ಸಂಪಾಜೆ: ಮಡಿಕೇರಿ ವಿಭಾಗದ ಸಂಪಾಜೆ ವಲಯದ ದಬ್ಬಡ್ಕ ಉಪವಲಯದ ದಬ್ಬಡ್ಕ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಪ್ರಯುಕ್ತ ಮಕ್ಕಳಿಗೆ ಪರಿಸರದ ಮೇಲೆ ಹೆಚ್ಚಿನ ಆಸಕ್ತಿಯನ್ನು ಬೆಳೆಸುವ ಸಲುವಾಗಿ ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಉಪ ಅರಣ್ಯಾಧಿಕಾರಿ, ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಹೆಚ್ಚು ಹೆಚ್ಚು ಗಿಡ ನೆಡುವದರೊಂದಿಗೆ ಪರಿಸರವನ್ನು ಬೆಳೆಸಿ ಸಂರಕ್ಷಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ದಬ್ಬಡ್ಕ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಭವಾನಿಕುಮಾರ ಮಾತನಾಡಿ, ಪರಿಸರದ ಬಗ್ಗೆ ಮಕ್ಕಳಿಗೆ ಪೋಷಕರು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.
ಉಪವಲಯ ಅರಣ್ಯಾಧಿಕಾರಿ ಪಿ.ಜೆ. ರಾಘವ, ಬಸವರಾಜ, ಅರಣ್ಯ ರಕ್ಷಕರಾದ ಕೆ.ಪಿ. ಜೋಯಪ್ಪ, ಎಂ.ಎಸ್. ಪುನಿತ್, ಸಿಬ್ಬಂದಿಗಳಾದ ಕಾರ್ತಿಕ್, ಹೂವಪ್ಪ, ರವೀಂದ್ರ, ವೆಂಕಟರಮಣ, ಶಂಕರ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.ಗೋಣಿಕೊಪ್ಪ ವರದಿ: ಮಂಚಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಣ್ಣುಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ಶಾಲೆಯ ಭೂಮಿಕ ಇಕೋ ಕ್ಲಬ್ ಮೂಲಕ ವಿದ್ಯಾರ್ಥಿಗಳು ಮಾವು, ನೇರಳೆ, ಹಲಸು ಗಿಡಗಳನ್ನು ನೆಟ್ಟರು. ಮುಖ್ಯಶಿಕ್ಷಕ ಕೆ.ಎಂ. ಸೋಮಯ್ಯ, ಶಿಕ್ಷಕರು, ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗೆ ಮರಗಳ ರಕ್ಷಣೆ ಬಗ್ಗೆ ಸಲಹೆ ನೀಡಲಾಯಿತು.ಶನಿವಾರಸಂತೆ: ಸಮೀಪದ ಅಂಕನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡುವ ಮೂಲಕ ಕರ್ನಾಟಕ ಕಾವಲು ಪಡೆ ಜಿಲ್ಲಾ ಘಟಕದ ವತಿಯಿಂದ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ನಂತರ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾವಲು ಪಡೆ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಕೃಷ್ಣ ವಹಿಸಿ ಮಾತನಾಡಿದರು. ಈ ಸಂದರ್ಭ ಶಾಲೆಯ 75 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು. ಕುಶಾಲನಗರ ನಗರ ಘಟಕದ ಅಧ್ಯಕ್ಷೆ ಮಂಜುಳಾ, ಸೋಮವಾರಪೇಟೆ ತಾಲೂಕು ಘಟಕದ ಉಪಾಧ್ಯಕ್ಷೆ ಇಂದಿರಾ, ಜಿಲ್ಲಾ ಘಟಕದ ಸದಸ್ಯ ಶಿವು, ಶಾಲಾ ಮುಖ್ಯ ಶಿಕ್ಷಕಿ ಸಾವಿತ್ರ, ಸಹಶಿಕ್ಷಕಿ ವಸ್ತಲಾ ಹಾಗೂ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.