ಮಡಿಕೇರಿ, ಜೂ. 16: ಇಲ್ಲಿಗೆ ಸಮೀಪದ ಕೆ. ನಿಡುಗಣೆ ಗ್ರಾಮ ವ್ಯಾಪ್ತಿಯಲ್ಲಿ 808 ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿರುವ ಪ್ರಕರಣವನ್ನು ಲೋಕಾಯುಕ್ತ ಅಥವಾ ಎಸಿಬಿ ತನಿಖೆಗೆ ಒಳಪಡಿಸಬೇಕೆಂದು ಮಾಜಿ ಸಚಿವ ಯಂ.ಸಿ. ನಾಣಯ್ಯ ಒತ್ತಾಯಿಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಸುಧೀರ್ಘ ಪತ್ರ ಬರೆದಿದ್ದಾರೆ.

ಪತ್ರದ ಸಾರಾಂಶ ಇಂತಿದೆ

ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಒಡೆತನದಲ್ಲಿರುವ 57.75 ಎಕರೆ ಜಮೀನುಗಳಲ್ಲಿ ಮಡಿಕೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮರ ಕಡಿತಲೆಗೆ ಕಾನೂನು ಬಾಹಿರವಾಗಿ ಆದೇಶಿಸಿದ ಹಿನ್ನೆಲೆಯಲ್ಲಿ ಕೆಲವು ದಿವಸಗಳ ಹಿಂದೆ ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಮರ ಕಡಿದಿರುವದರ ಬಗ್ಗೆ ಶಕ್ತಿ ದಿನಪತ್ರಿಕೆಯಲ್ಲಿ ಬಂದ ವರದಿಯನ್ನು ತಾವು ಗಮನಿಸಿದ್ದೀರಿ ಎಂದು ನಾನು ಭಾವಿಸಿದ್ದೇನೆ. ಈ ಒಂದು ಅಕ್ರಮ ಮರಗಳ ಹನನದ ಬಗ್ಗೆ ದೊಡ್ಡ ಪ್ರಮಾಣದ ಪ್ರತಿಭಟನೆ ಸಾರ್ವಜನಿಕರಿಂದ ಬಂದ ಹಿನ್ನೆಲೆಯಲ್ಲಿ ತಾವು ಜಿಲ್ಲಾಡಳಿತದ ಮುಖ್ಯಸ್ಥರಾಗಿ ಈ ಮರಗಳ ಹನನವನ್ನು ಸ್ಥಗಿತಗೊಳಿಸಿರುವದು ಸ್ವಾಗತಾರ್ಹವಾದ ಬೆಳವಣಿಗೆ.

ಕಳಕೇರಿ ನಿಡುಗಣೆ ಪ್ರದೇಶದಲ್ಲಿ 2015-2016 ನೇ ವರ್ಷದಲ್ಲಿ ಅಂದಿನ ಕೊಡಗು ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಲಿಂಗರಾಜುರವರು ಈ ಕಳಕೇರಿ ನಿಡುಗಣೆ ಪ್ರದೇಶದಲ್ಲಿ ಮರಗಳ ಹನನಕ್ಕೆ ತಿರಸ್ಕರಿಸಿ ಆದೇಶಿಸಿದ್ದರೂ ಕೂಡ ಹಾಲಿ ಇರುವ ಉಪಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ಹಿರಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದ ಲಿಂಗರಾಜು ಅವರ ಆದೇಶ ಕಡತದಲ್ಲಿ ಇದ್ದರೂ ಕೂಡ ಆದೇಶವನ್ನು ಉಲ್ಲಂಘಿಸಿ ಸ್ಥಗಿತಗೊಂಡಿದ್ದ ಕಡತಕ್ಕೆ ಏಕಪಕ್ಷೀಯವಾಗಿ ಮತ್ತು ಕಾನೂನುಬಾಹಿರವಾಗಿ ಜೀವ ಕೊಟ್ಟು ಮಡಿಕೇರಿ ವಲಯ ಅರಣ್ಯಾಧಿಕಾರಿಗಳಿಗೆ 811 ಮರಗಳನ್ನು ಕಡಿಯಲು ಅನುಮತಿ ಕೊಟ್ಟಿರುವದು ಕಾನೂನು ಬಾಹಿರ. ಅಲ್ಲದೆ ಇಂತಹ ಒಂದು ಆದೇಶ ಕಾನೂನು ಸಮ್ಮತವಲ್ಲ ಇತರ ಕಾರಣಗಳಿಗೋಸ್ಕರ ಕೊಟ್ಟಿರುವ ಆದೇಶವೆಂದೇ ಭಾವಿಸಬೇಕಾಗಿದೆ. ಕಾನೂನುಬಾಹಿರ ಆದೇಶವನ್ನು ಮಾಡಿರುವ ಹಾಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ವಿರುದ್ಧ ಕಾನೂನಿನಡಿಯಲ್ಲಿ ತನಿಖೆಗೆ ಕೂಡ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಬೇಕೆಂದು ಕೋರಿದ್ದಾರೆ.

