು ಬಿತ್ತನೆ ಬೀಜವನ್ನು ಕಳೆದ ಸಾಲಿನಷ್ಟು ಖರೀದಿ ಮಾಡಿಲ್ಲ. ತಾ. 12ಕ್ಕೆ ನಮ್ಮ ಕೃಷಿ ಸಂಪರ್ಕ ಕೇಂದ್ರದಲ್ಲಿ ಸಾಮಾನ್ಯ ಭತ್ತ ತಳಿಯಾದ ಬಿಆರ್ ತಳಿಯನ್ನು 60 ಕ್ವಿಂಟಾಲ್ ದಾಸ್ತಾನು ಮಾಡಿದ್ದು, ಇದರಲ್ಲಿ ರೈತರು 10 ಕ್ವಿಂಟಾಲ್ ಮಾತ್ರ ಖರೀದಿಸಿದ್ದಾರೆ; ಕಳೆದ ಸಾಲಿನಲ್ಲಿ 35 ಕ್ವಿಂಟಾಲ್ ದಾಸ್ತಾನಿನಲ್ಲಿ ಇದೇ ಅವಧಿಯಲ್ಲಿ ದಾಸ್ತಾನು ಪೂರ್ತಿ ಖಾಲಿಯಾಗಿತ್ತು, ಅದೆ ರೀತಿಯಲ್ಲಿ ಈ ವರ್ಷ ಅಧಿಕ ಇಳುವರಿಯ ಭತ್ತ ತಳಿಯಲ್ಲಿ 150 ಕ್ವಿಂಟಾಲು ದಾಸ್ತಾನು ಮಾಡಿಕೊಂಡಿದ್ದು, ಈಗ ರೈತರು 80 ಕ್ವಿಂಟಾಲು ಖರೀದಿ ಮಾಡಿದ್ದಾರೆ, ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ 150 ಕ್ವಿಂಟಾಲ್ ಖರೀದಿಯಾಗಿತ್ತು. ಮಳೆಯಾದ ನಂತರ ರೈತರು ಖರೀದಿಸುತ್ತಾರೆಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಕೃಷಿ ಸಂಪರ್ಕಾಧಿಕಾರಿ ಮುಕುಂದ ಹೇಳುತ್ತಾರೆ.

- ದಿನೇಶ್ ಮಾಲಂಬಿ