ಪತ್ರವನ್ನು ತಾ. 4.2.2019 ರಂದು ಮೂಡಾ ಕಚೇರಿಯಲ್ಲಿ ಸ್ವೀಕರಿಸಲಾಗಿದೆ. ಪತ್ರದಲ್ಲಿ ಜಮೀನು ಕೃಷಿ ಜಮೀನಾಗಿಯೇ ಉಳಿದುಕೊಂಡಿರುವದಾಗಿಯೂ ಮತ್ತು 57.75 ಎಕರೆ ಜಮೀನಿನಲ್ಲಿ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲು ತಮ್ಮ ಅನುಮತಿಯನ್ನು ಕೋರಿದ ಹಿನ್ನೆಲೆಯಲ್ಲಿ ತಾವು ಪತ್ರದಲ್ಲಿ ಕೋರಿರುವ ಭೂ ಪರಿವರ್ತನೆಯ ಕೋರಿಕೆ ತಮ್ಮ ಪರಿಶೀಲನೆಯ ಹಂತದಲ್ಲಿಯೇ ಇರುವ ಸಂದರ್ಭದಲ್ಲಿ ಮಡಿಕೇರಿ ವೃತ್ತದ ಉಪಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ಆದೇಶ ಇಲ್ಲದೆ 811 ಮರಗಳ ಹನನವನ್ನು ಮಾಡಲು ಕೊಟ್ಟಿರುವ ಆದೇಶ ಸಂಪೂರ್ಣವಾಗಿ ಕಾನೂನು ಬಾಹಿರ ಅಲ್ಲವೇ ಎಂಬವದರ ಬಗ್ಗೆ ತಾವು ಸಂಪೂರ್ಣವಾಗಿ ತಮ್ಮ ಗಮನವನ್ನು ಮತ್ತು ತುರ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಿರೆಂದು ನಾನು ಭಾವಿಸುತ್ತೇನೆ. ಈ ಕಾರಣದಿಂದಲೂ ಕೂಡ ತಾವು ಮರಗಳ ಹನನವನ್ನು ಸ್ಥಗಿತಗೊಳಿಸಿರುವದು ಅರಣ್ಯ ಸಂರಕ್ಷಣೆ, ಪರಿಸರದ ರಕ್ಷಣೆಯ ಹಿತದೃಷ್ಟಿಯಿಂದ ಶ್ಲಾಘನೀಯವಾದ ಕ್ರಮ. ಮುಖ್ಯಮಂತ್ರಿಗಳು ಕೂಡ ಮರಗಳ ಹನನವನ್ನು ಸ್ಥಗಿತಗೊಳಿಸಲು ಆದೇಶಿಸಿರುವ ಹಿನ್ನೆಲೆಯಲ್ಲಿ ತಾವು ಈ ಕಾನೂನು ಬಾಹಿರ ಮರಗಳ ಹನನದ ಬಗ್ಗೆ ತುರ್ತು ಶಿಸ್ತಿನ ಕ್ರಮವನ್ನು ಕೂಡ ಕೈಗೊಳ್ಳಬೇಕೆಂದು ಕೋರುತ್ತೇನೆ.

ಕರ್ನಾಟಕ ಭೂ ಸುಧಾರಣಾ ಕಾಯ್ದೆ 79(ಎ), 79(ಬಿ) ವಿಧಿಗಳ ಸಾರಾಸಗಟು ಉಲ್ಲಂಘನೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಿಗನಿಂದ ಹಿಡಿದು ಉಪವಿಭಾಗಾಧಿಕಾರಿಗಳವರೆಗೂ ಕೂಡ ಬಹಳ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬದರ ಬಗ್ಗೆ ಗಮನ ಸೆಳೆದಿದ್ದಾರೆ.

ಕರ್ನಾಟಕ ಉಚ್ಛ ನ್ಯಾಯಾಲಯದ 1992ರ ಪೂರ್ಣ ಪ್ರಮಾಣದ ತೀರ್ಪಿನಡಿಯಲ್ಲಿ ಯಾವದೇ ಕೃಷಿ ಜಮೀನು - ಬಾಣೆ, ಪರಾಧೀನ ಸಾಗು ಬಾಣೆ, ಸಾಗು ಬಾಣೆ, ಜಮ್ಮಾ ಬಾಣೆ, ಸಂಪೂರ್ಣವಾಗಿ ಕಾಫಿ, ಏಲಕ್ಕಿ, ಒಳ್ಳೆಮೆಣಸು, ಕಿತ್ತಳೆ, ಕೃಷಿಗೆ ಒಳಪಟ್ಟಿದ್ದರೆ ಮಾತ್ರ ಅಂತಹ ಕೃಷಿ ಜಮೀನುಗಳನ್ನು ಕೃಷಿಗೆ ಒಳಪಡಿಸಲಾಗಿದೆಯೇ ಅಥವಾ ಇಲ್ಲವೇ ಎಂಬವದನ್ನು ತಾಲೂಕು ತಹಶೀಲ್ದಾರ್‍ಗಳು ಖುದ್ದಾಗಿ ಪರಿವೀಕ್ಷಿಸಿ ಕೃಷಿ ಜಮೀನುಗಳು ಕೃಷಿಗೆ ಒಳಪಟ್ಟಿದ್ದರೆ ಸದರಿ ಜಮೀನುಗಳನ್ನು ಕಂದಾಯಕ್ಕೆ ಒಳಪಡಿಸಬಹುದು ಎಂಬ ಶಿಫಾರಸ್ಸನ್ನು ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಬೇಕು. ಉಪವಿಭಾಗಾಧಿಕಾರಿಗಳು ತಹಶೀಲ್ದಾರರ ಈ ಶಿಫಾರಸ್ಸನ್ನು ಒಪ್ಪುವದಕ್ಕೆ ಮೊದಲು ಅವರು ಕೂಡ ಖುದ್ದಾಗಿ ಜಮೀನುಗಳು ಕೃಷಿಗೆ ಒಳಪಟ್ಟಿದೆಯೇ ಎಂಬದನ್ನು ಪರಿಶೀಲಿಸಿ ಖಾತರಿಮಾಡಿಕೊಂಡ ಮೇಲೆ ಮಾತ್ರ ಕಂದಾಯಕ್ಕೆ ಒಳಪಡಿಸಲು ಆದೇಶಿಸಬೇಕು.

ಆದರೆ ಪತ್ರದಲ್ಲಿ ಕಾಣಿಸಿರುವ ಎಲ್ಲಾ ಕೃಷಿ ಜಮೀನುಗಳು ಮತ್ತು ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಒಡೆತನದಲ್ಲಿರುವ ಕಳಕೇರಿ ನಿಡುಗಣೆ ಗ್ರಾಮದ 57.75 ಎಕರೆ ಜಮೀನುಗಳು ಯಾವದೇ ಕೃಷಿಗೆ ಒಳಪಡದೆ ಇರುವ ಹಚ್ಚಹಸಿರಿನ ಕೃಷಿ ಜಮೀನುಗಳಾಗಿಯೇ ಇವತ್ತಿಗೂ ಕೂಡ ಉಳಿದಕೊಂಡಿರುವದನ್ನು ಗಮನಿಸಿದಾಗ ಮಡಿಕೇರಿ ತಾಲೂಕಿನ ಕಂದಾಯ ಇಲಾಖೆಯ ಕೆಳಹಂತದ ಅಧಿಕಾರಿಗಳಾದ ಗ್ರಾಮ ಲೆಕ್ಕಿಗರಿಂದ ಹಿಡಿದು ಉಪವಿಭಾಗಾಧಿಕಾರಿಗಳವರೆಗೆ ಎಲ್ಲಾ ಹಂತದಲ್ಲಿಯೂ ಕೂಡ ಕೃಷಿಗೆ ಒಳಪಟ್ಟಿರುವ ಜಮೀನುಗಳೆಂದು ಸುಳ್ಳು ದಾಖಲೆಗಳನ್ನು ನಿರ್ಮಿಸಿ ಸುಳ್ಳು ದಾಖಲೆಗಳನ್ನು ಮತ್ತು ಸುಳ್ಳು ಮಹಜರುಗಳನ್ನು ಹಾಗೂ ಸುಳ್ಳು ಶಿಫಾರಸ್ಸುಗಳನ್ನು ಮಾಡಿ ಕಾನೂನುಬಾಹಿರವಾಗಿ ಕಂದಾಯಕ್ಕೆ ಒಳಪಡಿಸಿರುವದು ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ನಗ್ನ ಪ್ರದರ್ಶನವೆಂದೇ ಭಾವಿಸಬೇಕಾಗಿದೆ. ಇವರ ಬಗ್ಗೆಯೂ ಕೂಡ ತಾವು ತಮ್ಮ ತುರ್ತು ಗಮನವನ್ನು ಹರಿಸಬೇಕಾಗಿ ಮನವಿ ಮಾಡಿದ್ದಾರೆ.

ಈ ಎಲ್ಲಾ ಪ್ರಕರಣಗಳ ಬಗ್ಗೆ ಅದರಲ್ಲಿಯೂ ಪ್ರಮುಖವಾಗಿ ಕಳಕೇರಿ ನಿಡುಗಣೆಯ ಕೃಷಿ ಜಮೀನಿನ 811 ಮರಗಳ ಕಾನೂನುಬಾಹಿರ ಹನನದ ಬಗ್ಗೆ ಮತ್ತು ಅದಕ್ಕೆ ಪೂರಕವಾದ ಭ್ರಷ್ಟಾಚಾರದ ಬಗ್ಗೆ ಸಮಗ್ರವಾದ ತನಿಖೆಯಿಂದ ಮಾತ್ರ ಸಾಧ್ಯ. ಈ ಮೇಲಿನ ಕಾರಣಗಳಿಂದ ಎಲ್ಲಾ ಪ್ರಕರಣಗಳನ್ನು ಭ್ರಷ್ಟಾಚಾರದ ನಿಯಂತ್ರಣ ವಿಭಾಗಕ್ಕಾಗಲಿ (ಎಸಿಬಿ) ಅಥವಾ ಕರ್ನಾಟಕ ಲೋಕಾಯುಕ್ತಕ್ಕಾಗಲಿ ಕೂಡಲೇ ತನಿಖೆಗೆ ಕೋರಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಹಿಂದಿನ ಉಪವಿಭಾಗಾಧಿಕಾರಿಗಳಾಗಿದ್ದ ಡಾ.ಎಂ.ಆರ್. ರವಿ ಹಾಗೂ ಅಭಿರಾಂಶಂಕರ್ ಅವರುಗಳಿಗೆ ಬರೆದಿದ್ದ ಪತ್ರಗಳ ನಕಲನ್ನು ಲಗತ್ತಿಸಿ ಗಮನ ಸೆಳೆದಿದ್ದಾರೆ.